
‘ಸಿನಿಮಾ ನಿರ್ಮಿಸುವುದು ಯುದ್ದ ಮಾಡಿದಂತೆ’ ಟಾಕ್ಸಿಕ್ ಕುರಿತು ನಟ ಯಶ್ ಹೇಳಿಕೆ
’ಸಿನಿಮಾ ನಿರ್ಮಾಣ ಮಾಡುವುದು, ಪ್ರಪಂಚದ ವಿರುದ್ಧ ಯುದ್ದ ಮಾಡಿದಂತೆ’ ಎಂದು ರಾಕಿಂಗ್ ಸ್ಟಾರ್ ಯಶ್ ಅವರು ಟಾಕ್ಸಿಕ್ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಆಗಸ್ಟ್ 8ರಂದು ಬಹುನಿರೀಕ್ಷಿತ ಟಾಕ್ಸಿಕ್ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವ ಯಶ್ ಅವರ ನಟನೆಗೆ ಅಭಿಮಾನಿಗಳು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಟಾಕ್ಸಿಕ್ ಸಿನಿಮಾದ ಚಿತ್ರೀಕರಣ ಆರಂಭವಾದ ಸಂದರ್ಭದಲ್ಲಿ ಸಿನಿಮಾದ ಕುರಿತು ಕೆಲವು ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಈ ವಿಚಾರವನ್ನು ಉಲ್ಲೇಖಿಸಿ ಯಶ್ ಮಾತನಾಡಿದ್ದಾರೆ.
‘ಸಿನಿಮಾ ಮಾಡುವುದು ಸುಲಭವಲ್ಲ. ಇತ್ತೀಚಿನ ದಿನಗಳಲ್ಲಿ ಸುಳ್ಳು ಸುದ್ದಿಗಳು ಹೆಚ್ಚಾಗುತ್ತಿವೆ. ದೊಡ್ಡ ಮೊತ್ತದ ಚಿತ್ರವೊಂದು ಆರಂಭವಾಗಿ 10 ರಿಂದ 20 ದಿನಗಳಲ್ಲಿ ಚಿತ್ರೀಕರಣ ಸ್ಥಗಿತವಾಗಿದೆ ಎಂಬ ಸುದ್ದಿಗಳು ಬರುತ್ತವೆ. ಇಂತಹ ಸುಳ್ಳು ಮಾಹಿತಿ ಅವರಿಗೆ ಎಲ್ಲಿಂದ ಸಿಗುತ್ತದೆ. ಈ ರೀತಿಯ ಸುದ್ದಿಗಳನ್ನು ಅರಗಿಸಿಕೊಳ್ಳುವುದು ಸುಲಭವಲ್ಲ’ ಎಂದು ಹೇಳಿದ್ದಾರೆ.
‘ಇದೇ ಸಂದರ್ಭದಲ್ಲಿ, ಟಾಕ್ಸಿಕ್ ಸಿನಿಮಾದ ನಿರ್ಮಾಪಕ, ವೆಂಕಟ್ ಕೆ ನಾರಾಯಣ ಅವರು ಸಿನಿಮಾದ ಪರ ನಿಂತಿದ್ದರು. 200 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ’ ಎಂದು ಬಹಿರಂಗಪಡಿಸಿದ್ದಾರೆ.
ಗೀತು ಮೋಹನ್ ದಾಸ್ ನಿರ್ದೇಶನದ ಟಾಕ್ಸಿಕ್ ಸಿನಿಮಾ ಆಗಸ್ಟ್ 26 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಪ್ರಮುಖ ಪಾತ್ರದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಸೇರಿದಂತೆ ಇತರು ನಟಿಸಿದ್ದಾರೆ.