ಸುದ್ದಿಒನ್
ಪರೀಕ್ಷೆ ಬರೆಯಬೇಕೆಂಬ ಬಯಕೆ, ಗುರಿ ಮುಟ್ಟಬೇಕೆಂಬ ಛಲ ಎಷ್ಟು ಪ್ರಬಲವಾಗಿದೆ ಎಂಬುದನ್ನು ಸಾಬೀತುಪಡಿಸುವ ಕುತೂಹಲಕಾರಿ ಘಟನೆ ಉತ್ತರಾಖಂಡದಲ್ಲಿ. ಭಾರೀ ಮಳೆಯಿಂದಾಗಿ ಒಂದೆಡೆ ಭೂಕುಸಿತಗಳು ಸಂಭವಿಸಿದರೆ ಮತ್ತೊಂದೆಡೆ ರಸ್ತೆಗಳು ಮುಚ್ಚಿಹೋಗಿ, ಸಾರ್ವಜನಿಕ ಜೀವನವನ್ನು ಅಸ್ತವ್ಯಸ್ತಗೊಳಿಸಿದ್ದವು. ವಿಶೇಷವಾಗಿ ವಾಹನಗಳು ರಸ್ತೆಗಳಲ್ಲಿ ಸಂಚರಿಸಲು ಸಾಧ್ಯವಾಗದಿದ್ದಾಗ.. ರಾಜಸ್ಥಾನದ ನಾಲ್ವರು ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಕೇಂದ್ರವನ್ನು ತಲುಪಲು ಹೆಲಿಕಾಪ್ಟರ್ ಅನ್ನು ಬಾಡಿಗೆಗೆ ಪಡೆದು ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರವನ್ನು ತಲುಪಿ ಪರೀಕ್ಷೆ ಬರೆದರು. ಈ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಲು ಪ್ರತಿ ವಿದ್ಯಾರ್ಥಿಗೆ ಎಷ್ಟು ಹಣ ಖರ್ಚಾಯಿತು ? ಎಂಬುದನ್ನು ತಿಳಿಯೋಣ.
ಉತ್ತರಾಖಂಡ ಮುಕ್ತ ವಿಶ್ವವಿದ್ಯಾಲಯದ ಈ ಬಿ.ಎಡ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಮುನ್ಸಿಯಾರಿಯ ಆರ್.ಎಸ್. ಟೋಲಿಯಾ ಪಿಜಿ ಕಾಲೇಜಿಗೆ ತಲುಪಬೇಕಿತ್ತು. ಈ ವಿದ್ಯಾರ್ಥಿಗಳು ರಾಜಸ್ಥಾನದ ಬಲೋತ್ರಾ ಪಟ್ಟಣದವರು. ಆದರೆ ಭಾರೀ ಮಳೆಯಿಂದಾಗಿ ಮುನ್ಸಿಯಾರಿಗೆ ಹೋಗುವ ಎಲ್ಲಾ ರಸ್ತೆಗಳು ಮುಚ್ಚಲ್ಪಟ್ಟಿದ್ದರಿಂದ ಅವರ ಪ್ರಯಾಣ ಸ್ಥಗಿತಗೊಂಡಿತು. ಹಲ್ದ್ವಾನಿ ತಲುಪಿದ ನಂತರ, ವಿದ್ಯಾರ್ಥಿಗಳು ಇದನ್ನು ತಿಳಿದು ತೀವ್ರ ನಿರಾಶೆಗೊಂಡರು. ಈ ಪರೀಕ್ಷೆ ಬರೆಯಲು ಸಾಧ್ಯವಾಗದಿದ್ದರೆ, ತಮ್ಮ ಒಂದು ವರ್ಷ ಕಷ್ಟಪಟ್ಟು ಓದಿದ ಶ್ರಮ ವ್ಯರ್ಥವಾಗುತ್ತದೆ. ಆದರೆ ಹೀಗಾಗುವುದು ಬೇಡ ಎಂದು ನಿರ್ಧರಿಸಿದ ಆ ವಿದ್ಯಾರ್ಥಿಗಳು
ಹೇಗಾದರೂ ಪರೀಕ್ಷೆಗೆ ಹೋಗಬೇಕೆಂದು ಪಣತೊಟ್ಟರು.

ಅದಕ್ಕಾಗಿ ಅವರು ಮಾಡಿದ್ದೇನೆಂದರೆ, ಹಲ್ದ್ವಾನಿಯಿಂದ ಮುನ್ಸಿಯಾರಿಗೆ ಹೆಲಿಕಾಪ್ಟರ್ ಸೇವೆಗಳು ಲಭ್ಯವಿದೆ ಎಂದು ತಿಳಿದು ಅವರು ಸಂತೋಷಪಟ್ಟರು. ಹೇಗಾದರೂ ಆ ಸೇವೆಗಳನ್ನು ಪಡೆಯಬೇಕೆಂದು ಅವರು ಕಂಪನಿಯನ್ನು ಸಂಪರ್ಕಿಸಿದರು. ದುರದೃಷ್ಟವಶಾತ್, ಆ ದಿನ ಕೆಟ್ಟ ಹವಾಮಾನದಿಂದಾಗಿ, ಹೆಲಿಕಾಪ್ಟರ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆದರೂ, ಅವರು ನಿರಾಶೆಗೊಳ್ಳಲಿಲ್ಲ. ಅವರು ನೇರವಾಗಿ ಹೆರಿಟೇಜ್ ಏವಿಯೇಷನ್‌ನ ಸಿಇಒ ಅವರನ್ನು ಭೇಟಿ ಮಾಡಿ ತಮ್ಮ ಸಮಸ್ಯೆಯನ್ನು ವಿವರಿಸಿದರು. ಈ ಪರೀಕ್ಷೆಯನ್ನು ಬರೆಯದಿದ್ದರೆ, ತಮ್ಮ ಜೀವನದ ಒಂದು ವರ್ಷ ವ್ಯರ್ಥವಾಗುತ್ತದೆ ಎಂದು ಅವರು ಹೇಳಿದರು. ದಯವಿಟ್ಟು ನಮ್ಮನ್ನು ಹೇಗಾದರೂ ಮಾಡಿ ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ಯುವಂತೆ ಅವರು ಬೇಡಿಕೊಂಡರು.
ಅವರ ದೃಢಸಂಕಲ್ಪದಿಂದ ಪ್ರೇರಿತರಾದ ಸಿಇಒ, ಅವರಿಗಾಗಿ ವಿಶೇಷವಾಗಿ ಒಂದು ಹೆಲಿಕಾಪ್ಟರ್ ಮತ್ತು ಇಬ್ಬರು ಪೈಲಟ್‌ಗಳನ್ನು ಕಳುಹಿಸಿದರು. ಈ ರೀತಿಯಾಗಿ, ನಾಲ್ವರು ವಿದ್ಯಾರ್ಥಿಗಳನ್ನು ಹಲ್ದ್ವಾನಿಯಿಂದ ಮುನ್ಸಿಯಾರಿಗೆ ಸುರಕ್ಷಿತವಾಗಿ ಕರೆದೊಯ್ಯಲಾಯಿತು. ಪರೀಕ್ಷೆಯ ನಂತರ ಅವರನ್ನು ಹಲ್ದ್ವಾನಿಗೆ ಕರೆತರಲಾಯಿತು.
ಈ ವಿದ್ಯಾರ್ಥಿಗಳಲ್ಲಿ ಒಬ್ಬರಾದ ಒಮರಮ್ ಜಾಟ್ ಹೇಳಿದ್ದೇನೆಂದರೆ, “ರಸ್ತೆಗಳು ತುಂಬಾ ಹಾಳಾಗಿ ಸಂಚಾರ ಮಾಡಲು ಯೋಗ್ಯವಾಗಿರಲಿಲ್ಲ. ಎಲ್ಲಿ ನಾವು ಪರೀಕ್ಷೆ ಬರೆಯುವುದಿಲ್ಲವೆಂದುಕೊಂಡಿದ್ದೆವು. ಆದರೆ ನಾವು ಹೆಲಿಕಾಪ್ಟರ್ ಸೇವೆಯ ಮೂಲಕ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರವನ್ನು ತಲುಪಲು ಸಾಧ್ಯವಾಯಿತು.” ಈ ಹೆಲಿಕಾಪ್ಟರ್ ಪ್ರಯಾಣದ ವೆಚ್ಚ ತಲಾ 5,200 ರೂ. ಆಯಿತು. ಎಂದು ಹೇಳಿದರು. ಒಮರಮ್ ಜೊತೆಗೆ, ಇತರ ವಿದ್ಯಾರ್ಥಿಗಳಾದ ಮಂಗರಾಮ್ ಜಾಟ್, ಪ್ರಕಾಶ್ ಗೋದಾರ ಜಾಟ್ ಮತ್ತು ನರಪತ್ ಕುಮಾರ್ ಕೂಡ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರವನ್ನು ತಲುಪಿದರು ಎಂದು ಅವರು ಹೇಳಿದರು. ಹೆಲಿಕಾಪ್ಟರ್ ಸೇವೆಗಳು ಲಭ್ಯವಿಲ್ಲದಿದ್ದರೆ, ಎಲ್ಲಾ ಕಠಿಣ ಪರಿಶ್ರಮ ವ್ಯರ್ಥವಾಗುತ್ತಿತ್ತು ಮತ್ತು ಒಂದು ವರ್ಷ ಹಾಳಾಗುತ್ತಿತ್ತು ಎಂದು ಅವರು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಉತ್ತರಾಖಂಡ ಮುಕ್ತ ವಿಶ್ವವಿದ್ಯಾಲಯದ ಬಿ.ಎಡ್ ಪರೀಕ್ಷೆಗಳ ಉಸ್ತುವಾರಿ ಸೋಮೇಶ್ ಕುಮಾರ್, ಪರೀಕ್ಷಾ ಕೇಂದ್ರವನ್ನು ವಿದ್ಯಾರ್ಥಿಗಳೇ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು. ಆದರೆ ದುರದೃಷ್ಟವಶಾತ್, ರಸ್ತೆಗಳು ಹಾಳಾಗಿ ಸಂಚಾರ ಮುಚ್ಚಿದ್ದರಿಂದ ಈ ಸಮಸ್ಯೆ ಉದ್ಭವಿಸಿತು. ಆದರೆ ವಿದ್ಯಾರ್ಥಿಗಳು ದೃಢನಿಶ್ಚಯದಿಂದ ಪರೀಕ್ಷಾ ಕೇಂದ್ರವನ್ನು ತಲುಪಿದರು. ಇಷ್ಟೊಂದು ಕಠಿಣ ಪರಿಶ್ರಮದಿಂದ ಪರೀಕ್ಷೆ ಬರೆದವರು ಉತ್ತಮ ಅಂಕಗಳನ್ನು ಗಳಿಸುತ್ತಾರೆ ಎಂಬ ಭರವಸೆ ವ್ಯಕ್ತಪಡಿಸಿದರು.



source https://suddione.com/students-who-came-by-helicopter-to-write-exams-do-you-know-the-reason/
