ಶಿರಸಿ | ನೆಟ್‌ವರ್ಕ್ ಅಭಾವ: ಪಶುಧನ್ ಸೇವೆಗೆ ಹಿನ್ನಡೆ

ಶಿರಸಿ | ನೆಟ್‌ವರ್ಕ್ ಅಭಾವ: ಪಶುಧನ್ ಸೇವೆಗೆ ಹಿನ್ನಡೆ

ಶಿರಸಿ | ನೆಟ್‌ವರ್ಕ್ ಅಭಾವ: ಪಶುಧನ್ ಸೇವೆಗೆ ಹಿನ್ನಡೆ

ಶಿರಸಿ: ದಟ್ಟ ಅರಣ್ಯ ಮತ್ತು ನೆಟ್‌ವರ್ಕ್ ಸಮಸ್ಯೆಯಿಂದ ಆವೃತವಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ, ಸಂಪೂರ್ಣ ಆನ್‌ಲೈನ್ ಆಧಾರಿತ 'ಭಾರತ್ ಪಶುಧನ್' ತಂತ್ರಾಂಶವು ಕೃತಕ ಗರ್ಭಧಾರಣಾ ತಂತ್ರಜ್ಞರಿಗೆ ಹಾಗೂ ರೈತರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಕೇಂದ್ರ ಸರ್ಕಾರದ ಪಶುಸಂಗೋಪನಾ ಇಲಾಖೆಯಿಂದ ಜಾರಿಗೆ ತರಲಾದ ಭಾರತ್ ಪಶುಧನ್ ಆನ್‌ಲೈನ್ ತಂತ್ರಾಂಶವು ಜಾನುವಾರುಗಳ ಆರೋಗ್ಯ, ಕೃತಕ ಗರ್ಭಧಾರಣೆ, ಲಸಿಕಾಕರಣ ಹಾಗೂ ಮಾಲೀಕತ್ವದ ವಿವರಗಳನ್ನು ಡಿಜಿಟಲೀಕರಣಗೊಳಿಸುವ ಉದ್ದೇಶ ಹೊಂದಿದೆ. ಆದರೆ, ಜಿಲ್ಲೆಯ ಶಿರಸಿ, ಜೊಯಿಡಾ, ಸಿದ್ದಾಪುರ, ಯಲ್ಲಾಪುರ ಹಾಗೂ ಅಂಕೋಲಾ ತಾಲ್ಲೂಕುಗಳ ಶೇಕಡಾ 70ಕ್ಕೂ ಹೆಚ್ಚು ಭಾಗವು ದಟ್ಟ ಅರಣ್ಯ ಹಾಗೂ ನೆಟ್‌ವರ್ಕ್ ರಹಿತ ಗ್ರಾಮೀಣ ವಲಯದಲ್ಲಿದೆ. ತಂತ್ರಾಂಶವು ಸಂಪೂರ್ಣವಾಗಿ ಸಕ್ರಿಯ ಇಂಟರ್ನೆಟ್ ಸಂಪರ್ಕದ ಮೇಲೆಯೇ ಕಾರ್ಯನಿರ್ವಹಿಸುವುದರಿಂದ, ನೆಟ್‌ವರ್ಕ್ ಇಲ್ಲದ ದಟ್ಟ ಕಾಡಿನ ಒಳಗಿನ ಹಳ್ಳಿಗಳಲ್ಲಿ ಜಾನುವಾರುಗಳಿಗೆ ಕೃತಕ ಗರ್ಭಧಾರಣೆ ಅಥವಾ ಚಿಕಿತ್ಸೆ ನೀಡಿದ ತಕ್ಷಣವೇ ಮಾಹಿತಿ ಅಳವಡಿಸಲು ಸಾಧ್ಯವಾಗುತ್ತಿಲ್ಲ.

‘ತಂತ್ರಾಂಶದಲ್ಲಿ ಕೃತಕ ಗರ್ಭಧಾರಣೆಯ ಮಾಹಿತಿ ನಮೂದಿಸುವಾಗ ಜಾನುವಾರು ಮಾಲೀಕರ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ಕಡ್ಡಾಯವಾಗಿ ನಮೂದಿಸಬೇಕಾಗಿದೆ. ಆದರೆ, ಗ್ರಾಮಗಳಲ್ಲಿ ರೈತರ ಮೊಬೈಲ್‌ಗೆ ಸಿಗ್ನಲ್ ದೊರೆಯದೆ ಒಟಿಪಿ ತಲುಪುವುದೇ ಇಲ್ಲ. ಇದರಿಂದಾಗಿ ತಂತ್ರಜ್ಞರು ಸ್ಥಳದಲ್ಲೇ ಸೇವಾ ವಿವರಗಳನ್ನು ಸಿಸ್ಟಮ್‌ಗೆ ಸೇರಿಸಲು ವಿಫಲರಾಗುತ್ತಿದ್ದಾರೆ. ಸ್ಥಳದಲ್ಲೇ ಸೇವೆ ದಾಖಲಾಗದಿದ್ದರೆ, ತಂತ್ರಜ್ಞರು ತಾವು ಮಾಡಿದ ಕೆಲಸಕ್ಕೆ ಸಿಗಬೇಕಾದ ಶ್ರಮದಾಯಕ ಪ್ರೋತ್ಸಾಹಧನ ಅಥವಾ ಸೇವಾ ದಾಖಲೆಗಳಿಂದ ವಂಚಿತರಾಗುವ ಭೀತಿ ಎದುರಾಗಿದೆ’ ಎಂಬುದು ಬಹುತೇಕ ತಂತ್ರಜ್ಞರ ದೂರಾಗಿದೆ.

‘ಸ್ಥಳದಲ್ಲೇ ಆನ್‌ಲೈನ್ ಅಪ್‌ಡೇಟ್ ಆಗದ ಕಾರಣ, ತಂತ್ರಜ್ಞರು ದಿನವಿಡಿ ಮಾಡಿದ ಕೆಲಸದ ವಿವರಗಳನ್ನು ಪ್ರತ್ಯೇಕವಾಗಿ ಬರೆದಿಟ್ಟುಕೊಂಡು, ಸಂಜೆ ಅಥವಾ ಮರುದಿನ ನೆಟ್‌ವರ್ಕ್ ಸಿಗುವ ಪ್ರದೇಶಗಳಿಗೆ ಬಂದು ಗಂಟೆಗಟ್ಟಲೆ ಕುಳಿತು ಅಪ್‌ಲೋಡ್ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದು ಕೆಲಸದ ಒತ್ತಡವನ್ನು ದ್ವಿಗುಣಗೊಳಿಸಿದೆ. ದೈನಂದಿನ ಕಾರ್ಯಕ್ಷಮತೆಯ ಮೇಲೆಯೂ ನಕಾರಾತ್ಮಕ ಪರಿಣಾಮ ಬೀರುತ್ತಿದೆ’ ಎನ್ನುತ್ತಾರೆ ತಂತ್ರಜ್ಞ ನರಸಿಂಹ ಹೆಗಡೆ ಹುಣಸೆಕೊಪ್ಪ.

‘ತಂತ್ರಾಂಶದಲ್ಲಿ ಆಫ್‌ಲೈನ್ ಮೋಡ್ ಸೌಲಭ್ಯವನ್ನು ನೀಡಬೇಕು. ಇಂಟರ್ನೆಟ್ ಹಾಗೂ ಸಿಗ್ನಲ್ ಇಲ್ಲದ ಸ್ಥಳಗಳಲ್ಲಿಯೂ ಡೇಟಾವನ್ನು ಸಂಗ್ರಹ ಮಾಡಿಕೊಂಡು, ನಂತರ ಮೊಬೈಲ್ ನೆಟ್‌ವರ್ಕ್ ವ್ಯಾಪ್ತಿಗೆ ಬಂದಾಗ ತಾನಾಗಿಯೇ ಸರ್ವರ್‌ಗೆ ಸೇರುವ ತಂತ್ರಜ್ಞಾನವನ್ನು ಈ ಆ್ಯಪ್‌ನಲ್ಲಿ ಸೇರಿಸಬೇಕು. ಜತೆಗೆ ನೆಟ್‌ವರ್ಕ್ ರಹಿತ ಪ್ರದೇಶಗಳಲ್ಲಿ ಒಟಿಪಿ ನಿಯಮದಿಂದ ವಿನಾಯಿತಿ ನೀಡುವ ಅಥವಾ ಪರ್ಯಾಯ ದೃಢೀಕರಣ ಸೌಲಭ್ಯ ಕಲ್ಪಿಸುವ ಅಗತ್ಯವಿದೆ’ ಎನ್ನುತ್ತಾರೆ ಅವರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260809-20-1909930268

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ