ಬರ ಪರಿಸ್ಥಿತಿ ಸಮರ್ಥವಾಗಿ ಎದುರಿಸಿ: ಅಧಿಕಾರಿಗಳಿಗೆ ಸಚಿವ ಯತೀಂದ್ರ ಸೂಚನೆ

ಬರ ಪರಿಸ್ಥಿತಿ ಸಮರ್ಥವಾಗಿ ಎದುರಿಸಿ: ಅಧಿಕಾರಿಗಳಿಗೆ ಸಚಿವ ಯತೀಂದ್ರ ಸೂಚನೆ

ಬರ ಪರಿಸ್ಥಿತಿ ಸಮರ್ಥವಾಗಿ ಎದುರಿಸಿ: ಅಧಿಕಾರಿಗಳಿಗೆ ಸಚಿವ ಯತೀಂದ್ರ ಸೂಚನೆ

ಮೈಸೂರು: ‘ಜಿಲ್ಲೆಯಲ್ಲಿ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಅಗತ್ಯವಿರುವ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಬೇಕು. ಜನರು, ಜಾನುವಾರುಗೆ ಕುಡಿಯುವ ನೀರು ಪೂರೈಕೆಯಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳಬೇಕು’ ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಸೂಚಿಸಿದರು.

ಇಲ್ಲಿನ ಶಾರದಾದೇವಿನಗರದಲ್ಲಿರುವ ಮಹಾನಗರಪಾಲಿಕೆ ವಲಯ ಕಚೇರಿ 3–ರಲ್ಲಿ ಗುರುವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸಾರ್ವಜನಿಕರು ನೀರು ಅಥವಾ ಇತರ ಮೂಲ ಸೌಲಭ್ಯಗಳ ಕೊರತೆ ಎದುರಿಸದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯಗಳು ಮತ್ತು ಪರಿಹಾರ ಫಲಾನುಭವಿಗಳಿಗೆ ತಲುಪುವಂತೆ ನಿಗಾ ವಹಿಸಬೇಕು’ ಎಂದು ನಿರ್ದೇಶನ ನೀಡಿದರು.

‘ಇಲಾಖೆಗಳ ನಡುವೆ ಸಮನ್ವಯ ಇರಬೇಕು. ಜನರ ಹಿತಾಸಕ್ತಿಯನ್ನು ಆದ್ಯತೆಯಾಗಿ ಪರಿಗಣಿಸಿ ತ್ವರಿತ ಹಾಗೂ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು’ ಎಂದರು.

‘ಜಿಲ್ಲೆಯಲ್ಲಿ ಶೇ 58ರಷ್ಟು ಮಳೆಯ ಕೊರತೆಯಾಗಿದೆ. ಕಳೆದ 3 ದಿನಗಳಿಂದ ಮಳೆ ಆಗುತ್ತಿದ್ದು, ಜಲಾಶಯದಿಂದ ಬಿಡಲಾಗುವ ನೀರನ್ನು ಆದ್ಯತೆಯ ಮೇಲೆ ಕೆರೆಗಳನ್ನು ತುಂಬಿಸಲು ಬಳಸಬೇಕು’ ಎಂದು ಸೂಚಿಸಿದರು.

‘ಮುಂದಿನ ವರ್ಷದ ಜೂನ್‌ವರೆಗೆ ಬರ ಪರಿಸ್ಥಿತಿ ಎದುರಿಸಬೇಕಾಗಬಹುದು. ಇದನ್ನು ನಿರ್ವಹಿಸಲು ಅಧಿಕಾರಿಗಳು ಸನ್ನದ್ಧರಾಗಬೇಕು. ಕೆರೆಗೆ ನೀರು ತುಂಬಿಸುವುದರಿಂದ ಆಯಾ ಭಾಗದ ಕೊಳವೆಬಾವಿಗಳಲ್ಲಿ ನೀರು ದೊರೆಯುತ್ತದೆ. ನಗರ ಪ್ರದೇಶದ ಚಿತ್ರಣ ಬೇರೆ ಇದ್ದು, ಕೊಳವೆಬಾವಿಗಳ ಮರುಪೂರಣಕ್ಕೆ ಚಿಂತನೆ ನಡೆಸಬೇಕಿದೆ’ ಎಂದರು.

‘ಬರಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಹೊಸದಾಗಿ ಕೊಳವೆಬಾವಿ ಕೊರೆಸಿದಾಗ ಹಾಗೂ ಕುಡಿಯುವ ನೀರಿನ ಮೂಲಗಳಲ್ಲಿನ ಮಾದರಿಗಳನ್ನು ಸಂಗ್ರಹಿಸಿ ರಾಸಾಯನಿಕ ಹಾಗೂ ಜೈವಿಕ ಪರೀಕ್ಷೆಗಳನ್ನು ನಿಯಮಿತವಾಗಿ ನಡೆಸಬೇಕು’ ಎಂದು ತಿಳಿಸಿದರು.

‘ಹೆಚ್ಚಿನ ನೀರಿನ ಬೇಡಿಕೆ ಇರುವ ಭತ್ತ, ಕಬ್ಬು ಮೊದಲಾದ ಬೆಳೆಗಳನ್ನು ಈಗ ಬೆಳೆಯದಂತೆ ಈಗಾಗಲೇ ಕೃಷಿ ಇಲಾಖೆಯಿಂದ ರೈತರಿಗೆ ತಿಳಿಸಲಾಗಿದೆ. ಪರ್ಯಾಯ ಬೆಳೆಗಳಾದ ರಾಗಿ, ಜೋಳ, ಸಿರಿಧಾನ್ಯ ಮೊದಲಾದವುಗಳನ್ನು ಬೆಳೆಯಲು ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದೆ. ರೈತರು ಇದಕ್ಕೆ ಸಹಕರಿಸಬೇಕು’ ಎಂದು ಕೋರಿದರು.

‘ಬರಗಾಲ ಮುಂದುವರಿದಲ್ಲಿ ಕೊಳವೆಬಾವಿಗಳಲ್ಲಿನ ನೀರಿನ ಪ್ರಮಾಣ ಕ್ಷೀಣಿಸಬಹುದು. ನಂತರ ಟ್ಯಾಂಕರ್ ಅವಲಂಬಿಸಬೇಕಾಗುತ್ತದೆ. ಅಧಿಕಾರಿಗಳು ಇದಕ್ಕೆ ತಕ್ಕಂತೆ ಕಾರ್ಯಯೋಜನೆ ಸಿದ್ಧಪಡಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ‘ಎಲ್ಲಾ ಕೆರೆಗಳಿಗೂ ಸಮಾನವಾಗಿ ನೀರು ಹಂಚಿಕೆ ಮಾಡಬೇಕು. ನಗರ ಸ್ಥಳೀಯ ಸಂಸ್ಥೆಗಳು ಕಸವನ್ನು ಸರಿಯಾಗಿ ವಿಲೇವಾರಿ ಮಾಡಲು ಕ್ರಮ ವಹಿಸಬೇಕು’ ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ‘ಹೂಟಗಳ್ಳಿಯ 6 ವಾರ್ಡ್‌ಗಳಿಗೆ 6 ಟ್ಯಾಂಕರ್, ಬೋಗಾದಿಯ 2 ವಾರ್ಡ್‌ಗೆ 3 ಟ್ಯಾಂಕರ್, ರಮ್ಮನಳ್ಳಿಯ 5 ವಾರ್ಡ್‌ಗಳಿಗೆ 5 ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ರೈತರು ಕಳೆದ ಸಾಲಿನಲ್ಲಿ 2.22 ಲಕ್ಷ ಹೆಕ್ಟೇರ್‌ ಭೂಮಿಯಲ್ಲಿ ಬಿತ್ತನೆ ಮಾಡಿದ್ದರು. ಈ ಬಾರಿ ಈವರೆಗೆ 1.66 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರವೇ ಬಿತ್ತನೆಯಾಗಿದೆ’ ಎಂದು ಮಾಹಿತಿ ನೀಡಿದರು.

ಶಾಸಕ ದರ್ಶನ್ ಧ್ರುವನಾರಾಯಣ್, ಜಿಲ್ಲಾ ಪಂಚಾಯಿತಿ ಸಿಇಒ ಎಸ್. ಯುಕೇಶ್ ಕುಮಾರ್, ಮಹಾನಗರ ಪಾಲಿಕೆ ಆಯುಕ್ತೆ ಎಂ.ಕೆ. ಸವಿತಾ, ಮೈಸೂರು ತಹಶೀಲ್ದಾರ್ ಮಹೇಶ್‌ಕುಮಾರ್ ಉಪಸ್ಥಿತರಿದ್ದರು.

ಅಂಬೇಡ್ಕರ್‌ ಪ್ರತಿಮೆಗೆ ನಮನ

ಸಚಿವರು ಗಾಂಧಿನಗರದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಬಳಿಕ ಉರಿಲಿಂಗಪೆದ್ದಿ ಮಠಕ್ಕೆ ಭೇಟಿ ನೀಡಿ, ಜ್ಞಾನಪ್ರಕಾಶ ಸ್ವಾಮೀಜಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಮಾಜಿ ಸಚಿವ ದಿವಂಗತ ವಿ. ಶ್ರೀನಿವಾಸಪ್ರಸಾದ್ ಅವರ ಜನ್ಮದಿನದ ಅಂಗವಾಗಿ ಅಶೋಕಪುರಂನ ಸಮಾಧಿ ಸ್ಥಳಕ್ಕೆ ತೆರಳಿ ಪುಷ್ಪನಮನ ಸಲ್ಲಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ