
ಮೈಸೂರು: ಗ್ಲೇಡ್ಸ್ ಬೆಳಗಲಿದೆ ಎಲ್‌ಇಡಿ ದೀಪ
ಮೈಸೂರು: ನಗರದ ಕ್ರಿಕೆಟ್ ಪ್ರಿಯರ ನೆಚ್ಚಿನ ತಾಣವಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣವನ್ನು (ಗಂಗೋತ್ರಿ ಗ್ಲೇಡ್ಸ್) ಸದ್ಯದಲ್ಲೇ ಎಲ್‌ಇಡಿ ದೀಪಗಳು ಬೆಳಗಲಿವೆ.
ಮೈದಾನದಲ್ಲಿ ಸದ್ಯ ಇರುವ ಹಳೆಯ ಮೆಟಲ್ ಫ್ಲಡ್‌ಲೈಟ್‌ಗಳ ಜಾಗದಲ್ಲಿ ಅಂತರರಾಷ್ಟ್ರೀಯ ಮಟ್ಟದ ಅತ್ಯಾಧುನಿಕ ‘ಎಲ್‌ಇಡಿ’ ದೀಪದ ವ್ಯವಸ್ಥೆಯನ್ನು ಅಳವಡಿಸಲು ಕೆಎಸ್‌ಸಿಎ ಮುಂದಾಗಿದೆ. ಆಧುನಿಕ ಕ್ರಿಕೆಟ್‌ನ ಅಗತ್ಯಗಳಿಗೆ ತಕ್ಕಂತೆ, ವಿಶೇಷವಾಗಿ ರಾತ್ರಿ ಪಂದ್ಯಗಳಿಗೆ ನೆರವಾಗುವಂತೆ ಈ ಪರಿಸರ ಸ್ನೇಹಿ ಹೊಸ ತಂತ್ರಜ್ಞಾನಕ್ಕೆ ಚಾಲನೆ ನೀಡಲಾಗುತ್ತಿದೆ.
ಬೆಂಗಳೂರಿನ ಚಿನ್ನಸ್ವಾಮಿ ಹಾಗೂ ಹುಬ್ಬಳ್ಳಿಯ ರಾಜನಗರ ಕ್ರೀಡಾಂಗಣಗಳಲ್ಲಿ ಈ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದ್ದು, ಇದೀಗ ಮೈಸೂರಿಗೂ ಅವಕಾಶ ಒದಗಿದೆ. ಮಾನಸಗಂಗೋತ್ರಿಯ ಹಚ್ಚ ಹಸಿರಿನ ಮಧ್ಯೆ ಇರುವ ಕ್ರೀಡಾಂಗಣದ ಚೆಲುವು ಇದರಿಂದ ಇನ್ನಷ್ಟು ಹೆಚ್ಚಲಿದೆ.
ಏನಿದರ ವಿಶೇಷ?: ಮೈದಾನದ ಪಿಚ್ ಭಾಗಕ್ಕೆ ಬರೋಬ್ಬರಿ 3ಸಾವಿರ ಲಕ್ಸ್ (ಬೆಳಕಿನ ಗುಣಮಟ್ಟ) ಹಾಗೂ ಆಟಗಾರರ ಓಡಾಟದ ಪ್ರದೇಶಕ್ಕೆ 2ಸಾವಿರ ಲಕ್ಸ್‌ಗಿಂತಲೂ ಹೆಚ್ಚಿನ ಬೆಳಕು ಸಿಗಲಿದೆ. ಇದರಿಂದ ಕ್ರೀಡಾಪಟುಗಳು, ಅಂಪೈರ್‌ಗಳು ಹಾಗೂ ಪ್ರೇಕ್ಷಕರಿಗೆ ಇನ್ನಷ್ಟು ಸ್ಪಷ್ಟ ವೀಕ್ಷಣೆ ಸಾಧ್ಯವಾಗಲಿದೆ.
ಈ ಎಲ್‌ಇಡಿ ಲೈಟ್‌ಗಳು ‘ಫ್ಲಿಕರ್-ಫ್ರೀ’ (ಬೆಳಕು ಮಿಟುಕಿಸದಿರುವುದು) ತಂತ್ರಜ್ಞಾನ ಹೊಂದಿರಲಿವೆ. ಇದರಿಂದ ಸೂಪರ್ ಸ್ಲೋ-ಮೋಷನ್ ರೀಪ್ಲೆ ಹಾಗೂ ಅಲ್ಟ್ರಾ ಎಚ್‌ಡಿ (4ಕೆ) ಗುಣಮಟ್ಟದ ಪ್ರಸಾರ ಸಹ ಸಾಧ್ಯವಾಗಲಿದೆ ಎನ್ನುತ್ತಾರೆ ಕೆಎಸ್‌ಸಿಎ ಮೈಸೂರು ವಲಯ ಸಂಚಾಲಕ ಶ್ರೀನಿವಾಸಪ್ರಸಾದ್.
ವಿದ್ಯುತ್ ಉಳಿತಾಯ: ‘ಹ್ಯಾವೆಲ್ಸ್ ಇಂಡಿಯಾ’ ಸಂಸ್ಥೆ ಈ ಯೋಜನೆಯ ಉಸ್ತುವಾರಿ ವಹಿಸಿದ್ದು, ಡಿಎಂಎಕ್ಸ್ ನಿಯಂತ್ರಣ ವ್ಯವಸ್ಥೆ ಇರಲಿದೆ. ಇದು ಹಳೆಯ ವ್ಯವಸ್ಥೆಗಿಂತ ಶೇ 25ರಷ್ಟು ವಿದ್ಯುತ್ ಹಾಗೂ ಡೀಸೆಲ್ ಬಳಕೆ ಕಡಿಮೆ ಮಾಡಲಿದ್ದು, ನಿರ್ವಹಣಾ ವೆಚ್ಚದಲ್ಲೂ ಕೆಎಸ್‌ಸಿಎಗೆ ಭಾರಿ ಉಳಿತಾಯವಾಗಲಿದೆ. ಅಷ್ಟೇ ಅಲ್ಲದೆ, ಪಂದ್ಯ ಆರಂಭವಾಗುವ ಮುನ್ನ ಮತ್ತು ಪಂದ್ಯ ಮುಗಿದ ನಂತರ ಪ್ರೇಕ್ಷಕರನ್ನು ರಂಜಿಸಲು ಡಿಜಿಟಲ್ ಲೈಟಿಂಗ್ ಪ್ರದರ್ಶನ ನೀಡುವ ಸೌಲಭ್ಯವೂ ಇದರಲ್ಲಿದೆ.
ಈ ಹೊಸ ವಿದ್ಯುತ್ ದೀಪಗಳ ಬಳಕೆಯಿಂದ ಕ್ರೀಡಾಂಗಣವು ಪ್ರಮುಖ ಪಂದ್ಯಗಳು ಹಾಗೂ ಪ್ರಮುಖ ದೇಶೀಯ ಲೀಗ್ ಪಂದ್ಯಗಳನ್ನು ನಡೆಸಲು ಸಂಪೂರ್ಣ ಸಜ್ಜಾಗಲಿದೆ. ಭವಿಷ್ಯದಲ್ಲಿ ಇನ್ನಷ್ಟು ಟೂರ್ನಿಗಳ ಆಯೋಜನೆ ಅವಕಾಶಗಳು ಸಿಗುವ ನಿರೀಕ್ಷೆ ಇದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260827-39-1431383306