ಬಿಜೆಪಿ ಮಂಡಲ ಅಧ್ಯಕ್ಷ ಡಾ.ಪಿ.ಎಂ.ಮಂಜುನಾಥ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚಾರಣೆ ಕಾರ್ಯಕ್ರಮ

ಮೊಳಕಾಲ್ಮೂರು: ಯೋಗ ಅಭ್ಯಾಸದಿಂದ ರೋಗಮುಕ್ತರಾಗಬಹುದು ಎಂದು ಬಿಜೆಪಿ ಮಂಡಲದ ಅಧ್ಯಕ್ಷ ಡಾ.ಪಿ.ಎಂ. ಮಂಜುನಾಥ ತಿಳಿಸಿದರು.
ಪಟ್ಟಣದಲ್ಲಿ ಬಿಜೆಪಿ ಮಂಡಲದಿಂದ ಸೋಮವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶ್ವಕ್ಕೇ ಯೋಗ ಪರಿಚಯಿಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ಮಾನಸಿಕ, ದೈಹಿಕ ಆರೋಗ್ಯಕ್ಕೆ ಯೋಗ ಸಹಕಾರಿ ಎಂದು 2014 ರಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದರು. ಅವರ ಮಾತಿಗೆ ಧ್ವನಿಗೂಡಿಸಿದ್ದ 130 ಕ್ಕೂ ಹೆಚ್ಚು ದೇಶಗಳು ಜೂನ್ 21 ನ್ನು ವಿಶ್ವ ಯೋಗ ದಿನವನ್ನಾಗಿ ಆಚರಿಸಲು ಸಮ್ಮತಿಸಿದ್ದರಿಂದ ನಾವೆಲ್ಲ ಆಚರಿಸುತ್ತಿದ್ದೇವೆ ಎಂದರು.
ಕೋವಿಡ್ ನಂಥ ಮಹಾಮಾರಿಯಿಂದ ತೊಂದರೆ ಅನುಭವಿಸಿದವರಿಗೆ ನಿತ್ಯ ಪ್ರಾಣಾಯಾಮದ ಮೂಲಕ ಶ್ವಾಸಕೋಶದ ತೊಂದರೆಯಿಂದ ಮುಕ್ತಿಯೊಂದಲು ಸಹಕಾರಿಯಾಗಲಿದೆ.
ಕೋವಿಡ್ ನಂಥ ಸಂಕಷ್ಟದ ಸಮಯದಲ್ಲಿ ನಿಯಮಾವಳಿ ಅನುಸಾರ ಈ ಕಾರ್ಯಕ್ರಮ ಕೈಗೊಳ್ಳಲಾಗಿದೆ ಎಂದು ಪಿ.ಎಂ.ಮಂಜುನಾಥ ತಿಳಿಸಿದರು.

18 ವರ್ಷದ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕಾ ಅಭಿಯಾನವನ್ನು ಪ್ರಧಾನಿ ಮೋದಿಯವರು ಜೂ.21 ರಿಂದ ಆರಂಭಿಸಿದ್ದು, ವದಂತಿಗಳಿಗೆ ಕಿವಿಗೊಡದೆ ಪ್ರತಿ ಬೂತ್ ಹಾಗೂ ಗ್ರಾಮಗಳಲ್ಲಿ ಲಸಿಕಾ ಅಭಿಯಾನಕ್ಕೆ ನಾವೆಲ್ಲಾ ಕೈಜೋಡಿಸಿ ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟುವಲ್ಲಿ ಸಹಕರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷ ಪಿ ಲಕ್ಷ್ಮಣ , ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಭಾಕರ , ಜಿಲ್ಲಾ ಕಾರ್ಯದರ್ಶಿ ರೂಪಾ ವಿನಯ್ ಕುಮಾರ್ , ಎಸ್ಸಿ ಮೋರ್ಚಾ ಅಧ್ಯಕ್ಷ ಸಿದ್ದಾರ್ಥ, ನಗರ ಘಟಕದ ಅಧ್ಯಕ್ಷ ಕಿರಣ್ ಗಾಯಕ್ವಾಡ್ , ಮುಖಂಡರಾದ ಕೆ.ಜಿ.ಸುರೇಶ್, ನಾಗರಾಜ್ , ಪೃಥ್ವಿರಾಜ್, ಪ್ರವೀಣ್ ಬೋಳದೆ, ದಿಲೀಪ್, ಯೋಗ ಶಿಕ್ಷಕ ಶಿವಕುಮಾರ್ ಸೇರಿ ಇತರರು ಉಪಸ್ಥಿತರಿದ್ದರು.