ಮಕ್ಕಳನ್ನು ಪೋಷಿಸಲಾಗದ ಸ್ಥಿತಿಗೆ ತಲುಪಿದ ಎಂಡೋ ಸಲ್ಫಾನ್‌ ಸಂತ್ರಸ್ತರು

ಮಕ್ಕಳನ್ನು ಪೋಷಿಸಲಾಗದ ಸ್ಥಿತಿಗೆ ತಲುಪಿದ ಎಂಡೋ ಸಲ್ಫಾನ್‌ ಸಂತ್ರಸ್ತರು

ಮಕ್ಕಳನ್ನು ಪೋಷಿಸಲಾಗದ ಸ್ಥಿತಿಗೆ ತಲುಪಿದ ಎಂಡೋ ಸಲ್ಫಾನ್‌ ಸಂತ್ರಸ್ತರು

ಉಪ್ಪಿನಂಗಡಿ: ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿರುವ ಎಂಡೋ ಸಂತ್ರಸ್ತರು ಮತ್ತು ಅವರ ಮನೆಯವರು ಇನ್ನೂ ಕಣ್ಣೀರಿನಲ್ಲಿಯೇ ಕೈತೊಳೆಯುವಂತಾಗಿದೆ.

1987ರಿಂದ 2001ರವರೆಗೆ 3 ಜಿಲ್ಲೆಗಳ ವ್ಯಾಪ್ತಿಯಲ್ಲಿ ಗೇರುಮರಗಳಿಗೆ ತಗುಲಿದ ಕೀಟಾಣುಗಳ ಹಾವಳಿಯನ್ನು ನಿಯಂತ್ರಿಸಲು ಹೆಲಿಕಾಪ್ಟರ್ ಮೂಲಕ ಎಂಡೋಸಲ್ಫಾನ್ ಕೀಟನಾಶಕ ಸಿಂಪಡಿಸಲಾಗಿತ್ತು. ಇದರ ದುಷ್ಪರಿಣಾಮದಿಂದಾಗಿ ಗೇರು ತೋಪುಗಳಿರುವ ಪ್ರದೇಶದ ಜನತೆಗೆ ‘ಹೈಡ್ರೋಸೆಫಲಸ್’ ಸ್ವರೂಪದ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಲಾರಂಭಿಸಿತು. ಬುದ್ಧಿಮಾಂದ್ಯತೆ, ಅಂಗವಿಕಲತೆ, ದೇಹದ ವಿಪರೀತ ಬೆಳವಣಿಗೆ, ಮಾನಸಿಕ ಅಸ್ವಸ್ಥತೆ, ದೃಷ್ಟಿ ಹೀನತೆ, ಸ್ತ್ರಿರೋಗ, ಬಂಜೆತನ... ಹೀಗೆ ಹಲವು ಆರೋಗ್ಯ ತೊಂದರೆಗಳು ಬಾಧಿಸಿದವು.

ಅಂದು ಎಳೆಯರಾಗಿದ್ದವರೆಲ್ಲರೂ ಇಂದು ಬೆಳೆದು ವಯಸ್ಸಿನಲ್ಲಿ ದೊಡ್ಡವರಾಗಿದ್ದಾರೆ. ಆದರೆ, ಅವರೆಲ್ಲರೂ ಪೋಷಕರ ಆಸರೆ, ನಿಗಾದಲ್ಲೇ ಇದ್ದಾರೆ.

ಕಡಬ ತಾಲ್ಲೂಕು ಆಲಂಕಾರು ಗ್ರಾಮದ ಬುಡೇರಿಯಾ ನಿವಾಸಿ ರಾಜೀವಿ ಪೂಜಾರಿ ಅವರಿಗೆ 3 ಮಕ್ಕಳು (ಇಬ್ಬರು ಅವಳಿ). ಈ ಪೈಕಿ ದಿನೇಶ 6 ತಿಂಗಳ ಹಿಂದೆ ನಿಧನರಾಗಿದ್ದಾರೆ. ದಿನೇಶ್ ಅವರ ತಂದೆ ಸುನಂದ ಪೂಜಾರಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹೀಗೆ ಒಂದೊಂದು ಮನೆಯಲ್ಲೂ ಒಂದೊಂದು ರೀತಿಯಲ್ಲಿ ಸಂಕಷ್ಟ, ಸಮಸ್ಯೆಗಳು ಇವೆ.

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ಆಲಂಕಾರುನಲ್ಲಿ ಎಂಡೋ ಸಂತ್ರಸ್ತರಿಗೆ ಶಾಶ್ವತ ಪುನರ್ವಸತಿ ಕೇಂದ್ರ ತೆರೆಯುವುದಾಗಿ ಸರ್ಕಾರ ನೀಡಿದ ಭರವಸೆ ಇನ್ನೂ ಈಡೇರಿಲ್ಲ. ಐದು ಎಕರೆ ಜಾಗ ಮೀಸಲಿಟ್ಟು ಕಾದರೂ ಎಂಡೋ ಸಂತ್ರಸ್ತರ ಭಾಗ್ಯದ ಬಾಗಿಲು ತೆರೆಯಲೇ ಇಲ್ಲ. ಎಂಡೋ ಸಂತ್ರಸ್ತರ ಪಾಲಿಗೆ ಶಾಶ್ವತ ಪುನರ್ವಸತಿ ಕೇಂದ್ರ ಮರೀಚಿಕೆಯಾಗಿಯೇ ಉಳಿದಿದೆ.

ಈಡೇರದ ಭರವಸೆ: ಸಿದ್ದರಾಮಯ್ಯ ಅವರು ಮೊದಲ ಅವಧಿಯ ಮುಖ್ಯಮಂತ್ರಿ ಆಗಿದ್ದಾಗ ಜಿಲ್ಲೆಗೆ ಒಂದೊಂದು ಎಂಡೋ ಸಂತ್ರಸ್ತರ ಶಾಶ್ವತ ಪುನರ್ವಸತಿ ಕೇಂದ್ರ ನಿರ್ಮಿಸುವುದಾಗಿ ತಿಳಿಸಲಾಗಿತ್ತು. ಕಡಬ ತಾಲ್ಲೂಕಿನ ಆಲಂಕಾರು ಕೂಡ ಒಳಗೊಂಡಿತ್ತು. ಆಗ ಆರೋಗ್ಯ ಸಚಿವರಾಗಿದ್ದ ಯು.ಟಿ.ಖಾದರ್ ಆಲಂಕಾರಿಗೆ ಬಂದು ಮೀಸಲಿಟ್ಟ ಜಾಗ ಪರಿಶೀಲಿಸಿ, ವರ್ಷದೊಳಗೆ ಪುನರ್ವಸತಿ ಕೇಂದ್ರ ಸ್ಥಾಪಿಸುವ ಭರವಸೆ ನೀಡಿದ್ದರು. ದಶಕ ಕಳೆದರೂ ಕಾರ್ಯರೂಪಕ್ಕೆ ಬಂದೇ ಇಲ್ಲ.

ಇದಕ್ಕೂ ಮೊದಲು ಡಿ.ವಿ.ಸದಾನಂದಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ಕೊಯಿಲ ಮತ್ತು ಕೊಕ್ಕಡದಲ್ಲಿ ತಾತ್ಕಾಲಿಕ ಪಾಲನಾ ಕೇಂದ್ರವನ್ನು ಸ್ಥಾಪನೆ ಮಾಡಿದ್ದರು. ಅದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ರೀತಿಯಲ್ಲಿ ‘ಡೇ ಕೇರ್ ಸೇಟರ್’ ಆಗಿ ಕಾರ್ಯಾಚರಿಸುತ್ತಿದೆ.

ಮೂರೂ ಜಿಲ್ಲೆಗಳಲ್ಲಿ ಶಾಶ್ವತ ಪುನರ್ವಸತಿ ಕೇಂದ್ರ ತೆರೆಯಬೇಕು, ಶೇ 60ಕ್ಕಿಂತ ಅಧಿಕ ನ್ಯೂನತೆ ಇರುವವರಿಗೆ ಸರ್ಕಾರ ನೀರುವ ₹4 ಸಾವಿರ ಮಾಸಾಶನವನ್ನು ₹6 ಸಾವಿರಕ್ಕೆ, ಶೇ 60ಕ್ಕಿಂತ ಕಡಿಮೆ ನ್ಯೂನತೆ ಇರುವವರಿಗೆ ನೀಡುವ ₹ 2 ಸಾವಿರವನ್ನು ₹ 4 ಸಾವಿರಕ್ಕೆ ಹೆಚ್ಚಿಸಬೇಕು. ಹಾಸಿಗೆ ಹಿಡಿದಿರುವ ಸಂತ್ರಸ್ತರ ಹೆತ್ತವರಿಗೆ ₹5 ಸಾವಿರ ಮಾಸಾಶನ ನೀಡಬೇಕು. ಇದುವರೆಗೆ ಕೇಂದ್ರ ಸರ್ಕಾರದಿಂದ ಯಾವುದೇ ಪರಿಹಾರ ಸಿಕ್ಕಿಲ್ಲ. ಕೇರಳ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಸಮಸ್ಯೆಯಾಗಿದ್ದು, ಪರಿಹಾರ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು. ಹಾಸಿಗೆ ಹಿಡಿದಿರುವ ಸಂತ್ರಸ್ತರಿಗೆ ಹಾಗೂ ಮರಣ ಹೊಂದಿರುವ ಸಂತ್ರಸ್ತರಿಗೆ ತಲಾ ₹10 ಲಕ್ಷ ಪರಿಹಾರ ನೀಡಬೇಕು ಎಂಬುದು ಸಂತ್ರಸ್ತರ ಬೇಡಿಕೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3,762 ಎಂಡೋ ಸಂತ್ರಸ್ತರಿದ್ದು, 774 ಮಂದಿ ಶೇ 100ರಷ್ಟು ಅಂಗವಿಕಲರಾದರೆ 2,301 ಮಂದಿ ಶೇ 60 ರಷ್ಟು ಮತ್ತು 568 ಮಂದಿ ಶೇ 25ರಷ್ಟು ಅಂಗವಿಕಲತೆ ಹೊಂದಿದ್ದಾರೆ. 119 ಎಂಡೋಪೀಡಿತರು ಮೃತಪಟ್ಟಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಒಟ್ಟು 1,513 ಎಂಡೋ ಸಂತ್ರಸ್ತರಿದ್ದು, 807 ಮಂದಿ ಶೇ 100ರಷ್ಟು ಅಂಗವಿಕಲರಾದರೆ, 487 ಮಂದಿ ಶೇ 60ರಷ್ಟು ಹಾಗೂ 219 ಮಂದಿ ಶೇ 25ರಷ್ಟು ಅಂಕ ವಿಕಲತೆ ಹೊಂದಿದ್ದಾರೆ.

50ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 1,831 ಮಂದಿ ಎಂಡೋ ಸಂತ್ರಸ್ತರಿದ್ದು, 1,082 ಮಂದಿ ಶೇಕಡಾ 100ರಷ್ಟು, 744 ಮಂದಿ ಶೇ 60ರಷ್ಟು ಅಂಗವಿಕಲರಾಗಿದ್ದಾರೆ. 50 ಎಂಡೋ ಸಂತ್ರಸ್ತರು ಮೃತಪಟ್ಟಿದ್ದಾರೆ. ಒಟ್ಟು ಸರಾಸರಿ ಶೇ 80ರಷ್ಟು ಮಂದಿ ಹಾಸಿಗೆ ಹಿಡಿದಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260808-29-1380209086

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ