-
ಕೂಡ್ಲಿಗಿ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರ ಜನಪರ ಕಾಳಜಿಗೆ ಮೆಚ್ಚುಗೆ ಸೂಚಿಸಿದ ಉಜ್ಜಯಿನಿ ಶ್ರೀ
ಕೊಟ್ಟೂರು: ಬೆಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೂಡ್ಲಿಗಿ ತಾಲೂಕಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 74 ಕೆರೆಗಳಿಗೆ ತುಂಗಭದ್ರಾ ನದಿ ನೀರಿನಿಂದ ತುಂಬಿಸುವ 670 ಕೋಟಿ ರೂ. ಯೋಜನೆಗೆ ಒಪ್ಪಿಗೆ ನೀಡಿರುವುದಕ್ಕೆ ಶ್ರೀ ಮದ್ ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಶ್ರೀಗಳು, ಅತ್ಯಂತ ಬರಪೀಡಿತ ಹಾಗೂ ಹಿಂದುಳಿದ ತಾಲೂಕುಗಳಲ್ಲಿ ಒಂದಾದ ಕೂಡ್ಲಿಗಿ ಪ್ರದೇಶವು ಮಳೆಯನ್ನೇ ಅವಲಂಬಿಸಿದೆ. ಕುಡಿಯುವ ನೀರಿಗೂ ತತ್ವಾರ ಇರುವ ಈ ತಾಲೂಕಿನಲ್ಲಿರುವ 74 ಕೆರೆಗಳಿಗೆ ನೀರು ತುಂಬಿಸುವ ಕಾರ್ಯದ ನಿರ್ಧಾರ ಐತಿಹಾಸಿಕವಾಗಿದೆ ಎಂದು ತಿಳಿಸಿದ್ದಾರೆ.
ಸದಾ ಮಲತಾಯಿ ಧೋರಣೆ ಹಾಗೂ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಬಹಳ ದಿನಗಳಿಂದ ನನೆಗುದಿಗೆ ಬಿದ್ದಿದ್ದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಕ್ಷೇತ್ರದ ಶಾಸಕರಾದ ಎನ್. ವೈ. ಗೋಪಾಲಕೃಷ್ಣ ಅವರು ಅತೀವ ಆಸಕ್ತಿಯಿಂದ ಸರ್ಕಾರದಿಂದ ಮಂಜೂರು ಮಾಡಿಸಿರುವುದು ಹೆಮ್ಮೆಯ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಯಾವುದೇ ಜನಪ್ರತಿನಿಧಿಗಳು ಪೀಠಕ್ಕೆ ಬಂದಾಗಲೆಲ್ಲ ಕೂಡ್ಲಿಗಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ವಿಷಯವನ್ನು ಪ್ರಸ್ತಾಪ ಮಾಡುತ್ತಿದ್ದೆವು. ಅದರಂತೆ, ಎನ್.ವೈ.ಗೋಪಾಲಕೃಷ್ಣ ಅವರು ಗೆದ್ದು
ಶಾಸಕರಾಗಿ ಪೀಠಕ್ಕೆ ಬಂದ ಸಂದರ್ಭದಲ್ಲಿ ಮೊದಲು ಈ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಿ ಎಂದು ಹೇಳಲಾಗಿತ್ತು. ಆ ದಿನ ಶಾಸಕ ಗೋಪಾಲಕೃಷ್ಣ ಅವರು ಸಹ ಈ ಕೆಲಸ ಮಾಡುವುದಾಗಿ ತಿಳಿಸಿದ್ದರು. ಆಗ ಕೊಟ್ಟ ಮಾತಿನಂತೆ ನಡೆದ ಶಾಸಕ ಗೋಪಾಲಕೃಷ್ಣ ಅವರಿಗೂ ಹಾಗೂ ಯೋಜನೆ ಜಾರಿಗೆ ಅನುಮೋದನೆ ನೀಡಿದ ಸರ್ಕಾರಕ್ಕೆ ವಿಶೇಷವಾದ ಆಶೀರ್ವಾದ ನೀಡುತ್ತೇವೆ. ಅಲ್ಲದೆ, ಈ ಯೋಜನೆ ಸಕಾಲದಲ್ಲಿ ಹಾಗೂ ಸಮರ್ಪಕವಾಗಿ ಜಾರಿಯಾಗಬೇಕು.
ಮುಂದಿನ ದಿನಗಳಲ್ಲಿ ಈ ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆಗಳು ಬರುವಂತಾಗಲಿಎಂದು ಉಜ್ಜಯಿನಿ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯರು ತಿಳಿಸಿದ್ದಾರೆ.