
ಹುಬ್ಬಳ್ಳಿ ಪಾಲಿಕೆ ಆವರಣದಲ್ಲಿ ಗುಜರಿ ಸಂಗ್ರಹ: ಸ್ವಚ್ಛತೆ ಮರೀಚಿಕೆ
ಹುಬ್ಬಳ್ಳಿ: ಹಳೆಯ ವಾಹನಗಳು, ಬಳಕೆಯಾಗದ ಪೀಠೋಪಕರಣಗಳು ಹಾಗೂ ರಾಶಿಗಟ್ಟಲೇ ಬಿದ್ದ ಗುಜರಿ ವಸ್ತುಗಳು, ಅಲ್ಲಲ್ಲಿ ಹಾಕಿರುವ ಮಣ್ಣು ಹಾಗೂ ಕಲ್ಲಿನ ರಾಶಿ, ಬೃಹತ್ ಗಾತ್ರದ ಹೈಮಾಸ್ಟ್ ದೀಪದ ಕಂಬಗಳು ಬಿದ್ದಿವೆ.
ಇದು ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಕೇಂದ್ರ ಕಚೇರಿ ಆವರಣದ ಹಿಂಭಾಗದಲ್ಲಿ ಕಂಡು ಬರುವ ದೃಶ್ಯಗಳು.
ಅವಳಿ ನಗರದ ಸ್ವಚ್ಛತೆ ಕಾಪಾಡಬೇಕು. ಎಲ್ಲೆಂದರಲ್ಲಿ ಕಸ ಎಸೆಯಬಾರದು. ಹಸಿ ಮತ್ತು ಒಣ ಕಸ ಬೇರ್ಪಡಿಸಿ ನೀಡಬೇಕು ಎಂದು ಪಾಲಿಕೆ ಅಧಿಕಾರಿಗಳು ಜಾಗೃತಿ ಮೂಡಿಸುತ್ತಾರೆ. ಆದರೆ, ಪಾಲಿಕೆಯ ಕೇಂದ್ರ ಕಚೇರಿ ಆವರಣದ ಆಯುಕ್ತರ ಕಚೇರಿ ಹಿಂಭಾಗದಲ್ಲಿ ರಾಶಿಗಟ್ಟಲೆ ಮಣ್ಣಿನ ಹಾಗೂ ಕಲ್ಲಿನ ರಾಶಿ ಇದೆ.
ಕರ್ನಾಟಕ ಸರ್ಕಾರದ ‘ಶ್ರದ್ಧಾಂಜಲಿ ವಾಹನ’ವನ್ನು ಅಲ್ಲಿಯೇ ನಿಲುಗಡೆ ಮಾಡಲಾಗಿದೆ. ಅದರ ಸುತ್ತ ಮುತ್ತಲೂ ಗಿಡಗಂಟಿಗಳು ಆವರಿಸಿಕೊಂಡಿವೆ. ಅಲ್ಲಿಯೇ ರಾಶಿಗಟ್ಟಲೇ ತ್ಯಾಜ್ಯ ಎಸೆಯಲಾಗಿದೆ.
ಪಾಲಿಕೆ ಆಯುಕ್ತರ ಮನೆಯ ಬಲ ಬದಿ ನಗರದ ವಿವಿಧೆಡೆ ಹಾಕಿದ್ದ ಫ್ಲೆಕ್ಸ್ಗಳನ್ನು ತೆಗೆದು, ವಿಲೇವಾರಿ ಮಾಡದೇ ಇಲ್ಲಿ ಬೇಕಾಬಿಟ್ಟಿಯಾಗಿ ಎಸೆಯಲಾಗಿದೆ. ಇಲ್ಲಿ ಗಿಡಗಂಟಿಗಳು ಬೆಳೆದಿದ್ದು, ಅಲ್ಲಲ್ಲಿ ಗುಂಡಿಗಳನ್ನು ತೊಡಲಾಗಿದೆ. ಇದರ ಪಕ್ಕದಲ್ಲಿಯೇ ಶಾಸಕ ಪ್ರಸಾದ ಅಬ್ಬಯ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಎಫ್.ಎಚ್.ಜಕ್ಕಪ್ಪನವರ ಅವರ ಕಚೇರಿಗಳಿದ್ದು, ಶಾಸಕರನ್ನು ಭೇಟಿಯಾಗಲು ನೂರಾರು ಮಂದಿ ಭೇಟಿ ನೀಡುತ್ತಾರೆ. ಪಾಲಿಕೆಯ ಆವರಣದ ಈ ದುಃಸ್ಥಿತಿ ಕಂಡು ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.
‘ಪಾಲಿಕೆಯ ವಿದ್ಯುತ್ ವಿಭಾಗದ ಕಟ್ಟಡದ ಹಿಂಬದಿಯಲ್ಲಿ ರಾಶಿ ಗಟ್ಟಲೇ ಹಳೆಯ ಪೀಠೋಪಕರಣಗಳು, ಜಪ್ತಿಯಾದ ತಳ್ಳುವ ಗಾಡಿ, ಕುರ್ಚಿ, ಟೇಬಲ್ಗಳನ್ನು, ಹಳೆಯ ವಿದ್ಯುತ್ ಬಾಕ್ಸ್ಗಳು, ಕೇಬಲ್, ಕಬ್ಬಿಣದ ಸಾಮಗ್ರಿಗಳು ಮತ್ತು ಇತರ ಅನುಪಯುಕ್ತ ಕಚೇರಿ ವಸ್ತುಗಳ ಎಸೆಯಲಾಗಿದೆ. ಅವುಗಳನ್ನು ಯಾರು ತೆರವುಗೊಳಿಸುವರು’ ಎಂದು ನಗರದ ನಿವಾಸಿ ಸುರೇಶ ಪ್ರಶ್ನಿಸಿದರು.
‘ವಿಲೇವಾರಿಯಾಗದ ಕಸದ ಗುಡ್ಡೆಯು ಅಪಾಯಕಾರಿಯಾಗಿ ಪರಿಣಮಿಸಿದೆ. ಹುಳು ಹುಪ್ಪಡಿಗಳಿಗೆ ಆವಾಸಸ್ಥಾನವಾಗಿ ಮಾರ್ಪಟ್ಟಿದೆ. ಇಂತಹ ಅಸಹನೀಯ ಪರಿಸ್ಥಿತಿಯಲ್ಲಿ ಪಾಲಿಕೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ನಗರದ ಜನರಿಗೆ ಪಾಠ ಮಾಡುವ ಅಧಿಕಾರಿಗಳು ತಾವು ಕೆಲಸ ಮಾಡುವ ಸ್ಥಳದ ಸ್ವಚ್ಛತೆಗೆ ಮೊದಲು ಆದ್ಯತೆ ನೀಡಬೇಕು’ ಎಂದು ನಗರದ ನಿವಾಸಿ ರವಿ ಹೇಳಿದರು.
ಬೇಕಾಬಿಟ್ಟಿ ವಾಹನ ನಿಲುಗಡೆ
‘ಪಾಲಿಕೆ ಆವರಣದೊಳಗೆ ಪ್ರವೇಶಿಸಿದ ಕೂಡಲೇ ಸಾಲುಗಟ್ಟಿ ನಿಂತಿರುವ ವಾಹನಗಳು ಕಂಡು ಬರುತ್ತವೆ. ಪಾಲಿಕೆಯ ಮಹಾಲೇಖಪಾಲಕರ ಕಚೇರಿಗೆ ತೆರಳಲು ಜಾಗ ಇಲ್ಲದಂತೆ ವಾಹನಗಳ ನಿಲುಗಡೆ ಮಾಡಲಾಗುತ್ತದೆ. ಕಚೇರಿಗೆ ಬರುವ ಜನರಿಗೆ ಇದು ದೊಡ್ಡ ಸಮಸ್ಯೆ ಆಗಿದೆ. ವಾಹನ ನಿಲುಗಡೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು’ ಎಂದು ಹಳೇ ಹುಬ್ಬಳ್ಳಿಯ ನಿವಾಸಿ ಫರ್ಹಾನ ಚೌಹಾಣ ಆಗ್ರಹಿಸಿದರು.
‘ಪಾಲಿಕೆಯ ಜಾಹೀರಾತು ವಿಭಾಗದ ಕಚೇರಿ ಮುಂಭಾಗದಲ್ಲಿ ನೋ ಪಾರ್ಕಿಂಗ್ ಫಲಕ ಅಳವಡಿಸಿದರೂ ಪಾಲಿಕೆ ಅಧಿಕಾರಿಗಳೇ ವಾಹನಗಳನ್ನು ನಿಲುಗಡೆ ಮಾಡುತ್ತಾರೆ. ಈ ಬಗ್ಗೆ ಹಲವಾರು ಬಾರಿ ಹೇಳಿದರೂ ನಮಗೆ ಸ್ಪಂದಿಸುವುದಿಲ್ಲ’ ಎಂದು ಭದ್ರತಾ ಸಿಬ್ಬಂದಿ ದೂರಿದರು.