ಯುವಜನರ ದಾರಿತಪ್ಪಿಸಬೇಡಿ: ಸಿನಿಮಾ ದೃಶ್ಯ ಬಳಸಿ ಟ್ರೋಲ್ ಮಾಡಿದವರಿಗೆ ಕಂಗನಾ ರನೌತ್
ನವದೆಹಲಿ: ಕಾಕ್ರೋಚ್ ಜನತಾ ಪಕ್ಷದ ಬಗ್ಗೆ ಟೀಕಿಸಿದ್ದ ನಟಿ, ಬಿಜೆಪಿ ಸಂಸದೆ ಕಂಗನಾ ರನೌತ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗಿತ್ತು. ಕಂಗನಾ ನಟನೆಯ ಹಳೆಯ ಸಿನಿಮಾಗಳ ತುಣುಕುಗಳನ್ನು ಹಂಚಿಕೊಂಡು ಟೀಕಿಸಲಾಗುತ್ತಿದೆ.
ಇದರ ಬಗ್ಗೆ ಪ್ರತಿಕ್ರಿಯಿಸಿರುವ ಕಂಗನಾ ಖಡಕ್ ಆಗಿ ಉತ್ತರಿಸಿದ್ದಾರೆ.
ಇನ್‌ಸ್ಟಾಗ್ರಾಂ ಸ್ಟೋರಿ ಹಂಚಿಕೊಂಡ ಕಂಗನಾ, ‘ನಾನು ಕೋಟ್ಯಂತರ ರೂಪಾಯಿ ಸಂಭಾವನೆ ಪಡೆದು ಅಭಿನಯಿಸುವ ಸಿನಿಮಾದ ದೃಶ್ಯಗಳನ್ನು, ನನ್ನ ಸುತ್ತಲೂ ಬಾಡಿಗಾರ್ಡ್‌ಗಳು, ಈವೆಂಟ್ ಪ್ಲಾನರ್‌ಗಳು ಮತ್ತು ಸೆಕ್ಯೂರಿಟಿಗಳಿರುವ ಅದ್ದೂರಿ ಕಾರ್ಯಕ್ರಮಗಳ ವಿಡಿಯೊಗಳನ್ನು ನೀವು ಬಳಸಿಕೊಳ್ಳುತ್ತಿದ್ದೀರಿ. ಇವುಗಳನ್ನು ತೋರಿಸಿ, ಯಾವುದೇ ಭದ್ರತೆ ಇಲ್ಲದ ಹದಿಹರೆಯದ ಸಾಮಾನ್ಯ ಹೆಣ್ಣುಮಕ್ಕಳು ರಸ್ತೆಗಳಲ್ಲಿ, ಶಾಲಾ ಕಾರ್ಯಕ್ರಮಗಳಲ್ಲಿ ಅಥವಾ ಸಣ್ಣಪುಟ್ಟ ಕ್ಲಬ್‌ಗಳಲ್ಲಿ ಇದೇ ರೀತಿ ಇರಬಹುದು ಎಂದು ನಂಬಿಸಲು ಹೊರಟಿದ್ದೀರಾ, ಎರಡೂ ಒಂದೇ ರೀತಿ ಎಂದುಕೊಂಡಿದ್ದೀರಾ’ ಎಂದು ಕಂಗನಾ ಪ್ರಶ್ನಿಸಿದ್ದಾರೆ.
‘ಯುವಜನರ ದಾರಿ ತಪ್ಪಿಸಬೇಡಿ, ಸಿನಿಮಾ ಅಥವಾ ಚಿತ್ರರಂಗದ ಜೀವನವೇ ಬೇರೆ, ಸಾಮಾನ್ಯ ಜೀವನದ ವಾಸ್ತವವೇ ಬೇರೆ. ಇವೆರಡೂ ಒಂದೇ ಅಲ್ಲ. ನೀವು ಬೇರೆಯವರ ಮಕ್ಕಳನ್ನು ತಪ್ಪುದಾರಿಗೆ ಎಳೆಯುತ್ತಿದ್ದೀರಿ. ನಾಳೆ ಇದೇ ಪರಿಸ್ಥಿತಿ ನಿಮ್ಮ ಸ್ವಂತ ಮಕ್ಕಳಿಗೂ ಬರಬಹುದು ಎನ್ನುವುದನ್ನು ನೆನಪಿಡಿ’ ಎಂದು ಕಂಗನಾ ಎಚ್ಚರಿಸಿದ್ದಾರೆ.
ಸಿಜೆಪಿ ವಕ್ತಾರನನ್ನು ಟೀಕಿಸಿದ್ದ ಬಗ್ಗೆ ಕಂಗನಾ
ಸಿಜೆಪಿ ವಕ್ತಾರ ಸೌರವ್ ದಾಸ್‌ರನ್ನು ಟೀಕಿಸಿದ್ದ ಕಂಗನಾ, ‘ಈತ ಸಂಪೂರ್ಣ ನಾಲಾಯಕ್ ಮತ್ತು ನಿರುದ್ಯೋಗಿ. ನಾನು ಈತನ ಬಗ್ಗೆ ಗೂಗಲ್ ಮಾಡಿ ನೋಡಿದೆ. ಆತನಿಗೆ ಈಗ 28 ವರ್ಷ. ಆತ ಹೇಗೆ ಇನ್ನೂ ವಿದ್ಯಾರ್ಥಿ ಎಂದು ಹೇಳಿಕೊಳ್ಳುತ್ತಿದ್ದಾನೋ ನನಗಂತೂ ತಿಳಿಯುತ್ತಿಲ್ಲ‘ ಎಂದು ಕಂಗನಾ ವ್ಯಂಗ್ಯವಾಡಿದ್ದರು.