'ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನಕ್ಕೆ ಚಾಲನೆ: ಕಸದ ಬುಟ್ಟಿ ಹೊತ್ತ ಸಿಎಂ
ಬೆಂಗಳೂರು: ನಗರದ ರಸ್ತೆ ಬದಿಗಳಲ್ಲಿ ಅನಧಿಕೃತವಾಗಿ ಬಿಸಾಡಲಾಗಿರುವ ನಿರ್ಮಾಣ ಹಾಗೂ ಅವಶೇಷ ತ್ಯಾಜ್ಯವನ್ನು ತೆರವುಗೊಳಿಸುವ ಉದ್ದೇಶದಿಂದ ಆರಂಭಿಸಲಾಗಿರುವ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶನಿವಾರ ಚಾಲನೆ ನೀಡಿದರು.
ಅಭಿಯಾನದಲ್ಲಿ ‘ಜಿಬಿಎ’ಯ ಐದು ನಗರ ಪಾಲಿಕೆಗಳು, ಬೆಸ್ಕಾಂ, ಬೆಂಗಳೂರು ಜಲಮಂಡಳಿ, ಬೆಂಗಳೂರು ಮೆಟ್ರೊ ರೈಲು ನಿಗಮ ಸೇರಿದಂತೆ ವಿವಿಧ ಸರ್ಕಾರಿ ಸಂಸ್ಥೆಗಳು ಒಟ್ಟಾಗಿ ಕಾರ್ಯನಿರ್ವಹಿಸಲಿವೆ.
ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ‘ಬೆಂಗಳೂರು ಸರ್ಕಾರದ ಆಸ್ತಿ ಮಾತ್ರವಲ್ಲ, ಇಲ್ಲಿನ ನಾಗರಿಕರದ್ದೂ ಆಗಿದೆ. ನಗರವನ್ನು ಸ್ವಚ್ಛವಾಗಿಡುವುದು ನಮ್ಮ ಕರ್ತವ್ಯ. ಆದರೆ ಸಾರ್ವಜನಿಕರೂ ನಾಗರಿಕ ಪ್ರಜ್ಞೆ ತೋರಿಸಿ ಸ್ವಚ್ಛತೆಯನ್ನು ಕಾಪಾಡುವ ಜವಾಬ್ದಾರಿ ವಹಿಸಬೇಕು’ ಎಂದು ಹೇಳಿದರು.
ಈ ಅಭಿಯಾನದ ಮೂಲಕ ನಗರದ ಸ್ವಚ್ಛತೆ, ಸೌಂದರ್ಯ ಹಾಗೂ ಸಾರ್ವಜನಿಕ ಆರೋಗ್ಯಕ್ಕೆ ಆದ್ಯತೆ ನೀಡಲಾಗುತ್ತಿದ್ದು, ಬೆಂಗಳೂರು ನಗರವನ್ನು ತ್ಯಾಜ್ಯ ಮುಕ್ತ ಹಾಗೂ ಮಾದರಿ ಮಹಾನಗರವನ್ನಾಗಿ ರೂಪಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ತಿಳಿಸಿದರು.
ರಸ್ತೆ ಬದಿಯಲ್ಲಿ ನಿರ್ಮಾಣ ತ್ಯಾಜ್ಯ ಸುರಿಯುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮುಖ್ಯಮಂತ್ರಿ ಸೂಚನೆ ನೀಡಿದರು.
ಪ್ರಾಥಮಿಕ ಅಂದಾಜಿನ ಪ್ರಕಾರ, ಬೆಂಗಳೂರಿನ 1,616 ಸ್ಥಳಗಳಲ್ಲಿ ಸುಮಾರು 22,732 ಟನ್ ನಿರ್ಮಾಣ ತ್ಯಾಜ್ಯ ರಸ್ತೆ ಬದಿಯಲ್ಲಿ ಬಿದ್ದಿದೆ. ಆದರೆ, ನೈಜ ಪ್ರಮಾಣ ಇದಕ್ಕಿಂತಲೂ ಹೆಚ್ಚಿರಬಹುದು. ವರ್ಷಗಳಿಂದ ನಿಯಮಬಾಹಿರವಾಗಿ ನಿರ್ಮಾಣ ತ್ಯಾಜ್ಯವನ್ನು ಎಸೆಯಲಾಗುತ್ತಿದೆ. ಅನೇಕ ಸ್ಥಳಗಳು ಆರೋಗ್ಯಕ್ಕೆ ಅಪಾಯಕಾರಿಯಾಗಿವೆ. ಇವೆಲ್ಲವನ್ನು ಈಗ ತೆರವುಗೊಳಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಇಂಧನ ಸಚಿವ ಕೆ.ಜೆ ಜಾರ್ಜ್, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಎಸ್.ಆರ್ ವಿಶ್ವನಾಥ್ ಹಾಗೂ ಎ.ಸಿ ಶ್ರೀನಿವಾಸ್, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಾದ ಎಂ. ಮಹೇಶ್ವರ್ ರಾವ್, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.