
ಬಾಗಲಕೋಟೆಯಲ್ಲಿ ಪರಿಶೀಲನೆಯಾಗದ ಪ್ರಗತಿ: ಮೂರು ವರ್ಷಗಳಲ್ಲಿ ಮೂರೇ ಕೆಡಿಪಿ ಸಭೆ
ಬಾಗಲಕೋಟೆ: ತಾಲ್ಲೂಕು ಪಂಚಾಯಿತಿಗೆ ಹಲವು ವರ್ಷಗಳಿಂದ ಆಡಳಿತ ಮಂಡಳಿಗಳಿಲ್ಲ. ಅಧಿಕಾರಿಗಳೇ ಮಾಸಿಕ ಸಭೆಗಳನ್ನು ನಡೆಸುತ್ತಾರೆ. ಆದರೆ, ತ್ರೈಮಾಸಿಕವಾಗಿ ನಡೆಸಬೇಕಿದ್ದ ಪ್ರಗತಿ ಪರಿಶೀಲನಾ ಸಭೆಗಳನ್ನು ಬಾಗಲಕೋಟೆ ಶಾಸಕರು ನಡೆಸದ್ದರಿಂದ ಪ್ರಗತಿ ಪರಿಶೀಲನೆ ಕಾರ್ಯ ನಡೆಯುತ್ತಿಲ್ಲ.
ಪ್ರತಿ ಮೂರು ತಿಂಗಳಿಗೊಮ್ಮೆ ಶಾಸಕರಾದವರು ಪ್ರಗತಿ ಪರಿಶೀಲನಾ ಸಭೆ ನಡೆಸಿ, ವಿವಿಧ ಯೋಜನೆಗಳ ಅನುಷ್ಠಾನ, ಕಾಮಗಾರಿಗಳ ಪ್ರಗತಿ ಮುಂತಾದ ವಿಷಯಗಳ ಪರಿಶೀಲನೆ ನಡೆಸಬೇಕು. ಆದರೆ, ಬಾಗಲಕೋಟೆ ತಾಲ್ಲೂಕಿನಲ್ಲಿ ಆ ಕಾರ್ಯ ನಡೆಯುತ್ತಿಲ್ಲ.
ಮೂರು ವರ್ಷಗಳಲ್ಲಿ 12 ಸಭೆಗಳು ನಡೆಯಬೇಕಿತ್ತು. ಇಲ್ಲಿಯವರೆಗೆ ಪ್ರತಿ ವರ್ಷಕ್ಕೆ ಒಂದರಂತೆ ಮೂರು ಸಭೆಗಳು ಮಾತ್ರ ನಡೆದಿವೆ. 2023ರಲ್ಲಿ ವಿಧಾನಸಭೆಗೆ ಆಯ್ಕೆಯಾಗುತ್ತಿದ್ದಂತೆಯೇ ಶಾಸಕರಾಗಿದ್ದ ಎಚ್.ವೈ. ಮೇಟಿ ಅವರು ಜೂನ್ ತಿಂಗಳಿನಲ್ಲಿ ಸಭೆ ನಡೆಸಿದ್ದರು.
2024ರ ಮಾರ್ಚ್ ತಿಂಗಳಿನಲ್ಲಿ ಎರಡನೇ ಸಭೆ ನಡೆಸಲಾಗಿತ್ತು. ನಂತರ ಆ ವರ್ಷ ಪೂರ್ತಿ ಸಭೆ ನಡೆಸಲಿಲ್ಲ. 2025 ಜುಲೈ ತಿಂಗಳಿನಲ್ಲಿ ಮತ್ತೇ ಸಭೆ ನಡೆಸಿದ್ದಾರೆ. ನಿಗದಿತವಾಗಿ ಪರಿಶೀಲನೆ ಕಾರ್ಯ ನಡೆಯುತ್ತಿಲ್ಲ.
ಅನಾರೋಗ್ಯದ ಕಾರಣ ಶಾಸಕರಾಗಿದ್ದ ಎಚ್.ವೈ.ಮೇಟಿ ಅವರು ನಿಧನರಾದರು. ನಂತರ ನಡೆದ ಚುನಾವಣೆಯಲ್ಲಿ ಅವರ ಪುತ್ರ ಉಮೇಶ ಮೇಟಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರು ಆಯ್ಕೆಯಾಗಿ ಮೂರು ತಿಂಗಳು ಕಳೆದರೂ ಪ್ರಗತಿ ಪರಿಶೀಲನಾ ಸಭೆ ನಡೆಸುವ ಗೋಜಿಗೆ ಹೋಗಿಲ್ಲ.
ಆಯ್ಕೆಯಾದ ಆರಂಭದಲ್ಲಿ ಬೆಂಗಳೂರು, ಗ್ರಾಮಗಳಲ್ಲಿ ಸನ್ಮಾನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದರು. ಗ್ರಾಮಗಳಿಗೆ ಸನ್ಮಾನಕ್ಕೆ ಹೋದಾಗ ಜನರು ಹಲವು ಸಮಸ್ಯೆಗಳನ್ನು ಶಾಸಕರ ಮುಂದೆ ಪ್ರಸ್ತಾಪಿಸಿದ್ದಾರೆ. ಶಾಸಕರೂ ಮೊಬೈಲ್ ಕರೆ ಮಾಡಿ ಪರಿಹರಿಸುವಂತೆ ತಿಳಿಸಿದ್ದಾರೆ. ಸಭೆ ನಡೆಸುವ ಮೂಲಕ ಆ ಸಮಸ್ಯೆಗಳಿಗೆ ಪರಿಹಾರ ಏನು ಎಂದು ಕಂಡು ಹಿಡಿಯುವ ಕೆಲಸ ಆಗಿಲ್ಲ.
‘ನಿಗದಿತವಾಗಿ ಸಭೆ ಮಾಡದಿದ್ದರೆ, ಪ್ರಗತಿ ಯಾವ ಹಂತದಲ್ಲಿದೆ ಎಂಬುದು ಗೊತ್ತಾಗುವುದಿಲ್ಲ. ಇದು ಜನಪ್ರತಿನಿಧಿಗಳ, ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆ ತೋರಿಸುತ್ತದೆ’ ಎನ್ನುತ್ತಾರೆ ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಧರ್ಮಂತಿ.
ನಗರಸಭೆಗೂ ಆಡಳಿತ ಮಂಡಳಿಯಿಲ್ಲ. ಅಲ್ಲಿಯೂ ನಿಗದಿತವಾಗಿ ಪ್ರಗತಿ ನಡೆಯುತ್ತಿಲ್ಲ. ಇತ್ತೀಚೆಗೆ ಉಪ ಲೋಕಾಯುಕ್ತರು ಭೇಟಿ ನೀಡಿದ್ದ ವೇಳೆ ಹಲವು ಲೋಪಗಳನ್ನು ಎತ್ತಿ ತೋರಿಸಿದ್ದರು. ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸ ಆಗಬೇಕಿದೆ.
ಪ್ರಗತಿ ಪರಿಶೀಲನಾ ಸಭೆಯನ್ನು ಇದೇ ತಿಂಗಳಲ್ಲಿ ಮಾಡಿ, ಪ್ರಗತಿ ಪರಿಶೀಲನೆ ಮಾಡಲಾಗುವುದು ಉಮೇಶ ಮೇಟಿ, ಶಾಸಕ
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260809-19-881883105