ಹೀರೆಕಾಯಿ ಬೆಳೆದು ₹1.80 ಲಕ್ಷ ಆದಾಯ ಗಳಿಸಿದ ಹೊಸದುರ್ಗ ರೈತ

ಹೀರೆಕಾಯಿ ಬೆಳೆದು ₹1.80 ಲಕ್ಷ ಆದಾಯ ಗಳಿಸಿದ ಹೊಸದುರ್ಗ ರೈತ

ಹೀರೆಕಾಯಿ ಬೆಳೆದು ₹1.80 ಲಕ್ಷ ಆದಾಯ ಗಳಿಸಿದ ಹೊಸದುರ್ಗ ರೈತ

ಹೊಸದುರ್ಗ: ತಾಲ್ಲೂಕಿನ ಕೊಂಡಾಪುರ ಗ್ರಾಮದ ರೈತ ಯೋಗೇಶ್ ಗೌಡ ಅವರು ತಮ್ಮ ಅರ್ಧ ಎಕರೆ ಜಮೀನಿನಲ್ಲಿ ವರ್ಷಕ್ಕೆ 2 ರಿಂದ 3 ಬಾರಿ ಹೀರೆಕಾಯಿ ಬೆಳೆದು, ₹ 1.80 ಲಕ್ಷ ಆದಾಯ ಪಡೆಯುವ ಮೂಲಕ ಇತರೆ ರೈತರಿಗೆ ಮಾದರಿಯಾಗಿದ್ದಾರೆ.

ಐಟಿಐ ಓದಿರುವ ಇವರು ತಮ್ಮ ಭೂಮಿಯಲ್ಲೇ ಬದುಕು ಕಟ್ಟಿಕೊಂಡಿದ್ದಾರೆ. ಇವರ ತಂದೆ ಮಹಾಲಿಂಗಪ್ಪ ಹಲವು ವರ್ಷಗಳಿಂದ ತರಕಾರಿ ಬೆಳೆಯುತ್ತಿದ್ದು, ಯೋಗೇಶ್ ಅವರು ಕಳೆದ ಮೂರು ವರ್ಷಗಳಿಂದ ಅವರಿಗೆ ಸಹಕಾರ ನೀಡುತ್ತಿದ್ದರು. ಕ್ರಮೇಣ ಇವರೇ ಕೃಷಿಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇವರಿಗೆ ಒಟ್ಟಾರೆಯಾಗಿ 8 ಎಕರೆ ಭೂಮಿಯಿದ್ದು, ಅದರಲ್ಲಿ ಎರಡು ಎಕರೆ ಭೂಮಿಯನ್ನು ತರಕಾರಿ ಬೆಳೆಗಳಿಗೆ ಮೀಸಲಿಟ್ಟಿದ್ದಾರೆ. ಇದರಲ್ಲಿ ಅರ್ಧ ಎಕರೆ ಭೂಮಿಯಲ್ಲಿ ನಿರಂತರವಾಗಿ ಹೀರೆಕಾಯಿ ಬೆಳೆದು ಉತ್ತಮ ಆದಾಯ ಗಳಿಸುತ್ತಿದ್ದಾರೆ.

ಆರಂಭದ ಒಂದೆರಡು ವರ್ಷ ಹೀರೆಕಾಯಿ ಬೆಳೆದು ನಷ್ಟ ಅನುಭವಿಸಿದ ಇವರು, ಮೂರನೇ ವರ್ಷ ಸ್ನೇಹಿತರು, ಅಧಿಕಾರಿಗಳು ಹಾಗೂ ಸಾಮಾಜಿಕ ಜಾಲತಾಣಗಳಿಂದ ಸಲಹೆ ಪಡೆದು, ಶಿಸ್ತುಬದ್ಧವಾಗಿ ನಾಟಿ ಮಾಡಿ ಉತ್ತಮ ಆದಾಯ ಪಡೆಯುತ್ತಿದ್ದಾರೆ.

ಅಡಿಕೆ ತೋಟದಲ್ಲಿ ಅಕ್ಕಡಿ ಬೆಳೆಯನ್ನಾಗಿ ಹೀರೆಕಾಯಿಯನ್ನು ಬೆಳೆಯಲಾಗುತ್ತಿದೆ. ಒಂದು ಸಸಿಯಿಂದ ಮತ್ತೊಂದು ಸಸಿಗೆ 2 ಅಡಿ ಹಾಗೂ ಸಾಲಿನಿಂದ ಸಾಲಿಗೆ 6 ಅಡಿ ಅಂತರವಿಟ್ಟು ಬಳ್ಳಿ ನೆಟ್ಟಿದ್ದಾರೆ. ಪ್ರತಿ ಸಾಲಿಗೂ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ.

ಪ್ರತಿ ಸಾಲಿಗೂ 5 ಅಡಿ ಎತ್ತರದಲ್ಲಿ ಬಿದಿರಿನ ಕಂಬ ನಿಲ್ಲಿಸಿ ತಂತಿ ಎಳೆದಿದ್ದಾರೆ. ಒಮ್ಮೆ ಬಿದಿರು ಹಾಗೂ ತಂತಿಗೆ ಹಣ ವ್ಯಯಿಸಿದರೆ, ಮೂರು ವರ್ಷಗಳ ವರೆಗೆ ಅದನ್ನೇ ಉಪಯೋಗಿಸಬಹುದು. ಬೀಜ ಬಿತ್ತುವ ಮುನ್ನ ತಳಗೊಬ್ಬರವಾಗಿ ಸಾವಯವ ಗೊಬ್ಬರ ಬಳಸಬೇಕು. ನಂತರ ವಾರಕ್ಕೊಮ್ಮೆ ಔಷಧ ಸಿಂಪಡಣೆ ಹಾಗೂ 15 ದಿನಗಳಿಗೊಮ್ಮೆ ನಿರಂತರವಾಗಿ ಗೊಬ್ಬರ ನೀಡಬೇಕು. ಸಸಿ ನೆಡುವುದು, ಡ್ರಿಪ್ ಅಳವಡಿಕೆ, ಬಿದಿರು, ತಂತಿ ಹಾಗೂ ಕೂಲಿಕಾರರ ಖರ್ಚು ಸೇರಿ ಒಟ್ಟು ₹ 20,000 ವ್ಯಯವಾಗಿದ್ದು, ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಪಡೆಯಬಹುದು ಎನ್ನುತ್ತಾರೆ ಯೋಗೇಶ್ ಗೌಡ ಅವರ ತಂದೆ ಮಹಾಲಿಂಗಪ್ಪ.

ಹೊಸದುರ್ಗದ ಮಾರುಕಟ್ಟೆಯಲ್ಲಿ ದಿನಕ್ಕೆ ಒಂದೂವರೆಯಿಂದ ಎರಡೂವರೆ ಕ್ವಿಂಟಾಲ್ ಹೀರೆಕಾಯಿ ತಂದು ಕೆ.ಜಿಗೆ ₹ 28ರಿಂದ ₹ 30ರಂತೆ ಮಾರಾಟ ಮಾಡಲಾಗುತ್ತಿದೆ. ಕೆಲವರು ಜಮೀನಿಗೆ ಬಂದು ಸ್ವಲ್ಪ ಪ್ರಮಾಣದಲ್ಲಿ ಖರೀದಿಸುತ್ತಾರೆ. ಎರಡು ದಿನಗಳಿಗೊಮ್ಮೆ ಕೊಯ್ಲು ನಡೆಯುತ್ತದೆ.

ಯೋಗೇಶ್ ಅವರು ತಂದೆಯ ಸಹಕಾರದಿಂದ ವರ್ಷಕ್ಕೆ ಎರಡರಿಂದ ಮೂರು ಬಾರಿ ಹೀರೆಕಾಯಿ ಬೆಳೆಯುತ್ತಿದ್ದಾರೆ. ಈ ಬಾರಿ ಮಳೆಯಿಲ್ಲದೆ ಬೆಳೆ ತುಸು ಬಾಡಿದೆ. ಹದ ಮಳೆಯಾದರೆ ಉತ್ಕೃಷ್ಟ ಇಳುವರಿ ಪಡೆಯಬಹುದು. ಒಂದು ಬೆಳೆಗೆ ₹ 20,000 ವ್ಯಯಿಸಿ, ₹ 60 ಸಾವಿರ ಆದಾಯ ಪಡೆಯಲಾಗುತ್ತಿದೆ. ಹೀಗೆ ವರ್ಷಕ್ಕೆ ಮೂರು ಬಾರಿ ಬೆಳೆ ತೆಗೆದು ₹ 1.80 ಲಕ್ಷ ಆದಾಯ ಗಳಿಸುತ್ತಿದ್ದಾರೆ. ಕುಟುಂಬದವರ ಸಹಕಾರವಿದ್ದರೆ ಕೂಲಿ ಕಾರ್ಮಿಕರ ಅಗತ್ಯವಿರುವುದಿಲ್ಲ. ಹೀರೆಕಾಯಿ ಜೊತೆಗೆ ಟೊಮೆಟೊ, ಬೀನ್ಸ್, ಮೆಣಸಿನಕಾಯಿ ಸೇರಿದಂತೆ ವಿವಿಧ ತರಕಾರಿ ಬೆಳೆಗಳನ್ನು ಬೆಳೆದು ನಿರಂತರವಾಗಿ ಆದಾಯ ಗಳಿಸುತ್ತಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260819-44-2129535153

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ