ಚನ್ನಮ್ಮನ ಕಿತ್ತೂರು: ರಸ್ತೆ ಅಗಲೀಕರಣದಲ್ಲಿ ‘ತೆರವು’ ತಾರತಮ್ಯ

ಚನ್ನಮ್ಮನ ಕಿತ್ತೂರು: ರಸ್ತೆ ಅಗಲೀಕರಣದಲ್ಲಿ ‘ತೆರವು’ ತಾರತಮ್ಯ

ಚನ್ನಮ್ಮನ ಕಿತ್ತೂರು: ರಸ್ತೆ ಅಗಲೀಕರಣದಲ್ಲಿ ‘ತೆರವು’ ತಾರತಮ್ಯ

ಚನ್ನಮ್ಮನ ಕಿತ್ತೂರು: ಐತಿಹಾಸಿಕ ಕಿತ್ತೂರು ಪಟ್ಟಣದ ಸೌಂದರ್ಯೀಕರಣ ಹಾಗೂ ಸಂಚಾರ ದಟ್ಟಣೆ ನಿಯಂತ್ರಿಸುವ ದಿಸೆಯಲ್ಲಿ ಕೈಗೊಳ್ಳಲಾಗಿರುವ ಇಲ್ಲಿಯ ಮುಖ್ಯರಸ್ತೆ ವಿಸ್ತರಣೆ ಕಾಮಗಾರಿ ಅವೈಜ್ಞಾನಿಕವಾಗಿ ನಡೆದಿದೆ. ಲೋಕೋಪಯೋಗಿ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿಗೆ ಸಾರ್ವಜನಿಕರು ಎಲ್ಲ ಸಹಕಾರ ನೀಡಿದರೂ ಕೆಲವರ ಪ್ರಭಾವಕ್ಕೆ ಒಳಗಾಗಿ ಚರಂಡಿ ವಕ್ರವಾಗಿ ನಿರ್ಮಿಸಿದ್ದಾರೆ

ಸುಮಾರು ಎರಡು ವರ್ಷಗಳ ಹಿಂದೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮನೆಗಳ ಮುಂಭಾಗ ತೆರವಿಗಾಗಿ ಜೆಸಿಬಿ ಯಂತ್ರಗಳ ಅಬ್ಬರ ನಡೆಸಿದರು. ಇದಕ್ಕೆ ಗುರುವಾರ ಪೇಟೆಯ ಜನರಿಂದ ಸಹಕಾರವೂ ದೊರಕಿತು. ಆದರೆ, ಅರಳಿಕಟ್ಟೆಯಿಂದ ಗೊಂಬಿಗುಡಿ ರಸ್ತೆಯವರೆಗೂ ಗುರುತಿಸಿರುವ ಅಳತೆಯಂತೆ ಕೆಲವು ಕಡೆ ರಸ್ತೆ ವಿಸ್ತರಣೆ ಆಗಿಲ್ಲ ಎಂದು ದೂರುತ್ತಾರೆ.

ರಸ್ತೆ ವಿಸ್ತರಣೆಗಾಗಿ ಕಟ್ಟಡಗಳನ್ನು ತೆರವು ಮಾಡಿದ ಕ್ರಮ ಸರಿ. ಆದರೆ, ಮತ್ತೆ ಈಗ ಕೆಲವರಿಗೆ ಕೆಡವಿದ ಕಟ್ಟಡ ನಿರ್ಮಿಸಿಕೊಳ್ಳಲು ಅನುಮತಿ ನೀಡಲಾಗಿರುವುದು ಸರಿಯಲ್ಲ. ಹೀಗೆ ಮಾಡುವುದಾಗಿದ್ದರೆ ಮೊದಲು ತೆರವುಗೊಳಿಸಿ ಅವರಿಗೆ ಆರ್ಥಿಕವಾಗಿ ಹಾನಿ ಮಾಡಲು ಏಕೆ ಹೋದರು ಎಂಬುದು ನಾಗರಿಕರ ಪ್ರಶ್ನೆಯಾಗಿದೆ.

ಎಸ್. ಬಂಗಾರಪ್ಪ ನೇತೃತ್ವದ ಕಾಂಗ್ರೆಸ್ ಸರ್ಕಾರವು 1992-93ನೇ ಸಾಲಿನಲ್ಲಿ ಐತಿಹಾಸಿಕ ಪಟ್ಟಣದ ಮುಖ್ಯ ರಸ್ತೆ ಅಗಲೀಕರಣ ಸೇರಿ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಅನೇಕ ಕಾಮಗಾರಿ ನಡೆಸುವ ‘ಮಾಸ್ಟರ್ ಪ್ಲ್ಯಾನ್‌ ಯೋಜನೆ ಜಾರಿಗೆ ತಂದಿತ್ತು.

ಮೊದಲ ಹಂತವಾಗಿ ರಾಷ್ಟ್ರೀಯ ಹೆದ್ದಾರಿಯಿಂದ ಗುರುವಾರ ಪೇಟೆಯ ಮುಖ್ಯ ರಸ್ತೆಯಿಂದ ಅರಳಿಕಟ್ಟೆ, ಕಾಲೇಜು ರಸ್ತೆ ಮತ್ತು ಡೊಂಬರಕೊಪ್ಪ ಪ್ರವಾಸಿ ಮಂದಿರದವರೆಗೂ ದ್ವಿಪಥ ರಸ್ತೆ ಮಾಡುವ ಉದ್ದೇಶ ಹೊಂದಲಾಗಿತ್ತು. ಕೆಲವರ ಸಹಕಾರದಿಂದ ಅರಳಿಕಟ್ಟೆಯವರೆಗೆ ಮಾತ್ರ ರಸ್ತೆ ವಿಸ್ತರಣೆ ಆಯಿತು. ಪರಿಹಾರ ನೀಡದೆ ಮನೆ ತೆರವು ಮಾಡುವುದಿಲ್ಲ ಎಂದು ಕೆಲವರು ಪಟ್ಟು ಹಿಡಿದರು. ಕೆಲವು ಅಡೆತಡೆಗಳ ಮಧ್ಯೆ ಕೋಟೆಯ ದ್ವಾರದ ವರೆಗೂ ದ್ವಿಪಥ ರಸ್ತೆ ನಿರ್ಮಾಣಗೊಂಡಿತು.

ಮುಖ್ಯಮಂತ್ರಿ ಪಟ್ಟದಿಂದ ಬಂಗಾರಪ್ಪ ಕೆಳಗೆ ಇಳಿದ ನಂತರ ಇಡೀ ಯೋಜನೆಗೆ ಗ್ರಹಣ ಆವರಿಸಿತು ಎಂದು ಇಲ್ಲಿನ ಹಿರಿಯರು ನೆನಪಿಸಿಕೊಳ್ಳುತ್ತಾರೆ.

ಮೂರು ದಶಕದ ನಂತರ ಅರ್ಧಕ್ಕೆ ನಿಲ್ಲಿಸಿದ್ದ ರಸ್ತೆ ವಿಸ್ತರಣೆ ಯೋಜನೆಗೆ 2023ರಲ್ಲಿ ಬಾಬಾಸಾಹೇಬ ಪಾಟೀಲ ಶಾಸಕರಾದ ನಂತರ ಜೀವಬಂತು. ಗುರುವಾರ ಪೇಟೆಯ ಮಾರ್ಗದಲ್ಲಿ ಹಿಂದೆ ತೆರವು ಕಾರ್ಯಾಚರಣೆಯಲ್ಲಿ ಹಾಗೇ ಉಳಿದುಕೊಂಡಿದ್ದ ಕೆಲವು ಮನೆಗಳ ಮಾಲೀಕರ ಮನವೊಲಿಸುವ ಪ್ರಯತ್ನ ಶಾಸಕರ ನೇತೃತ್ವದಲ್ಲಿ ಸಾಗಿತು.

ಅವರ ದಿಟ್ಟ ನಿಲುವು ರಸ್ತೆ ವಿಸ್ತರಣೆಗೆ ಕಾರಣವಾಯಿತು. ಗುರುವಾರ ಪೇಟೆಯಲ್ಲಿ ನಿಗದಿಯಂತೆ ವಿಸ್ತರಣೆ ಆಯಿತು.

ದ್ವಿತೀಯ ಹಂತದಲ್ಲಿ ಅರಳಿಕಟ್ಟೆಯಿಂದ ಗೊಂಬಿಗುಡಿಯವರೆಗೂ ರಸ್ತೆ ವಿಸ್ತರಣೆ ಕಾರ್ಯವನ್ನು ಕೈಗೊಳ್ಳಲಾಯಿತು. ಐದು ಅಂತಸ್ತುಗಳ ಕಟ್ಟಡಗಳ ಮುಂಭಾಗವನ್ನು ಮುಲಾಜಿಲ್ಲದೆ ಕೆಡವಿ ಹಾಕಲಾಯಿತು. ಧೈರ್ಯ ಪ್ರದರ್ಶಿಸಿದ್ದ ಅಧಿಕಾರಿಗಳು ಮುಂದೆ ಬಂದಂತೆ ಮೆತ್ತಗಾದರು ಎಂಬ ಆರೋಪ ಸಾರ್ವಜನಿಕರಿಂದ ಕೇಳಲಾರಂಭಿಸಿತು. ಅರಳಿಕಟ್ಟೆಯಿಂದ ಕಾಲೇಜು ರಸ್ತೆ ಕಡೆಗೆ ಬಂದರೆ ಎಡಭಾಗದಲ್ಲಿ ಮಾರಿಹಾಳ ವ್ಯಾಪಾರ ಮಳಿಗೆ ಮುಂದೆ ನೇರವಾಗಿ ಚರಂಡಿ ನಿರ್ಮಾಣ ಕಾಮಗಾರಿ ನಡೆಸಲಾಗಿದೆ. ಬಲ ಬದಿಗೆ ನೋಡಿದರೆ ಇದೇ ಚರಂಡಿ ಕಾಮಗಾರಿಯು ವಕ್ರತೆಯನ್ನು ಪಡೆದಿದೆ ಎಂದು ಜನರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಬಳಿಗಾರ ಓಣಿಗೆ ಸಾಗುವ ತಿರುವು ಇರುವ ಸ್ಥಳದಲ್ಲಿ ತೆರವುಗೊಳಿಸಿದ್ದ ಅಂಗಡಿಯೊಂದರ ಮುಂಭಾಗ ಮತ್ತೆ ನಿರ್ಮಿಸಿಕೊಳ್ಳಲು ಅನುಮತಿ ನೀಡಲಾಗಿದೆ ಎಂಬ ಮಾತುಗಳು ಜನರಿಂದ ಕೇಳಿ ಬರುತ್ತವೆ. ಈ ಬಗ್ಗೆ ಕೇಳಿದರೆ ನಾವೇನು ಅನುಮತಿ ನೀಡಿಲ್ಲ. ಈಗಾಗಲೇ ತೆರವುಗೊಳಿಸಿರುವ ಕಟ್ಟಡ ಪುನಃ ನಿರ್ಮಿಸಿಕೊಂಡರೆ ಮತ್ತೆ ನಾವು ತೆರವುಗೊಳಿಸುತ್ತವೆ ಎಂದು ಪಟ್ಟಣ ಪಂಚಾಯಿತಿ ಅಧಿಕಾರಿಗಳು ನುಡಿಯುತ್ತಾರೆ. ಅಳತೆ ಮಾಡಿ ಕೆಡವಿ ಅವರಿಗೆ ಆರ್ಥಿಕವಾಗಿ ಹಾನಿ ಮಾಡಿ, ನಂತರ ಈಗ ನಿಗದಿತ ಅಳತೆಯಲ್ಲಿ ಬರುವುದಿಲ್ಲ ಎಂದು ಹೇಳುವ ಮೂಲಕ ಲೋಕೋಪಯೋಗಿ ಇಲಾಖೆ ತಿಳಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಸಾರ್ವಜನಿಕರು ಕೇಳುತ್ತಾರೆ.

ಬಳಿಗಾರ ಓಣಿಯ ಕ್ರಾಸ್ ಮುಂದೆ ಬಂದರೆ ಕಾಲೇಜು ಆಡಳಿತ ಮಂಡಳಿ ನಿರ್ಮಿಸಿರುವ ‘ಮಹಾದ್ವಾರ’ವನ್ನು ಹಾಗೆ ಬಿಡಲಾಗಿದೆ. ಹಲವರಿಗೆ ತೆರವಿನ ‘ಶಿಕ್ಷೆ’ ಮತ್ತೆ ಕೆಲವರ ಅಂಗಡಿ ಕೆಡವಿದರೂ ಪುನಃ ಅದೇ ಕಟ್ಟಡ ಕಟ್ಟಿಕೊಳ್ಳುವ ‘ರಕ್ಷೆ’ ನೀಡುವುದು ಸರಿಯಲ್ಲ ಎಂಬುದು ಜನರ ವಾದವಾಗಿದೆ.

ಇಲ್ಲಿಯ ಅಧಿಕಾರಿಗಳ ಈ ತಾರತಮ್ಯ ನೀತಿ ವಿರುದ್ಧ ಜಿಲ್ಲಾಧಿಕಾರಿ ಅವರು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260831-21-1940777944

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ