
ಮುಳ್ಳಯ್ಯನಗಿರಿ ಪ್ರವಾಸ ದುಬಾರಿ: ಆನ್‌ಲೈನ್ ಬುಕಿಂಗ್ ವಿರುದ್ಧ ಆಕ್ರೋಶ
ಚಿಕ್ಕಮಗಳೂರು: ಮುಳ್ಳಯ್ಯನಗಿರಿ ಪ್ರವಾಸಕ್ಕೆ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆಯನ್ನು ಜಿಲ್ಲಾಡಳಿತ ಜಾರಿಗೆ ತಂದಿದ್ದು, ದಿನಕ್ಕೆ 1,200 ವಾಹನಗಳನ್ನು ಸೀಮಿತಗೊಳಿಸಿದೆ. ಇದು ವಾರಾಂತ್ಯ, ಸಾಲು ರಜೆಗಳ ಸಂದರ್ಭದಲ್ಲಿ ಪ್ರವಾಸಿಗರಿಗೆ ದುಬಾರಿಯಾಗುತ್ತಿದ್ದು, ಅವರಿಂದ ಹೆಚ್ಚು ಹಣ ಸುಲಿಗೆ ಮಾಡಲಾಗುತ್ತಿದೆ ಎಂಬ ಆರೋಪ ವ್ಯಕ್ತವಾಗುತ್ತಿದೆ.
ಮುಳ್ಳಯ್ಯನಗಿರಿ ಸೇರಿ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಉಂಟಾಗುತ್ತಿದ್ದ ದಟ್ಟಣೆ ತಪ್ಪಿಸಲು ಜಿಲ್ಲಾಡಳಿತ ಆನ್‌ಲೈನ್ ನೋಂದಣಿ ವ್ಯವಸ್ಥೆ ಮಾಡಿದೆ. ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿ, ಮಾಣಿಕ್ಯಧಾರಾ, ಗಾಳಿಕೆರೆ, ಝರಿ ಜಲಪಾತ, ಹೊನ್ನಮ್ಮನಹಳ್ಳ ವೀಕ್ಷಣೆಗೆ ಬರುವ ಜನ ಈಗ ಆನ್‌ಲೈನ್ ಬುಕ್ಕಿಂಗ್ ಮಾಡುವುದು ಕಡ್ಡಾಯ.
ಆರಂಭದಲ್ಲಿ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆಯನ್ನು ಸ್ಥಳೀಯ ಜೀಪ್ ಚಾಲಕರು ವಿರೋಧ ವ್ಯಕ್ತಪಡಿಸಿದ್ದರು. 100 ಜೀಪ್‌ಗಳಿಗೆ ಮಾತ್ರ ಅವಕಾಶ ನೀಡಿದ್ದು, ವಾರಾಂತ್ಯದಲ್ಲಿ ಹೆಚ್ಚಿನ ಜೀಪ್‌ಗಳಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದರು. ಈಗ ಈ ಆನ್‌ಲೈನ್ ವ್ಯವಸ್ಥೆಯನ್ನು ಖಾಸಗಿ ವಾಹನ ಚಾಲಕರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪ ವ್ಯಾಪಕವಾಗಿದೆ.
ಕೈಮರ ಬಳಿ ಇದ್ದ ಚೆಕ್‌ಪೋಸ್ಟ್ ಈಗ ಎನ್.ಎಂ.ಡಿ.ಸಿ ಬಳಿಗೆ ಸ್ಥಳಾಂತರವಾಗಿದೆ. ಆನ್‌ಲೈನ್‌ನಲ್ಲಿ ₹100 ಪಾವತಿಸಿ ಬುಕ್ಕಿಂಗ್ ಮಾಡಿರುವ ಪಾಸ್ ತೋರಿಸಿದ ನಂತರವೇ ಕಾರುಗಳಿಗೆ ಪ್ರವೇಶ ನೀಡಲಾಗುತ್ತಿದೆ. ವಾರಾಂತ್ಯ ಮತ್ತು ಸಾಲು ಸಾಲು ರಜೆಗಳಿದ್ದ ಸಂದರ್ಭದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುತ್ತದೆ. ಇನ್ನೂ ಹಲವರು ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆ ಬಗ್ಗೆ ಗೊತ್ತಿಲ್ಲದೆ ಚೆಕ್‌ಪೋಸ್ಟ್ ಬಳಿ ಬಂದು ವಾಪಸ್ ತೆರಳುತ್ತಾರೆ.
ಇಂತಹ ಸಂದರ್ಭಗಳಲ್ಲಿ ಮೊದಲೇ ಆನ್‌ಲೈನ್ ಬುಕ್ಕಿಂಗ್ ಮಾಡಿಕೊಳ್ಳುತ್ತಿರುವ ಸ್ಥಳೀಯ ವಾಹನಗಳ ಚಾಲಕರು ಚೆಕ್‌ಪೋಸ್ಟ್‌ಗಿಂತ ಸ್ವಲ್ಪ ಹಿಂದೆ ನಿಲ್ಲುತ್ತಿದ್ದಾರೆ. ಸ್ಥಳೀಯ ಖಾಸಗಿ ವಾಹನ ಚಾಲಕರು ಮೊದಲೇ ಬುಕ್ಕಿಂಗ್ ಮಾಡಿಕೊಳ್ಳುವುದರಿಂದ ಪ್ರವಾಸಿಗರ ಕಾರುಗಳಿಗೆ ಬುಕ್ಕಿಂಗ್ ದೊರಕುವುದಿಲ್ಲ. ವಾಪಸ್ ಹೋಗುವ ಪ್ರವಾಸಿಗರನ್ನು ಮುಳ್ಳಯ್ಯನಗಿರಿ ತೋರಿಸಿಕೊಂಡು ವಾಪಸ್ ತಂದು ಬಿಡಲು ದುಬಾರಿ ಹಣ ಪಡೆಯುತ್ತಿದ್ದಾರೆ ಎಂಬ ಆರೋಪ ಪ್ರವಾಸಿಗರದ್ದು.
ತಮ್ಮ ವಾಹನಗಳಲ್ಲಿ ಕರೆದೊಯ್ದು ವಾಪಸ್ ತಂದು ಬಿಡುತ್ತೇವೆ ಎಂದು ಪ್ರವಾಸಿಗರ ಕಾರುಗಳನ್ನು ಎಲ್ಲೆಂದರಲ್ಲಿ ರಸ್ತೆ ಬದಿಯಲ್ಲಿ ನಿಲುಗಡೆ ಮಾಡಿಸುತ್ತಿದ್ದಾರೆ. ಇದರಿಂದ ರಸ್ತೆ ಬದಿಯಲ್ಲಿ ಕಿರಿಕಿರಿ ಉಂಟಾಗುತ್ತಿದೆ. ಮುಳ್ಳಯ್ಯನಗಿರಿ, ಬಾಬಾಬುಡನ್ ಗಿರಿಗೆ ಹೋಗಿ ಬರಲು ₹4 ಸಾವಿರ, ₹5 ಸಾವಿರ ತನಕ ಪಡೆಯುತ್ತಿರುವುದು ಕಿರಿಕಿರಿ ಉಂಟಾಗುತ್ತಿದೆ ಎಂದು ಪ್ರವಾಸಿಗರು ಹೇಳುತ್ತಾರೆ.
ಆನ್‌ಲೈನ್ ಬುಕ್ಕಿಂಗ್ ಹೆಸರಿನಲ್ಲಿ ಪ್ರವಾಸಿಗರ ಸುಲಿಗೆಯಾದರೆ ಜಿಲ್ಲೆಯ ಪ್ರವಾಸೋದ್ಯಮಕ್ಕೂ ಕೆಟ್ಟ ಹೆಸರು ಬರಲಿದೆ. ಆದ್ದರಿಂದ ಜಿಲ್ಲಾಡಳಿತ ಈ ಬಗ್ಗೆಯೂ ಎಚ್ಚರಿಕೆ ವಹಿಸಬೇಕು. ಮೊದಲೇ ಆನ್‌ಲೈನ್ ಬುಕ್ಕಿಂಗ್ ಮಾಡಿಟ್ಟುಕೊಂಡು ತಮ್ಮದೇ ವಾಹನಗಳಲ್ಲಿ ಕರೆದೊಯ್ಯುವ ಕಿಡಿಗೇಡಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂಬುದು ಅವರ ಒತ್ತಾಯ.
ಮಾಣಿಕ್ಯಧಾರಾ: ಜೀಪ್ ಪ್ರಯಾಣ ಅನಿವಾರ್ಯ
ಮಾಣಿಕ್ಯಾಧಾರಾ ಜಲಪಾತಕ್ಕೆ ಜೀಪ್‌ಗಳಲ್ಲೇ ಹಣ ಕೊಟ್ಟು ತೆರಳಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದು ಕೂಡ ಪ್ರವಾಸಿಗರಿಗೆ ಕಿರಿಕಿರಿ ಉಂಟು ಮಾಡುತ್ತಿದೆ.
ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ತನಕ ಸಾಗಲು ಡಾಂಬರ್ ಮತ್ತು ಕಾಂಕ್ರೀಟ್ ರಸ್ತೆ ಇದೆ. ಅಲ್ಲಿಂದ ಮುಂದಕ್ಕೆ ಮೂರುವರೆ ಕಿಲೋ ಮೀಟರ್ ಸಾಗಿದರೆ ಮಾಣಿಕ್ಯಧಾರಾ ಜಲಪಾತ ಮತ್ತು ದೇವೀರಮ್ಮ ಬೆಟ್ಟ ನೋಡುವ ವೀಕ್ಷಣಾ ಸ್ಥಳಗಳನ್ನು ತಲುಪಬಹುದು.
ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಬಳಿಯ ಪೊಲೀಸ್ ಔಟ್‌ಪೋಸ್ಟ್ ದಾಟಿದ ಕೂಡಲೇ ಎದುರಾಗುವ ರಸ್ತೆ ಕೊರಕಲು ಹಾದಿ ಎದುರಾಗುತ್ತದೆ. ದೊಡ್ಡ ದೊಡ್ಡ ಹೊಂಡಗಳೇ ಬಿದ್ದಿದ್ದು, ಕಾರುಗಳು ಈ ರಸ್ತೆಯಲ್ಲಿ ಸಂಚರಿಸಿದರೆ ಗುಂಡಿಗಳಲ್ಲಿ ಸಿಲುಕಿಕೊಳ್ಳುವುದು ಸಾಮಾನ್ಯವಾಗಿದೆ.
ಕಿರಿದಾದ ರಸ್ತೆಯಲ್ಲಿ ವಾಹನ ಸಿಲುಕಿಕೊಂಡರೆ ದಟ್ಟಣೆ ಉಂಟಾಗುತ್ತಿದೆ. ಜೋರು ಮಳೆ ಬಂದರೆ ರಸ್ತೆ ಇನ್ನಷ್ಟು ಕೊರಕಲು ಬೀಳಲಿದೆ. ಈ ರಸ್ತೆಯಲ್ಲಿ ಒಂದು ಕಿಲೋ ಮೀಟರ್ ಕ್ರಮಿಸಿದರೆ ಮತ್ತೆ ಕಾಂಕ್ರೀಟ್ ರಸ್ತೆ ಸಿಗುತ್ತದೆ. ಮಧ್ಯದ ಒಂದು ಕಿಲೋ ಮೀಟರ್ ಮಾತ್ರ ರಸ್ತೆಯೇ ಇಲ್ಲ. ಈ ರಸ್ತೆಯನ್ನು ಏಕೆ ಕೊರಕಲು ಸಹಿತ ಉಳಿಸಲಾಗಿದೆ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.
‘ಜಿಲ್ಲಾಧಿಕಾರಿ ಕಚೇರಿ ಸೇರಿ ಎಲ್ಲಾ ಇಲಾಖೆಗಳಿಗೆ ಮನವಿ ಸಲ್ಲಿಸಿ ಸುಸ್ತಾಗಿದ್ದೇವೆ. ಒಂದು ಕಿಲೋ ಮೀಟರ್ ರಸ್ತೆ ಮಾತ್ರ ಅಭಿವೃದ್ಧಿಯಾಗಿಲ್ಲ. ಕಾರುಗಳ ಚಾಲನೆಗೆ ಕಷ್ಟವಾಗುವಂತಹ ಗುಂಡಿಗಳನ್ನೂ ತೆಗೆಯುತ್ತಾರೆ. ಜೀಪ್ ಚಾಲಕರು ಕೇಳಿದಷ್ಟು ಹಣ ಕೊಟ್ಟು ಮಾಣಿಕ್ಯಧಾರಾ ಜಲಪಾತ ವೀಕ್ಷಣೆ ಮಾಡಬೇಕದ ಸ್ಥಿತಿ ಇದೆ’ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.
ಪ್ರವಾಸಿಗರ ಸುಲಿಗೆ: ಜಿಲ್ಲಾಡಳಿತ ಮೌನ
ಆನ್‌ಲೈನ್ ಬುಕ್ಕಿಂಗ್ ನಂತರ ಪ್ರವಾಸಿಗರ ಸುಲಿಗೆಯಾಗುತ್ತಿದ್ದು, ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಮೌನ ವಹಿಸಿದೆ ಎಂದು ಮುಳ್ಳಯ್ಯನಗಿರಿ ತಪ್ಪಲು ರಕ್ಷಣಾ ವೇದಿಕೆ ಸಂಚಾಲಕ ಗುರುವೇಶ್ ಆರೋಪಿಸಿದರು.
ಮೊದಲೇ ಆನ್‌ಲೈನ್ ಬುಕ್ಕಿಂಗ್ ಮಾಡಿಕೊಳ್ಳುವ ಜೀಪು, ಯಲ್ಲೋ ಬೋರ್ಡ್ ಕಾರುಗಳು, ವೈಟ್ ಬೋರ್ಡ್ ಕಾರುಗಳ ಚಾಲಕರು ಚೆಕ್‌ಪೋಸ್ಟ್‌ನಿಂದ ಹಿಂದೆ ನಿಲ್ಲಿಸಿಕೊಳ್ಳುತ್ತಾರೆ. ಪ್ರವಾಸಿಗರಿಂದ ಮನಸೋಇಚ್ಛೆ ಹಣ ಪಡೆದು ಕರೆದೊಯ್ಯುತ್ತಿದ್ದಾರೆ. ಕೇಳಿದರೆ ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ ಎಂಬ ಉತ್ತರ ನೀಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವವರು ಯಾರು ಎಂದು ಅವರು ಪ್ರಶ್ನಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260819-126-1681551627