
10 ವರ್ಷಗಳ ಆರೈಕೆ; ಉದ್ದ ಕೂದಲಿನ ಮೂಲಕ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ ಮಹಿಳೆ
ಕೂದಲು ಉದುರುತ್ತಿದೆ, ತಲೆ ಬೋಳಾಗುತ್ತಿದೆ ಎಂದು ಇತ್ತೀಚಿನ ದಿನಗಳಲ್ಲಿ ರಾಗ ಎಳೆಯುವವರೇ ಹೆಚ್ಚು. ಅಂತಹದ್ದರಲ್ಲಿ ಇಲ್ಲೊಬ್ಬರು ಮಹಿಳೆ ಅತಿ ಉದ್ದದ ಕೂದಲು ಹೊಂದುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಉತ್ತರಾಖಂಡದ ಹಲ್ದ್ವಾನಿಯಾ ನಗರದ ರೇಣು ಎನ್ನುವವರು 271.50 ಸೆಂ.ಮೀ (8 ಅಡಿ 10 ಇಂಚು) ಉದ್ದದ ಕೂದಲು ಬೆಳೆಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ಅವರು 257.33 ಸೆಂ.ಮೀ ಉದ್ದದ ಕೂದಲು ಹೊಂದಿದ್ದ ಉಕ್ರೇನ್‌ನ ಅಲಿಯಾ ನಸಿರೋವಾ ಅವರ ಹೆಸರಿನಲ್ಲಿದ್ದ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.
2015ರಿಂದಲೂ ಕೂದಲನ್ನು ಕತ್ತರಿಸದೆ, ಮನೆಯಲ್ಲೇ ತಯಾರಿಸಿದ ಎಣ್ಣೆ ಹಾಗೂ ಶಾಂಪೂಗಳನ್ನು ಬಳಸಿ ಕೂದಲಿನ ಆರೈಕೆ ಮಾಡುತ್ತಿದ್ದೆ ಎಂದು ರೇಣು ಹೇಳಿದ್ದಾರೆ.
ಭಾರತೀಯ ಸಂಸ್ಕೃತಿಯಲ್ಲಿ ಉದ್ದನೆಯ ಕೂದಲನ್ನು ಸೌಂದರ್ಯ ಮತ್ತು ಸಂಪ್ರದಾಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದೇ ಕಾರಣದಿಂದ ಅಷ್ಟು ಉದ್ದವಾಗಿ ಕೂದಲು ಬೆಳೆಸಿದೆ ಎಂದೂ ಗಿನ್ನೆಸ್ ಸಂಸ್ಥೆಗೆ ರೇಣು ಹೇಳಿದ್ದಾರೆ.
ರೇಣು ಅವರದ್ದು ಯೂಟ್ಯೂಬ್ ಚಾನೆಲ್ ಕೂಡ ಇದ್ದು, ಕೂದಲಿನ ಆರೈಕೆಯ ಕುರಿತು ಸಲಹೆಗಳನ್ನೂ ಹಂಚಿಕೊಳ್ಳುತ್ತಾರೆ. ತಾಳ್ಮೆ ಮತ್ತು ನೈಸರ್ಗಿಕ ಆರೈಕೆಯ ಫಲಿತಾಂಶವನ್ನು ಜಗತ್ತಿಗೆ ತೋರಿಸುವ ಮೂಲಕ ನಮ್ಮ ದೇಶ ಮತ್ತು ಸಮುದಾಯಕ್ಕೆ ಗೌರವ ತರುವುದು ಉದ್ದೇಶವಾಗಿತ್ತು ಎಂದೂ ರೇಣು ಹೇಳಿರುವುದಾಗಿ ವರದಿಯಾಗಿದೆ.