ಬೆಳಗಾವಿ: ಸೌಕರ್ಯವಿಲ್ಲದೆ ‘ಬಡ’ವಾದ ಬಸ್‌ ನಿಲ್ದಾಣಗಳು!

ಬೆಳಗಾವಿ: ಸೌಕರ್ಯವಿಲ್ಲದೆ ‘ಬಡ’ವಾದ ಬಸ್‌ ನಿಲ್ದಾಣಗಳು!

ಬೆಳಗಾವಿ: ಸೌಕರ್ಯವಿಲ್ಲದೆ ‘ಬಡ’ವಾದ ಬಸ್‌ ನಿಲ್ದಾಣಗಳು!

ಬೆಳಗಾವಿ: ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಶೌಚಗೃಹಗಳು ಸರಿಯಾಗಿ ನಿರ್ವಹಣೆ ಆಗುತ್ತಿಲ್ಲ. ಕುಳಿತುಕೊಳ್ಳಲು ಆಸನಗಳು ಸುಸ್ಥಿತಿಯಲ್ಲಿಲ್ಲ. ಶುಚಿತ್ವ ಇಲ್ಲ. ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಇಲ್ಲ...!

ಬೆಳಗಾವಿ ನಗರ ಮಾತ್ರವಲ್ಲ; ಜಿಲ್ಲೆಯ ವಿವಿಧ ತಾಲ್ಲೂಕು ಕೇಂದ್ರ ಮತ್ತು ಪಟ್ಟಣಗಳಲ್ಲಿ ಇರುವ ಬಸ್‌ ನಿಲ್ದಾಣಗಳ ಸ್ಥಿತಿ–ಗತಿ ಇದು.

ಬೆಳಗಾವಿಯ ಕೇಂದ್ರೀಯ ಬಸ್‌ ನಿಲ್ದಾಣದಲ್ಲಿ ಅಷ್ಟಾಗಿ ಗಂಭೀರ ಸಮಸ್ಯೆ ಇಲ್ಲ. ಆದರೆ, ರೈಲ್ವೆ ನಿಲ್ದಾಣ ಮುಂಭಾಗದಲ್ಲಿ ಇರುವ ಬಸ್‌ ನಿಲ್ದಾಣ ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದೆ!

ಇಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಪದಾರ್ಥ ಎಸೆಯಲಾಗಿದೆ. ಪ್ರಯಾಣಿಕರಿಗೆ ಕುಳಿತುಕೊಳ್ಳಲು ಅಳವಡಿಸಿದ್ದ ಆಸನಗಳು ಮುರಿದುಬಿದ್ದಿವೆ. ಈ ನಿಲ್ದಾಣದ ಮೂಲಕ ನಿತ್ಯವೂ ಸಂಚರಿಸುವ ಸಾವಿರಾರು ಪ್ರಯಾಣಿಕರ ಗೋಳು ಹೇಳತೀರದು.

ಲಭಿಸದ ಅಗತ್ಯ ಸೌಕರ್ಯ: ಸವದತ್ತಿ ಬಸ್‌ ನಿಲ್ದಾಣಕ್ಕೆ ಹೊಸ ಕಟ್ಟಡ ನಿರ್ಮಾಣವಾಗಿದೆ. ಆದರೆ, ಪ್ರಯಾಣಿಕರಿಗೆ ಅಗತ್ಯ ಮೂಲಸೌಕರ್ಯ ಲಭಿಸುತ್ತಿಲ್ಲ. ಮುಖ್ಯವಾಗಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಮಹಿಳಾ ವಿಶ್ರಾಂತಿ ಕೊಠಡಿ, ಮಕ್ಕಳ ಪೋಷಣಾ ಕೊಠಡಿ ಹಾಗೂ ಲಗೇಜ್‌ ಕೊಠಡಿಗಳು ಬೀಗ ಜಡಿದ ಸ್ಥಿತಿಯಲ್ಲಿದ್ದು, ಉಪಯೋಗಕ್ಕೆ ಬಾರದಂತಾಗಿವೆ!

ಈ ಹಿಂದೆ ಇದ್ದ ಶೌಚಗೃಹ ಕಟ್ಟಡವೂ ಬಳಕೆಯಾಗದೆ ಪಾಳುಬಿದ್ದಿದೆ. ನಿಲ್ದಾಣದ ಆವರಣದಲ್ಲಿ ಕಸದ ರಾಶಿಯೇ ಇದೆ.

ಬಸ್‌ಗಾಗಿ ರಸ್ತೆಪಕ್ಕ ಕಾಯಬೇಕಿದೆ!: ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ–4ಕ್ಕೆ ಹೊಂದಿಕೊಂಡ ಎಂ.ಕೆ.ಹುಬ್ಬಳ್ಳಿಯಲ್ಲಿ ಸುಸಜ್ಜಿತ ಬಸ್‌ ನಿಲ್ದಾಣವೇ ಇಲ್ಲ. ಹಾಗಾಗಿ ಪ್ರಯಾಣಿಕರು ಬಸ್‌ಗಾಗಿ ಕಾಯುತ್ತ ರಸ್ತೆಬದಿ ಅಥವಾ ಯಾವುದಾದರೂ ಅಂಗಡಿಗಳ ಬಳಿ ನಿಲ್ಲುವಂತಾಗಿದೆ. ಮಳೆಯಲ್ಲಿ ಆಶ್ರಯಕ್ಕಾಗಿ ಮುರುಕು ಅಂಗಡಿಗಳೇ ಪ್ರಯಾಣಿಕರಿಗೆ ಆಸರೆ.

ಮುನವಳ್ಳಿ ಬಸ್‌ ನಿಲ್ದಾಣ: ಇಕ್ಕಟ್ಟಿನಿಂದ ಕೂಡಿದ್ದು, ಪ್ರಯಾಣಿಕರಿಗೆ ಕುಳಿತುಕೊಳ್ಳಲು ಅಳವಡಿಸಿದ್ದ ಆಸನದ ಕಲ್ಲುಗಳು ಕಳ್ಳತನವಾಗಿವೆ. ರಾತ್ರಿ ಬೆಳಕಿನ ವ್ಯವಸ್ಥೆ ಇಲ್ಲ. ನಿಲ್ದಾಣದ ಪಕ್ಕದಲ್ಲಿರುವ ಒಳಚರಂಡಿ ಮೇಲೆ ಕಲ್ಲುಗಳನ್ನು ಜೋಡಿಸಿಲ್ಲ. ಹಾಗಾಗಿ ಇಡೀ ನಿಲ್ದಾಣದ ತುಂಬೆಲ್ಲ ದುರ್ವಾಸನೆ ಬೀರುತ್ತಿದ್ದು, ಪ್ರಯಾಣಿಕರು ಮೂಗಿಗೆ ಕರವಸ್ತ್ರ ಕಟ್ಟಿಕೊಂಡೇ ಬಸ್‌ ಏರುವಂತಾಗಿದೆ.

ಸೂಕ್ತ ಆಸನಗಳಿಲ್ಲ: ವಿವಿಧ ತಾಲ್ಲೂಕು ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ಯರಗಟ್ಟಿ ಬಸ್‌ ನಿಲ್ದಾಣ ಮೂಲಸೌಕರ್ಯ ಕೊರತೆಯಿಂದ ತತ್ತರಿಸಿದೆ. ಶೌಚಗೃಹಗಳು ಸುಸ್ಥಿತಿಯಲ್ಲಿಲ್ಲ. ಶುದ್ಧ ಕುಡಿಯುವ ನೀರಿಲ್ಲ. ಬೇಡಿಕೆಯಷ್ಟು ಆಸನಗಳ ಕೊರತೆಯಿಂದ ಪ್ರಯಾಣಿಕರು ಬಸ್‌ಗಾಗಿ ಕಾಯುತ್ತ ನಿಲ್ಲುವಂತಾಗಿದೆ.

ರಾಮದುರ್ಗದಲ್ಲಿ ಎರಡು ಬಸ್‌: ನಿಲ್ದಾಣಗಳಿವೆ. ಒಂದು ಹೊಸತು, ಮತ್ತೊಂದು ಗ್ರಾಮೀಣ ನಿಲ್ದಾಣ. ಎರಡೂ ಕಡೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಕುಡಿಯುವ ನೀರಿಗಾಗಿ ಪ್ರಯಾಣಿಕರು ಹೋಟೆಲ್‌ಗಳನ್ನೇ ಆಶ್ರಯಿಸಬೇಕಿದೆ.

ಎಲ್ಲೆಂದರಲ್ಲಿ ಪಾರ್ಕಿಂಗ್‌: ಮೂಡಲಗಿ ಬಸ್‌ ನಿಲ್ದಾಣದ ಆವರಣದಲ್ಲಿ ಎಲ್ಲೆಂದರಲ್ಲಿ ಬೈಕ್‌, ಕಾರು ನಿಲ್ಲಿಸುತ್ತಿರುವುದರಿಂದ ಪ್ರಯಾಣಿಕರಿಗೆ ಕಿರಿಕಿರಿಯಾಗಿದೆ. ನಿರ್ವಹಣೆ ಇಲ್ಲದೆ ಶೌಚಗೃಹ ಬಂದ್‌ ಆಗಿ, ಪ್ರಯಾಣಿಕರು ಅದರಲ್ಲೂ ಮಹಿಳಾ ಪ್ರಯಾಣಿಕರು ಕಷ್ಟ ಅನುಭವಿಸುತ್ತಿದ್ದಾರೆ.

ವಿಶ್ರಾಂತಿ ಕೊಠಡಿ ಬೇಕಿದೆ: ಗೋಕಾಕದ ಹಳೇ ಬಸ್‌ ನಿಲ್ದಾಣದ ಎದುರು, ಆರು ವರ್ಷಗಳ ಹಿಂದೆ ಹೊಸ ನಿಲ್ದಾಣ ತಲೆ ಎತ್ತಿದೆ. ಇಲ್ಲಿ ಮಹಿಳೆಯರು, ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ವಿಶೇಷ ಸೌಲಭ್ಯವುಳ್ಳ ವಿಶ್ರಾಂತಿ ಕೊಠಡಿಗಳ ಅಗತ್ಯವಿದೆ.

ಬೈಲಹೊಂಗಲ ಬಸ್‌ ನಿಲ್ದಾಣದಲ್ಲಿ ಮೂಲಸೌಕರ್ಯ ಕೊರತೆ ಎದ್ದುಕಾಣುತ್ತಿದೆ. ಸ್ವಚ್ಛತೆ ಇಲ್ಲ, ಶುದ್ಧ ಕುಡಿಯುವ ನೀರಿಲ್ಲ. ಆಗಾಗ ಬಸ್‌ಗಳ ಪ್ಲಾಟ್‌ಫಾರಂ ಬದಲಿಸುವುದರಿಂದ ಪ್ರಯಾಣಿಕರು ಗೊಂದಲಕ್ಕೀಡಾಗುವುದು ತಪ್ಪಿಲ್ಲ. ಸರಿಯಾದ ಮಾಹಿತಿ ಫಲಕಗಳೂ ಇಲ್ಲ!

ಹುಕ್ಕೇರಿ ನಿಲ್ದಾಣದಲ್ಲಿ ಕುಡಿಯುವ ನೀರಿನ ಸೌಲಭ್ಯ ಅಷ್ಟಕಷ್ಟೇ ಇದೆ. ಶೌಚಗೃಹ ಸರಿಯಾಗಿ ನಿರ್ವಹಣೆ ಆಗಬೇಕಿದೆ.

ಪ್ರಜಾವಾಣಿ ತಂಡ: ಚನ್ನಪ್ಪ ಮಾದರ, ಪಿ.ಜಿ.ಕೊಣ್ಣೂರ, ರಾಮೇಶ್ವರ ಕಲ್ಯಾಣಶೆಟ್ಟಿ, ಬಾಲಶೇಖರ ಬಂದಿ, ಪ್ರದೀಪ ಮೇಲಿನಮನಿ, ಬಸವರಾಜ ಶಿರಸಂಗಿ, ರವಿಕುಮಾರ ಹುಲಕುಂದ, ಪರಶುರಾಮ ನಂದೇಶ್ವರ, ಶಿವಾನಂದ ವಿಭೂತಿಮಠ, ಮಹಾಂತೇಶ ವಿರಕ್ತಮಠ, ತಾನಾಜಿ ಮುರಂಕರ

ವ್ಯಾಪಾರ ಮಳಿಗೆಯಾದ ಬಸ್‌ ನಿಲ್ದಾಣ!

ಚನ್ನಮ್ಮನ ಕಿತ್ತೂರು: ಇಲ್ಲಿನ ಹೆಸ್ಕಾಂ ಬಳಿ ಇರುವ ಮುಖ್ಯ ಬಸ್‌ ನಿಲ್ದಾಣ ಸುಸಜ್ಜಿತವಾಗಿದೆ. ಆದರೆ, ಪಟ್ಟಣದೊಳಗಿರುವ ನಿಲ್ದಾಣ ಸಂಪೂರ್ಣ ವ್ಯಾಪಾರ ಮಳಿಗೆಯಾಗಿ ಪರಿವರ್ತನೆಯಾಗಿದೆ.

ವ್ಯಾಪಾರ ಕೇಂದ್ರದ ಸ್ವರೂಪ ಪಡೆದ ಪರಿಣಾಮ, ಬಸ್‌ಗಾಗಿ ದಾರಿ ಕಾಯುವ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸ್ಥಳಾವಕಾಶ ಇಲ್ಲದೆ ಒಂಟಿಗಾಲಲ್ಲಿ ನಿಂತುಕೊಳ್ಳುವಂತಾಗಿದೆ. ಹಿರಿಯರ ಶ್ರಮ ಹಾಗೂ ಸಾರ್ವಜನಿಕರ ಹಣದಿಂದ ನಿರ್ಮಾಣವಾಗಿದ್ದ ಈ ಬಸ್‌ ನಿಲ್ದಾಣವನ್ನು ಅಂದಿನ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಉದ್ಘಾಟಿಸಿದ್ದರು. ಊರೊಳಗೆ ನಿಲ್ದಾಣ ನಿರ್ಮಾಣವಾಗಿದ್ದರಿಂದ ಅಂದು ಜನ ಸಂತಸಪಟ್ಟಿದ್ದರು.

ಈ ನಿಲ್ದಾಣದೊಳಗೆ ಹೋಟೆಲ್‌ ಹಾಗೂ ಪಾನ್‌ಬಿಡಾ ಅಂಗಡಿ ತೆರೆಯಲು ಮಾತ್ರ ಅವಕಾಶ ಮಾಡಿಕೊಡಲಾಗಿತ್ತು. ಆದರೆ, ಇಡೀ ನಿಲ್ದಾಣವನ್ನೇ ಅಂಗಡಿಗಳು ಆಕ್ರಮಿಸಿಕೊಂಡವು.

ಯಾವ ಉದ್ದೇಶಕ್ಕಾಗಿ ನಿಲ್ದಾಣ ನಿರ್ಮಾಣವಾಗಿತ್ತೋ, ಅದೇ ಮರೆಯಾಯಿತು. ಇದನ್ನು ಗಮನಿಸಿ ಇದರ ಪಕ್ಕಕ್ಕೆ ಬಸ್‌ ಶೆಲ್ಟರ್‌ ಅನ್ನು ಡಿ.ಬಿ. ಇನಾಮದಾರ ಶಾಸಕರಾಗಿದ್ದಾಗ (2013ರಲ್ಲಿ) ನಿರ್ಮಿಸಿದ್ದರು. ಇತ್ತೀಚೆಗೆ ಕೈಗೊಂಡ ರಸ್ತೆ ವಿಸ್ತರಣೆ ಕಾಮಗಾರಿ ವೇಳೆ, ಆ ಶೆಲ್ಟರ್‌ ಕೂಡ ನೆಲಸಮವಾಗಿದೆ.

ಪ್ರಯಾಣಿಕರಿಗೆ ಅಲ್ಲಲ್ಲಿ ಇರುವ ಅಂಗಡಿಕಾರರ ಕಟ್ಟೆಗಳೇ ಈಗ ನಿಲ್ದಾಣಗಳಾಗಿವೆ. ನಿಲ್ದಾಣದಲ್ಲಿನ ಒಂದೆರಡು ಅಂಗಡಿಗಳನ್ನಾದರೂ ತೆರವು ಮಾಡಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಬೇಕಿದೆ.

ಬೆಳಗಾವಿ ವಿಭಾಗದಲ್ಲಿ ಇರುವ ಎಲ್ಲ ಬಸ್‌ ನಿಲ್ದಾಣಗಳಲ್ಲೂ ಪ್ರಯಾಣಿಕರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುವುದು. ಸಮಸ್ಯೆ ಇರುವ ಕಡೆ ಸ್ಪಂದಿಸಲಾಗುವುದು

ಶಶಿಧರ ಎಂ.ವಿ., ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ, ಸಾರಿಗೆ ಸಂಸ್ಥೆ

ಸದಾ ಜನಸಂದಣಿಯಿಂದ ಕೂಡಿರುವ ಯರಗಟ್ಟಿ ನಿಲ್ದಾಣ ಕನಿಷ್ಠ ಸೌಕರ್ಯವಿಲ್ಲದೆ ಸೊರಗಿದೆ. ಕಳ್ಳತನ ತಪ್ಪಿಸಲು ಪೊಲೀಸರ ನಿಯೋಜನೆ ಮಾಡಬೇಕಿದೆ

ಚಿದಂಬರ ಕಟ್ಟಿಮನಿ, ಸಾಮಾಜಿಕ ಕಾರ್ಯಕರ್ತ

ಅಧಿಕೃತವಾಗಿ ಉದ್ಘಾಟನೆ ಆಗಿಲ್ಲ

ಖಾನಾಪುರ: ಪಟ್ಟಣದಲ್ಲಿ 2022ರಲ್ಲಿ ಹೊಸ ಬಸ್‌ ನಿಲ್ದಾಣ ನಿರ್ಮಾಣವಾಗಿದೆ. ಪ್ರಯಾಣಿಕರಿಗೆ ಬಳಕೆಗೆ ಮುಕ್ತವಾಗಿ, ಸೌಕರ್ಯವನ್ನೂ ಕಲ್ಪಿಸಲಾಗಿದೆ. ಆದರೆ, ಕಾರಣಾಂತರದಿಂದ ಈ ನಿಲ್ದಾಣ ಅಧಿಕೃತವಾಗಿ ಉದ್ಘಾಟನೆಯೇ ಆಗಿಲ್ಲ. ಪ್ರಯಾಣಿಕರು ಎಲೆ ಅಡಿಕೆ, ಗುಟ್ಕಾ ತಿಂದು ಉಗಿಯುವುದರಿಂದ ನಿಲ್ದಾಣದ ಗೋಡೆಗಳು ಮತ್ತು ಆವರಣ ಬಣ್ಣ–ಬಣ್ಣವಾಗಿ ಕಾಣುತ್ತಿದೆ.

ನಗರ ಬಸ್‌ ನಿಲ್ದಾಣಕ್ಕೆ ಬೇಡಿಕೆ

ಅಥಣಿ: ಸ್ಥಳೀಯ ಬಸ್‌ ನಿಲ್ದಾಣ ಪಕ್ಕದಲ್ಲಿ ಶೌಚಗೃಹವಿದ್ದು, ಮಹಿಳಾ ಪ್ರಯಾಣಿಕರು ಪರದಾಡುವಂತಾಗಿದೆ. ನಿಲ್ದಾಣದಲ್ಲಿ ಮೂತ್ರ ವಿಸರ್ಜನೆಗೂ ಹಣ ಪಡೆಯುತ್ತಿರುವುದಕ್ಕೆ ಪ್ರಯಾಣಿಕರಿಂದ ವಿರೋಧ ವ್ಯಕ್ತವಾಗುತ್ತಿದ್ದು, ಮಳೆಯಾದರೆ ನಿಲ್ದಾಣದ ಚಾವಣಿ ಸೋರುತ್ತಿದೆ.

ವೇಗವಾಗಿ ಬೆಳೆಯುತ್ತಿರುವ ಅಥಣಿಯಲ್ಲಿ ನಗರ ಬಸ್‌ ನಿಲ್ದಾಣಕ್ಕೂ ಬೇಡಿಕೆ ಇದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260810-21-692803594

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ