ನರೇಗಲ್:‌ ಬಡವರ ಕನಸಿನ ‘ಆಶ್ರಯ’ಕ್ಕೆ ಗ್ರಹಣ

ನರೇಗಲ್:‌ ಬಡವರ ಕನಸಿನ ‘ಆಶ್ರಯ’ಕ್ಕೆ ಗ್ರಹಣ

ನರೇಗಲ್:‌ ಬಡವರ ಕನಸಿನ ‘ಆಶ್ರಯ’ಕ್ಕೆ ಗ್ರಹಣ

ನರೇಗಲ್:‌ ಒಂದೆಡೆ ಸೂರಿಲ್ಲದೆ, ಮಳೆ–ಗಾಳಿಗೆ ನಡುಗುತ್ತಾ ಬದುಕಿನ ಬಂಡಿ ಎಳೆಯುತ್ತಿರುವ ಬಡವರ ಆಕ್ರಂದನ. ಇನ್ನೊಂದೆಡೆ, ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡು, ಫಲಾನುಭವಿಗಳಿಲ್ಲದೆ ಪಾಳುಬಿದ್ದು, ಅಧೋಗತಿಗೆ ತಲುಪಿರುವ ನೂರಾರು ಮನೆಗಳು. ಇದು ನರೇಗಲ್ ಪಟ್ಟಣದ 7ನೇ ವಾರ್ಡಿನ ಮಜರೆ ದ್ಯಾಂಪುರ ಸಮೀಪ ಕಂಡುಬರುವ ದಯನೀಯ ಚಿತ್ರಣ.

ಸರ್ಕಾರದ ಯೋಜನೆಗಳು ಅನುಷ್ಠಾನದಲ್ಲಿ ಕರಾಳವಾಗಿರುತ್ತವೆ ಎಂಬುದಕ್ಕೆ ದ್ಯಾಂಪುರದ ಈ ‘ಆಶ್ರಯಮನೆ’ಗಳೇ ಸಾಕ್ಷಿಯಾಗಿವೆ. ಬಡವರು ಮತ್ತು ಹಿಂದುಳಿದ ವರ್ಗದ ಕುಟುಂಬಗಳಿಗೆ ಸ್ವಂತ ಮನೆಯ ಕನಸನ್ನು ನನಸು ಮಾಡುವ ಸದುದ್ದೇಶದಿಂದ 2011–12ನೇ ಸಾಲಿನಲ್ಲಿ ಸರ್ಕಾರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ದ್ಯಾಂಪುರ ಬಳಿ 39.23 ಎಕರೆ ಭೂಮಿ ಖರೀದಿಸಿತ್ತು. ಅದರಲ್ಲಿನ 36.93 ಎಕರೆಯಲ್ಲಿ 20x30 ಅಳತೆಯ ಖಾಲಿ ನಿವೇಶನಗಳನ್ನು ಸಿದ್ದಪಡಿಸಲಾಗಿತ್ತು. ಆಶ್ರಯ ಯೋಜನೆಯಡಿ 20x30 ಅಳತೆಯ 150 ಕಾಂಕ್ರೋಟ್‌ ಮನೆಗಳನ್ನು ತಲಾ ₹2 ಲಕ್ಷ ವೆಚ್ಚದಲ್ಲಿ ನಿರ್ಮಾಣವನ್ನೂ ಮಾಡಲಾಗಿದೆ.

ಪ್ರತಿ ಮನೆಯಲ್ಲಿ ಚಿಕ್ಕಾದದ ಒಂದು ಪಡಸಾಲೆ, ಅಡುಗೆಮನೆ, ಶಯನಗೃಹ, ಸ್ನಾನದ ಕೋಣೆಗಳು ಇವೆ. ಕಬ್ಬಿಣ್ಣದ ಕದ ಹಾಗೂ ಕಿಟಕಿಗಳನ್ನೂ ಹಾಕಲಾಗಿದೆ. ಇಲ್ಲಿಯವರೆಗೆ ಅನೇಕರಿಗೆ ಈ ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಸದ್ಯ 2.30 ಎಕರೆ ಜಮೀನು ಖಾಲಿಯಾಗಿದ್ದು, ಇದರಲ್ಲಿ ನಿವೇಶನ ಮಾಡಿಲ್ಲ, ಮನೆಗಳನ್ನು ನಿರ್ಮಿಸಿದಿಲ್ಲ. ನಿರ್ಮಿತಿ ಕೇಂದ್ರದವರು ನಿರ್ಮಾಣ ಮಾಡಿರುವ 150 ಕಾಂಕ್ರೀಟ್‌ ಮನೆಗಳನ್ನು 2016ರಂದು ಪಟ್ಟಣ ಪಂಚಾಯಿತಿಗೆ ಹಸ್ತಾಂತರಿಸಲಾಗಿದೆ.

ನಿರ್ಮಾಣಗೊಂಡ ಮನೆಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆಯಾದರೂ, ಇಲ್ಲಿ ವಾಸಯೋಗ್ಯ ಪರಿಸ್ಥಿತಿ ಇಲ್ಲ. ಕುಡಿಯುವ ನೀರು, ರಸ್ತೆ ಹಾಗೂ ವಿದ್ಯುತ್ ವ್ಯವಸ್ಥೆಯನ್ನೇ ನೀಡಿಲ್ಲ. ಇಲ್ಲಿ ಹೆಜ್ಜೆ ಇಡಲೂ ಭಯಪಡುವಂತಹ ವಾತಾವರಣ ಸೃಷ್ಟಿಯಾಗಿದೆ. ಹಾಗಾಗಿ, ಫಲಾನುಭವಿಗಳು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.

100ಕ್ಕೂ ಹೆಚ್ಚಿನ ಮನೆಗಳ ಬಾಗಿಲು, ಕದ ಹಾಗೂ ಕಿಟಕಿಗಳು ಕಳ್ಳರ ಪಾಲಾಗಿವೆ. ಕೆಲವು ಮನೆಗಳ ಒಳಗೆ ಹಾಕಲಾಗಿರುವ ಶೌಚದ ಸೆಟ್‌ಗಳನ್ನು ತೋಡಿಕೊಂಡು ಹೋಗಿದ್ದಾರೆ. ಕೆಲವರು ರಾತ್ರಿ ವೇಳೆ ಕಳವು ಮಾಡಿದರೆ, ಇನ್ನು ಕೆಲವು ಪ್ರಭಾವಿಗಳೇ ಮನೆಗೆ ಅಳವಡಿಸಿದ ಸಾಮಗ್ರಿಗಳನ್ನು ರಾಜಾರೋಷವಾಗಿ ತೆಗೆದುಕೊಂಡು ಹೋಗುತ್ತಾರೆ ಎನ್ನುವ ಆರೋಪವಿದೆ.

ಜನರಿಗೆ ಹಂಚಿಕೆ ಮಾಡುವ ಸಲುವಾಗಿ, ಈಗಾಗಲೇ ಎರಡ್ಮೂರು ಬಾರಿ ಹಣ ಖರ್ಚು ಮಾಡಿ ಬಣ್ಣ ಹಚ್ಚುವ ಹಾಗೂ ಮನೆಗಳ ದುರಸ್ತಿ ಕಾರ್ಯ ಮಾಡಲಾಗಿದೆ. ಆದರೆ, ಜನವಸತಿ ಇಲ್ಲದೆ ಮತ್ತೆ ದುಃಸ್ಥಿತಿಗೆ ತಲುಪಿವೆ. 2020ರ ಮೇ 21ರಂದು 200ಕ್ಕೂ ಹೆಚ್ಚು ವಸತಿ ರಹಿತ ಕುಟುಂಬಗಳು ಇಲ್ಲಿಗೆ ಅಕ್ರಮವಾಗಿ ಬಂದು ಮುಳ್ಳಿನ ಕಂಟಿ ಕಡಿದು ಸ್ವಚ್ಛಗೊಳಿಸಿ ನೆಲೆಕಂಡಿದ್ದರು. ಅಂದಿನ ಮುಖ್ಯಾಧಿಕಾರಿ ಎ.ಎಂ. ನೂರುಲ್ಲಾಖಾನ್‌ ಅವರು ಅಕ್ರಮ ಪ್ರವೇಶ ಎಂದು ಹೇಳಿ, ಪೊಲೀಸರ ಸಹಾಯ ಪಡೆದು ಖಾಲಿ ಮಾಡಿಸಿದ್ದರು.

ಮನೆಗಳನ್ನು ಹಂಚಿಕೆ ಮಾಡಿ ಹಲವಾರು ವರ್ಷ ಕಳೆದಿದೆ. ಸರ್ಕಾರ ಜನರ ತೆರಿಗೆ ದುಡ್ಡಿನಲ್ಲಿ ಕಟ್ಟಿದ ಮನೆ ಹಾಳಾಗುತ್ತಿವೆ. ಇನ್ನಾದರೂ ವಾಸಕ್ಕೆ ತಕ್ಕ ಅನುಕೂಲತೆ ಒದಗಿಸಲು ಮುಂದಾಗಬೇಕು ಎನ್ನುವುದು ಜನರ ಆಗ್ರಹವಾಗಿದೆ.

ವಿದ್ಯುತ್‌ ಸಂಪರ್ಕ, ನೀರಿನ ವ್ಯವಸ್ಥೆ ಇಲ್ಲ

ಎಲ್ಲಾ ಕಷ್ಟಗಳ ನಡುವೆಯೂ ಬೇರೆ ದಾರಿಯಿಲ್ಲದೆ ಇಲ್ಲಿಗೆ ಬಂದು ವಾಸಿಸುತ್ತಿರುವ ಕೆಲವು ಬಡ ಕುಟುಂಬಗಳ ಕಥೆ ಕಣ್ಣೀರು ತರಿಸುವಂತಿದೆ. ವಿದ್ಯುತ್ ಕಂಬಗಳಿದ್ದರೂ ಸಂಪರ್ಕವಿಲ್ಲ. ರಾತ್ರಿಯಾದರೆ ಬ್ಯಾಟರಿ ಬೆಳಕು ಅಥವಾ ಕಂದೀಲು ಬೆಳಕು ಇವರಿಗೆ ಆಸರೆಯಾಗಿದೆ. ಕಂಟಿ-ಪೊದೆಗಳು ಬೆಳೆದಿರುವುದರಿಂದ ಚೇಳು, ಹಾವಿನಂತಹ ವಿಷಜಂತುಗಳ ಕಾಟ ವಿಪರೀತವಾಗಿದೆ.

ದ್ಯಾಂಪುರ ಶಾಲೆಯ ಸಮೀಪ ಹತ್ತಾರು ಕುಟುಂಬಗಳು ಸ್ವಂತ ಹಣದಲ್ಲಿ ನಳ ಹಾಕಿಸಿಕೊಂಡಿದ್ದು, ಅಲ್ಲಿಂದ ಕೊಡಗಳಲ್ಲಿ ನೀರು ಹೊತ್ತು ತರುತ್ತಿದ್ದಾರೆ. ಬಾಗಿಲು, ಕಿಟಕಿಗಳಿಲ್ಲದ ಕಾರಣ ಹಳೆಯ ಸೀರೆ, ಬಟ್ಟೆಗಳನ್ನೇ ಗೋಡೆಗೆ ತೂಗುಹಾಕಿಕೊಂಡು ಬದುಕುತ್ತಿದ್ದಾರೆ.

ಅಕ್ರಮ ಚಟುವಟಿಕೆ ತಾಣವಾದ ಮನೆ

ಊರಿನಿಂದ ತುಸು ದೂರದಲ್ಲಿರುವ ಈ ಆಶ್ರಯ ಮನೆಗಳಲ್ಲಿ ಜನವಸತಿ ಇಲ್ಲದಿರುವುದೇ ಕಿಡಿಗೇಡಿಗಳಿಗೆ ವರವಾಗಿದೆ. ಬಡವರ ಬದುಕಿಗೆ ಆಸರೆಯಾಗಬೇಕಿದ್ದ ಮನೆಗಳು ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿವೆ. ಪ್ರತಿಯೊಂದು ಮನೆಯ ಒಳಗೂ ಮದ್ಯದ ಬಾಟಲಿಗಳು, ಗುಟ್ಕಾ ಹಾಗೂ ಸಿಗರೇಟ್ ಪ್ಯಾಕೇಟುಗಳು ಕಾಣಸಿಗುತ್ತವೆ. ಕೆಲವರು ಇಲ್ಲಿ ಜೂಜಾಟದಲ್ಲಿ ತೊಡಗುತ್ತಿದ್ದಾರೆ. ಈ ಪ್ರದೇಶದಲ್ಲಿ ಓಡಾಡಲು ಮಹಿಳೆಯರು ಮತ್ತು ಮಕ್ಕಳು ಭಯಪಡುತ್ತಿದ್ದಾರೆ. ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಗಸ್ತು ಹೆಚ್ಚಿಸಿ, ಈ ಅಕ್ರಮ ಚಟುವಟಕೆಗಳಿಗೆ ಕಡಿವಾಣ ಹಾಕಬೇಕಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260810-23-102699909

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ