ಒಣಗಿದ ಡ್ಯಾನ್ಯೂಬ್ ನದಿ: ಹಿಟ್ಲರ್ ಕಾಲದ ಯುದ್ಧನೌಕೆಗಳು ಗೋಚರ
ಯುರೋಪಿನ ಪ್ರಮುಖ ಜಲಮಾರ್ಗವಾಗಿರುವ ಡ್ಯಾನ್ಯೂಬ್ ನದಿಯಲ್ಲಿ ನೀರಿನ ಮಟ್ಟ ಭಾರಿ ಕಡಿಮೆಯಾಗಿದೆ. ಪರಿಣಾಮ 80 ವರ್ಷಗಳ ಹಿಂದೆ ಜರ್ಮನಿಯ ಅಡಾಲ್ಫ್ ಹಿಟ್ಲರ್‌ನ ನಾಜಿ ಪಡೆಗಳು ಮುಳುಗಿಸಿದ್ದ ಯುದ್ಧನೌಕೆಗಳು ಮತ್ತೆ ಗೋಚರಿಸುತ್ತಿವೆ. ಸರ್ಬಿಯಾದ ಪ್ರಹೋವೊ ಬಂದರು ಪ್ರದೇಶದಲ್ಲಿ ಈ ಬಾರಿ ಕನಿಷ್ಠ ಒಂದು ಡಜನ್ ಹಡಗುಗಳ ಅವಶೇಷಗಳು ಗೋಚರಿಸಿದ್ದು, ಅವುಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಸರ್ಕಾರ ಚಾಲನೆ ನೀಡಿದೆ.
1944ರಲ್ಲಿ ಜರ್ಮನ್ ಪಡೆಗಳನ್ನು ಹಿಮ್ಮೆಟ್ಟಿಸಿ ಸೋವಿಯತ್ ಪಡೆಗಳು ಮುನ್ನುಗ್ಗುತ್ತಿದ್ದವು. ಈ ವೇಳೆ ತನ್ನ ನೌಕಾಪಡೆಯನ್ನು ಮುಂದೆ ಕೊಂಡೊಯ್ಯಲು ಸಾಧ್ಯವಾಗದದೇ ಇದ್ದಾಗ ಸೋವಿಯತ್ ಪಡೆಗಳ ನದಿ ಮಾರ್ಗದ ಮುನ್ನಡೆಯನ್ನು ನಿಧಾನಗೊಳಿಸಲು ನಾಜಿ ಪಡೆಗಳು 200ಕ್ಕೂ ಹೆಚ್ಚು ಹಡಗುಗಳನ್ನು ಡ್ಯಾನ್ಯೂಬ್ ನದಿಯಲ್ಲಿ ಉದ್ದೇಶಪೂರ್ವಕವಾಗಿ ಮುಳುಗಿಸಿದ್ದವು. ಸಾಮಾನ್ಯವಾಗಿ ಬೇಸಿಗೆಯಲ್ಲಿ ಒಂದೆರಡು ಹಡಗುಗಳ ಅವಶೇಷಗಳು ನೀರಿನ ಮೇಲೆ ಕಾಣಿಸಿಕೊಳ್ಳುತ್ತಿದ್ದವು. ಆದರೆ ಈ ಬಾರಿ ಯುರೋಪಿನಲ್ಲಿ ದಾಖಲೆ ಮಟ್ಟದ ಉಷ್ಣಾಂಶ ಮತ್ತು ಮಳೆಯ ಕೊರತೆಯಿಂದ ನದಿಯ ನೀರಿನ ಮಟ್ಟ ದಾಖಲೆ ಮಟ್ಟದಲ್ಲಿ ಇಳಿಕೆಯಾಗಿದೆ.
‘ಈ ಬಾರಿ ನೀರಿನ ಮಟ್ಟ ತೀರಾ ಕಡಿಮೆ’
‘ಈ ಅವಶೇಷಗಳು ಬಹುತೇಕ ಪ್ರತಿವರ್ಷ ಕಾಣಿಸಿಕೊಳ್ಳುತ್ತವೆ. ಆದರೆ ಈ ವರ್ಷ ನೀರಿನ ಮಟ್ಟ ತೀರಾ ಕಡಿಮೆಯಾಗಿರುವುದರಿಂದ ಸಾಮಾನ್ಯವಾಗಿ ಕಾಣಿಸದ ಹಡಗುಗಳೂ ಹೊರಬಂದಿವೆ‘ ಎಂದು ಸ್ಥಳೀಯ ಮೀನುಗಾರರೊಬ್ಬರು ಹೇಳಿದ್ದಾರೆ. ಜರ್ಮನಿಯ ಬ್ಲ್ಯಾಕ್ ಫಾರೆಸ್ಟ್‌ನಿಂದ ಕಪ್ಪು ಸಮುದ್ರದವರೆಗೆ ಸುಮಾರು 10 ದೇಶಗಳ ಮೂಲಕ ಹರಿಯುವ ಡ್ಯಾನ್ಯೂಬ್ ಯುರೋಪಿನ ಎರಡನೇ ಅತಿ ಉದ್ದದ ನದಿ. ವಾಣಿಜ್ಯ ನೌಕಾಯಾನಕ್ಕೆ ಅತ್ಯಂತ ಪ್ರಮುಖವಾಗಿರುವ ಈ ನದಿಯ ನೀರಿನ ಮಟ್ಟ ಕುಸಿದಿರುವುದು ಸರಕು ಸಾಗಣೆಯ ಮೇಲೂ ಪರಿಣಾಮ ಬೀರಿದೆ. ಬಿಸಿಲು ಮತ್ತು ಮಳೆಯ ಕೊರತೆಯ ಪರಿಣಾಮ ಡ್ಯಾನ್ಯೂಬ್‌ನ ಕೆಲವು ಭಾಗಗಳಲ್ಲಿ ತಾತ್ಕಾಲಿಕ ನೌಕಾಯಾನ ಮಾರ್ಗಗಳನ್ನು ನಿರ್ಮಿಸುವ ಪರಿಸ್ಥಿತಿಯೂ ಎದುರಾಗಿದೆ.
ಸರ್ಬಿಯಾ ಸರ್ಕಾರ 2020ರಲ್ಲೇ ಡ್ಯಾನ್ಯೂಬ್‌ನಲ್ಲಿರುವ ಈ ಹಡಗುಗಳ ಅವಶೇಷಗಳನ್ನು ತೆರವುಗೊಳಿಸುವ ಯೋಜನೆ ಆರಂಭಿಸಿತ್ತು. ಸುಮಾರು 23 ಮಿಲಿಯನ್ ಯುರೋ ವೆಚ್ಚವಾಗಬಹುದು ಎಂದು ಆಗ ಅಂದಾಜಿಸಲಾಗಿತ್ತು. ಗುರುವಾರ ಮೊದಲ ಹಡಗನ್ನು ನದಿಯಿಂದ ಮೇಲಕ್ಕೆತ್ತಲಾಗಿದೆ. ಒಟ್ಟು 80 ಹಡಗುಗಳ ಅವಶೇಷಗಳನ್ನು ತೆರವುಗೊಳಿಸುವುದಾಗಿ ಸರ್ಬಿಯಾ ಅಧ್ಯಕ್ಷ ಅಲೆಕ್ಸಾಂಡರ್ ವುಚಿಚ್ ಹೇಳಿದ್ದಾರೆ.
ಈ ನೌಕೆಗಳಲ್ಲಿ ಸ್ಫೋಟಕ ತೆರವುಗೊಳಿಸುವ ಹಡಗುಗಳು, ಗಸ್ತು ದೋಣಿಗಳು, ಫಿರಂಗಿ ಹಡಗುಗಳು, ಎಳೆದುಕೊಂಡು ಹೋಗುವ ಟಗ್‌ಬೋಟ್‌ಗಳು, ಸರಕು ಸಾಗಣೆ ದೋಣಿಗಳು ಹಾಗೂ ಇತರ ಸೇನಾ ನೌಕೆಗಳು ಇವೆ.
ನದಿಯೊಳಗೆ ಸ್ಫೋಟಕಗಳ ಆತಂಕ
ಈ ಅವಶೇಷಗಳ ತೆರವು ಸುಲಭದ ಕೆಲಸವಲ್ಲ. ಕೆಲವು ಹಡಗುಗಳಲ್ಲಿ ಸ್ಫೋಟಿಸದೆ ಉಳಿದಿರುವ ಯುದ್ಧಸಾಮಗ್ರಿಗಳು ಇರಬಹುದು ಎಂಬ ಆತಂಕವಿದೆ. ಇದರಿಂದ ನೌಕಾಯಾನಕ್ಕೂ ಅಪಾಯ ಎದುರಾಗಿದ್ದು, ಅವಶೇಷಗಳನ್ನು ತೆರವುಗೊಳಿಸುವ ಕಾರ್ಯವೂ ಅಪಾಯಕಾರಿಯಾಗಿದೆ.
ಡ್ಯಾನ್ಯೂಬ್ ನದಿಯಲ್ಲಿ ನೀರಿನ ಮಟ್ಟ ಮತ್ತಷ್ಟು ಕುಸಿದರೆ ಪರಿಸ್ಥಿತಿ ಗಂಭೀರವಾಗಲಿದೆ ಎಂದು ವುಚಿಚ್ ಎಚ್ಚರಿಸಿದ್ದಾರೆ. ಅಲ್ಲದೆ ಕೆಲವು ತಿಂಗಳ ಹಿಂದೆ, ‘ನೀರಿನ ಮಟ್ಟ ಇನ್ನೂ 30 ಸೆಂಟಿಮೀಟರ್ ಕುಸಿದರೆ, ನಾವು ಮುಗಿದಂತೆಯೇ’ ಎಂದು ಹೇಳಿದ್ದರು.
ಪರಮಾಣು ವಿದ್ಯುತ್ ಸ್ಥಾವರಕ್ಕೂ ಆತಂಕ
ಡ್ಯಾನ್ಯೂಬ್‌ನ ನೀರಿನ ಮಟ್ಟ ಕುಸಿತ ಸರ್ಬಿಯಾಕ್ಕೆ ಮಾತ್ರ ಸಮಸ್ಯೆಯಾಗಿಲ್ಲ. ಹಂಗೇರಿಯಲ್ಲೂ ನದಿಯ ನೀರು ಕಡಿಮೆಯಾಗಿದ್ದು, ಇದರಿಂದ ಪಾಕ್ಸ್ ಪರಮಾಣು ವಿದ್ಯುತ್ ಸ್ಥಾವರದ ಕಾರ್ಯಾಚರಣೆಗೆ ತೊಂದರೆಯಾಗುವ ಆತಂಕ ಎದುರಾಗಿದೆ ಎಂದು ಪ್ರಧಾನಿ ಪೀಟರ್ ಮ್ಯಾಗ್ಯಾರ್ ಹೇಳಿದ್ದಾರೆ.
ಪೋಲೆಂಡ್‌ನ ಕೆಲವು ಭಾಗಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದೆ. ಅಲ್ಲಿನ ಪ್ರಧಾನಿ ಡೊನಾಲ್ಡ್ ಟಸ್ಕ್ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ನೀಡುವಂತೆ ಅಥವಾ ಬಿಸಿಲಿನಿಂದ ರಕ್ಷಣೆ ಪಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕಂಪನಿಗಳಿಗೆ ಸೂಚಿಸಿದ್ದಾರೆ.
ಡ್ಯಾನ್ಯೂಬ್‌ನ ನೀರು ಇಳಿದಾಗ ಸ್ಲೊವಾಕಿಯಾದಲ್ಲೂ ಎರಡನೇ ವಿಶ್ವಯುದ್ಧದ ಕಾಲದ ಬಾಂಬ್‌ವೊಂದು ಪತ್ತೆಯಾಗಿದೆ. ಸುಮಾರು 1,543 ಪೌಂಡ್ ತೂಕದ ಬ್ರಿಟಿಷ್ ನೌಕಾ ವೈಮಾನಿಕ ಬಾಂಬ್ ಎಂದು ಗುರುತಿಸಲಾದ ಆ ಸ್ಫೋಟಕವನ್ನು ಪೊಲೀಸರು ಸ್ಫೋಟಿಸಿ ನಿಷ್ಕ್ರಿಯಗೊಳಿಸಿದ್ದಾರೆ.
ಸಾಮಾನ್ಯ ಮಟ್ಟಕ್ಕಿಂತ 3 ಅಡಿ ಕಡಿಮೆ
ಸರ್ಬಿಯಾ ಅಧಿಕೃತವಾಗಿ ಬರ ಘೋಷಿಸಿಲ್ಲ. ಆದರೆ ಈ ಅವಧಿಯಲ್ಲಿ ಸಾಮಾನ್ಯವಾಗಿ ಇರಬೇಕಾದ ಮಟ್ಟಕ್ಕಿಂತ ಡ್ಯಾನ್ಯೂಬ್‌ನ ನೀರು ಮೂರು ಅಡಿಗೂ ಅಧಿಕ ಕಡಿಮೆಯಾಗಿದೆ. ನೀರಿನ ಕೊರತೆ ಕೃಷಿಯ ಮೇಲೂ ಪರಿಣಾಮ ಬೀರಿದ್ದು, ಗೋಧಿ, ಸೋಯಾಬೀನ್ ಮತ್ತು ಸೂರ್ಯಕಾಂತಿ ಬೆಳೆಗಳು ಹಾನಿಗೊಳಗಾಗಿವೆ. ಪರಿಸ್ಥಿತಿ ಸುಧಾರಿಸಬೇಕಾದರೆ, ಭಾರಿ ಮಳೆಯೇ ಬರಬೇಕು. ಸದ್ಯ ಅಂತಹ ಮಳೆಯ ಮುನ್ಸೂಚನೆ ಕಾಣಿಸುತ್ತಿಲ್ಲ ಎಂದು ತಜ್ಞರು ಹೇಳಿದ್ದಾರೆ.
ನದಿಯ ತಳದಲ್ಲಿ ಉಳಿದಿರುವ ಯುದ್ಧದ ಇತಿಹಾಸ
1944ರ ಸೆಪ್ಟೆಂಬರ್‌ನಲ್ಲಿ ಸೋವಿಯತ್ ಪಡೆಗಳು ಮುನ್ನಡೆಯುತ್ತಿದ್ದ ಸಂದರ್ಭದಲ್ಲಿ ಜರ್ಮನ್ ಪಡೆಗಳು ಡ್ಯಾನ್ಯೂಬ್ ಮೂಲಕ ಸೈನಿಕರು, ಸಿಬ್ಬಂದಿ ಮತ್ತು ಯುದ್ಧೋಪಕರಣಗಳನ್ನು ಹಿಂದೆ ಸಾಗಿಸುತ್ತಿದ್ದವು. ಸರ್ಬಿಯಾ–ರೊಮೇನಿಯಾ ಗಡಿಯ ‘ಐರನ್ ಗೇಟ್ಸ್’ ಎಂದು ಕರೆಯಲಾಗುವ ಡೆರ್ಡಾಪ್ ಕಮರಿಯ ಮೂಲಕ ಇಡೀ ನೌಕಾಪಡೆಯನ್ನು ಮುನ್ನಡೆಸುವುದು ಕಷ್ಟವಾಗಿತ್ತು. ಹೀಗಾಗಿ ಕೆಲವು ಹಡಗುಗಳನ್ನು ಉದ್ದೇಶಪೂರ್ವಕವಾಗಿ ನದಿಯಲ್ಲಿ ಮುಳುಗಿಸಲಾಯಿತು. ಸೋವಿಯತ್ ಪಡೆಗಳು ಮುನ್ನುವುದನ್ನು ಅಡಚಣೆಗೊಳಿಸುವುದೇ ಅದರ ಉದ್ದೇಶವಾಗಿತ್ತು.
ಇತಿಹಾಸಕಾರರ ಪ್ರಕಾರ, ಗಸ್ತು ದೋಣಿಗಳು, ಸ್ಫೋಟಕ ತೆರವುಗೊಳಿಸುವ ಹಡಗುಗಳು, ಸ್ವೀಪರ್‌ಗಳು ಮತ್ತು ಸರಕು ಸಾಗಣೆ ಹಡಗುಗಳು ಸೇರಿದಂತೆ ಒಟ್ಟು 218 ನೌಕೆಗಳು ನದಿಯ ತಳ ಸೇರಿದ್ದವು.
‘ಈ ಅವಶೇಷಗಳು ಒಂದು ರೀತಿ ಕಾಲದ ಪೆಟ್ಟಿಗೆಯಂತಿವೆ. 80 ವರ್ಷಗಳ ಬಳಿಕವೂ ಡ್ಯಾನ್ಯೂಬ್ ಇನ್ನೂ ಸಂಪೂರ್ಣವಾಗಿ ಹೇಳಲಾಗದ ಕಥೆಗಳನ್ನು ಹೊರಗೆ ತರುತ್ತಿದೆ’ ಎಂದು ‘ದಿ ಹಿಡನ್ ಡ್ಯಾನ್ಯೂಬ್’ ಸಾಕ್ಷ್ಯಚಿತ್ರ ಸರಣಿಯ ನಿರ್ಮಾಪಕ ಬೊಜಾನ್ ಡ್ರಾಗಿಚೆವಿಚ್ ಹೇಳಿದ್ದಾರೆ.
80 ವರ್ಷಗಳ ಹಿಂದೆ ಯುದ್ಧದ ಸಾಕ್ಷಿಯಾಗಿದ್ದ ಈ ಹಡಗುಗಳ ಅವಶೇಷಗಳು, ಈಗ ಯುರೋಪಿನ ನದಿಗಳ ಮೇಲೆ ಹವಾಮಾನ ಬದಲಾವಣೆಯ ಪರಿಣಾಮ ಎಷ್ಟರ ಮಟ್ಟಿಗೆ ತೀವ್ರವಾಗುತ್ತಿದೆ ಎಂಬುದನ್ನೂ ತೋರಿಸುತ್ತಿವೆ.
ಆಧಾರ: ದಿ ನ್ಯೂಯಾರ್ಕ್ ಟೈಮ್ಸ್ ಹಾಗೂ ರಾಯಿಟರ್ಸ್