
ಸಿಎಂ ಆದ ಬಳಿಕ ಮೊದಲ ಬಾರಿ ಮೈಸೂರಿಗೆ ಭೇಟಿ: ಡಿಕೆಶಿಗೆ ಅದ್ದೂರಿ ಸ್ವಾಗತ
ಮೈಸೂರು: ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ ಡಿ.ಕೆ. ಶಿವಕುಮಾರ್ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಮೆರವಣಿಗೆ ಮೂಲಕ ಸ್ವಾಗತಿಸಿದರು.
ನಗರದ ಕಾರಂಜಿಕೆರೆ ವೃತ್ತದ ಬಳಿ ಜಮಾವಣೆಗೊಂಡ ಪಕ್ಷದ ಕಾರ್ಯಕರ್ತರು ಡಿಕೆಶಿ ಅವರನ್ನು ಸ್ವಾಗತಿಸಿ ಮೆರವಣಿಗೆ ನಡೆಸಿದರು. ಡಿಕೆಶಿ ಭಾವಚಿತ್ರ ಹಿಡಿದು ಘೋಷಣೆ ಕೂಗಿದರು. ಅಭಿಮಾನಿಯೊಬ್ಬರು ನೊಣವಿನಕೆರೆ ಅಜ್ಜಯ್ಯನ ಫೋಟೊ ಫ್ರೇಮ್ ಹಿಡಿದು ನಿಂತಿದ್ದರು. ನಗರದ ವಿವಿಧೆಡೆ ಮುಖ್ಯಮಂತ್ರಿಗೆ ಸ್ವಾಗತ ಕೋರುವ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು.
ಇದಕ್ಕೂ ಮುನ್ನ ಕಾಂಗ್ರೆಸ್ ಮುಖಂಡರು ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿಯನ್ನು ಆತ್ಮೀಯವಾಗಿ ಸ್ವಾಗತಿಸಿದರು. ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ, ಚಾಮರಾಜನಗರ ಸಂಸದ ಸುನಿಲ್ ಬೋಸ್, ಶಾಸಕರಾದ ತನ್ವೀರ್ ಸೇಠ್, ಕೆ. ಹರೀಶ್ ಗೌಡ, ರವಿಶಂಕರ್, ಅನಿಲ್ ಚಿಕ್ಕಮಾದು ಮೊದಲಾದವರು ಶುಭಾಶಯ ಕೋರಿದರು.
ಡಿ.ಕೆ. ಶಿವಕುಮಾರ್ ಅವರನ್ನು ಸ್ವಾಗತಿಸುವ ಸಲುವಾಗಿ ಜುಲೈ 31ರಂದು ನಗರದಲ್ಲಿ ಬೃಹತ್ ಸಮಾವೇಶ ಅಯೋಜಿಸಲು ಕಾಂಗ್ರೆಸ್ ನಿರ್ಧರಿಸಿತ್ತು. ಆದರೆ ಪ್ರಧಾನಿ ಭೇಟಿ, ಭದ್ರತೆ ಮೊದಲಾದ ಕಾರಣಗಳಿಂದ ಕಾರ್ಯಕ್ರಮ ರದ್ದುಗೊಳಿಸಲಾಯಿತು.