
ಬೈಕ್ ಟ್ಯಾಕ್ಸಿ ಅಪಘಾತ: ರ‍್ಯಾಪಿಡೋ ವಿರುದ್ಧ ಮಹಿಳೆ ದೂರು; 20 ಲಕ್ಷ ಚಿಕಿತ್ಸಾ ವೆಚ್ಚಕ್ಕೆ ಹೊಣೆ ಯಾರು?
ಬೆಂಗಳೂರು: ಬೈಕ್ ಟ್ಯಾಕ್ಸಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು 20 ಲಕ್ಷಕ್ಕೂ ಹೆಚ್ಚು ವೈದ್ಯಕೀಯ ವೆಚ್ಚವಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ 32 ವರ್ಷದ ಇಂಟೀರಿಯರ್ ಡಿಸೈನರ್ ಸಾನಿ ಕೃಷ್ಣ ಅವರು ರೈಡ್ ಹೈಲಿಂಗ್ ಪ್ಲಾಟ್‌ಫಾರ್ಮ್ ರ‍್ಯಾಪಿಡೋ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಕೇರಳ ಮೂಲದ ಸಾನಿ ಕೃಷ್ಣ ಅವರು ಜೂನ್ 17ರಂದು ಬೈರಸಂದ್ರದಲ್ಲಿರುವ ತಮ್ಮ ಮನೆಯಿಂದ ಡೊಮ್ಲೂರಿನ ಕಚೇರಿಗೆ ರ‍್ಯಾಪಿಡೋ ಬೈಕ್‌ನಲ್ಲಿ ತೆರಳುತ್ತಿದ್ದರು. ಬಾಗ್ಮನೆ ಟೆಕ್ ಪಾರ್ಕ್ ಸಮೀಪದ ಕಿರಿದಾದ ರಸ್ತೆಯಲ್ಲಿ ಬೈಕ್ ಸವಾರ ವೇಗವಾಗಿ ಟ್ರ್ಯಾಕ್ಟರ್ ಅನ್ನು ಓವರ್‌ಟೇಕ್ ಮಾಡಲು ಯತ್ನಿಸಿದಾಗ ಬೈಕ್ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂದು ಸಾನಿ ಆರೋಪಿಸಿದ್ದಾರೆ.
ಬೈಕ್ ಸಮತೋಲನ ಕಳೆದುಕೊಂಡ ಪರಿಣಾಮ ಸಾನಿ ರಸ್ತೆಗೆ ಬಿದ್ದಿದ್ದು, ಬಳಿಕ ಟ್ರ್ಯಾಕ್ಟರ್ ಅವರ ಮೇಲೆ ಹರಿದಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಅವರಿಗೆ ಪಕ್ಕೆಲುಬು ಮುರಿತ, ಶ್ವಾಸಕೋಶಕ್ಕೆ ಹಾನಿ, ಆಂತರಿಕ ಅಂಗಗಳಿಗೆ ಗಾಯ ಹಾಗೂ ಮುಖದ ಮೂಳೆಗಳಿಗೆ ಗಂಭೀರ ಹಾನಿಯಾಗಿದೆ ಎಂದು ಅವರು ತಿಳಿಸಿದ್ದಾರೆ. ಗಾಯಗಳಿಗಾಗಿ ಪ್ರಮುಖ ಪುನರ್‌ನಿರ್ಮಾಣ ಶಸ್ತ್ರಚಿಕಿತ್ಸೆ ಸೇರಿದಂತೆ ಚಿಕಿತ್ಸೆ ಪಡೆಯಬೇಕಾಗಿದ್ದು, ಇದುವರೆಗೆ 20 ಲಕ್ಷಕ್ಕೂ ಅಧಿಕ ವೈದ್ಯಕೀಯ ವೆಚ್ಚವಾಗಿದೆ ಎಂದು ಕುಟುಂಬ ತಿಳಿಸಿದೆ.
ರ‍್ಯಾಪಿಡೋ ವಿರುದ್ಧ ನಿರ್ಲಕ್ಷ್ಯದ ಆರೋಪ
ಅಪಘಾತದ ಬಳಿಕ ರ‍್ಯಾಪಿಡೋ ಸಂಸ್ಥೆ ಸೂಕ್ತ ನೆರವು ನೀಡಿಲ್ಲ ಎಂದು ಸಾನಿ ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಮಹಿಳೆಯರ ಸುರಕ್ಷತೆಯ ಬಗ್ಗೆ ಸಂಸ್ಥೆ ಪ್ರಚಾರ ಮಾಡುತ್ತದೆ. ಆದರೆ, ಬೆಳಗಿನ ಪ್ರಯಾಣಕ್ಕಾಗಿ ತಾವು ರ‍್ಯಾಪಿಡೋವನ್ನು ನಂಬಿದ್ದರೂ ಅಪಘಾತದ ಬಳಿಕ ಗಂಭೀರ ಗಾಯಗಳೊಂದಿಗೆ ರಸ್ತೆಯಲ್ಲಿ ಬಿದ್ದಿದ್ದಾಗಿ ಆರೋಪಿಸಿದ್ದಾರೆ.
ಸಾನಿ ಅವರು ರ‍್ಯಾಪಿಡೋಗೆ ಕಾನೂನು ನೋಟಿಸ್ ನೀಡಿದ ಬಳಿಕವೂ ಸೂಕ್ತ ಸ್ಪಂದನೆ ಸಿಗಲಿಲ್ಲ ಎಂದು ಹೇಳಿದ್ದಾರೆ. ಸಂಸ್ಥೆಯಿಂದ ತಮಗೆ ಬಂದಿದ್ದು ಸ್ವಯಂಚಾಲಿತ ಇ-ಮೇಲ್‌ಗಳು ಮಾತ್ರವಾಗಿದ್ದು, ಮೂರನೇ ವ್ಯಕ್ತಿಯ ವಿಮಾ ಪ್ರಕ್ರಿಯೆಯ ಮೂಲಕ ಪರಿಹಾರ ಪಡೆಯುವಂತೆ ಸೂಚಿಸಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.
ತುರ್ತು ಚಿಕಿತ್ಸೆ ವೇಳೆ ದೂರು ಮುಚ್ಚಿದ ಆರೋಪ
ಸಾನಿ ಅವರ ಕುಟುಂಬವೂ ರ‍್ಯಾಪಿಡೋ ವಿರುದ್ಧ ಆರೋಪ ಮಾಡಿದೆ. ಸಾನಿ ತುರ್ತು ಚಿಕಿತ್ಸೆಯಲ್ಲಿದ್ದ ಸಮಯದಲ್ಲೇ ಸಂಸ್ಥೆಯ ಗ್ರಾಹಕ ಸಹಾಯ ತಂಡ ಅವರ ದೂರನ್ನು ಮುಚ್ಚಿದೆ ಎಂದು ಕುಟುಂಬ ಹೇಳಿದೆ. ವಿಮಾ ಪಾಲಿಸಿಯ ಮೂಲಕ ಸೀಮಿತ ನೆರವು ನೀಡುವ ಭರವಸೆ ಮಾತ್ರ ನೀಡಲಾಗಿತ್ತು ಎಂದು ಕುಟುಂಬ ಆರೋಪಿಸಿದೆ. ಅಪಘಾತಕ್ಕೆ ಸಂಬಂಧಿಸಿದಂತೆ ಸಾನಿ ಇದೀಗ ರ‍್ಯಾಪಿಡೋ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದು, ವೈದ್ಯಕೀಯ ವೆಚ್ಚ, ಪರಿಹಾರ ಹಾಗೂ ಸಂಸ್ಥೆಯ ಹೊಣೆಗಾರಿಕೆ ಕುರಿತು ಮುಂದಿನ ಕಾನೂನು ಪ್ರಕ್ರಿಯೆ ನಡೆಯಲಿದೆ.
ಈ ಸಂಬಂಧ ಕಂಪನಿಗೆ ಲೀಗಲ್ ನೋಟಿಸ್ ಕಳುಹಿಸಿದ ಬಳಿಕ, ವಿಮಾ ಕ್ಷೇಮು ಪ್ರಕ್ರಿಯೆಯ ಮೊರೆ ಹೋಗುವಂತೆ ಸೂಚಿಸುವ ಸ್ವಯಂಚಾಲಿತ ಇಮೇಲ್‌ಗಳು ಮಾತ್ರ ಬಂದಿವೆ ಎಂದು ಇನ್ನಷ್ಟು ಆಕ್ರೋಶ ಹೊರಹಾಕಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಹರಿದಾಡುತ್ತಿರುವ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ರಾಪಿಡೊ, ಸಾನಿ ಕೃಷ್ಣ ಅವರೊಂದಿಗೆ ಸಂಪರ್ಕದಲ್ಲಿದ್ದೇವೆ. ಈ ಬಗ್ಗೆ ತನಿಖೆ ಕೈಗೊಂಡಿದ್ದು, ಸಮಯಾವಕಾಶ ಕೋರಿದ್ದೇವೆ ಎಂದಿದೆ.