ಮಡಿಕೇರಿ | ಮೊಮ್ಮಗಳ ಮೇಲೆ ಅತ್ಯಾಚಾರ: ತಾತನಿಗೆ 20 ವರ್ಷ ಜೈಲು ಶಿಕ್ಷೆ
ಮಡಿಕೇರಿ: 15 ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರ ಎಸಗಿದ್ದ 60 ವರ್ಷದ ಅಪರಾಧಿಗೆ ಇಲ್ಲಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯವು 20 ವರ್ಷ ಕಠಿಣ ಶಿಕ್ಷೆ ವಿಧಿಸಿದೆ.
ಬಾಲಕಿಯ ತಂದೆ ಮೃತಪಟ್ಟ ನಂತರ ಆಕೆಯ ತಾಯಿ ಬೇರೊಬ್ಬರನ್ನು ಮದುವೆಯಾಗಿದ್ದರು. ನಂತರ, ತಾಯಿಯೂ ಮೃತಪಟ್ಟ ಬಳಿಕ ಮಲತಂದೆಯು ಬಾಲಕಿಯನ್ನು ಮಕ್ಕಳ ಗೃಹವೊಂದರಲ್ಲಿ ಬಿಟ್ಟು ಹೋಗಿದ್ದರು.
ಈ ವೇಳೆ ತಾನು ಬಾಲಕಿಯನ್ನು ನೋಡಿಕೊಳ್ಳುವುದಾಗಿ ಮುಂದೆ ಬಂದ ಮಲತಂದೆಯ ತಂದೆ ಆಕೆಯನ್ನು 2024ರ ನವೆಂಬರ್‌ನಲ್ಲಿ ಮನೆಗೆ ಕರೆದೊಯ್ದಿದ್ದ. 2025ರ ಮಾರ್ಚ್‌ವರೆಗೂ ಅತ್ಯಾಚಾರ ಎಸಗಿದ್ದ. ಈ ವಿಷಯವನ್ನು ಬಾಲಕಿ ತನ್ನ ಶಿಕ್ಷಕಿಗೆ ಹೇಳಿದ್ದಳು. ಶಿಕ್ಷಕಿ ಪೊಲೀಸರಿಗೆ ದೂರು ನೀಡಿದ್ದರು. ಆ ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯದ ನ್ಯಾಯಾಧೀಶ ಜಿ.ಸುರೇಂದ್ರ, ಅಪರಾಧಿಗೆ 20 ವರ್ಷ ಕಠಿಣ ಶಿಕ್ಷೆ ಹಾಗೂ ₹20 ಸಾವಿರ ದಂಡ ವಿಧಿಸಿದರು. ಬಾಲಕಿಗೆ ₹9 ಲಕ್ಷ ಪರಿಹಾರ ನೀಡಬೇಕು ಎಂದು ಆದೇಶಿಸಿದರು. ಸರ್ಕಾರದ ಪರ ಬಿ.ಎಸ್.ರುದ್ರಪ್ರಸನ್ನ ವಾದ ಮಂಡಿಸಿದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260808-51-1630889850