
ಉಜಿರೆ| ಪದವೀಧರರಿಗೆ ಸಹಕಾರಿ ಸಂಘಗಳಲ್ಲಿ ಉದ್ಯೋಗಾವಕಾಶ: ಲಕ್ಷ್ಮಣ ಸವದಿ
ಉಜಿರೆ: ಬಿ.ಕಾಂ., ಬಿಬಿಎಂ ಪದವೀಧರ ನಿರುದ್ಯೋಗಿಗಳಿಗೆ ಸಹಕಾರಿ ಸಂಘಗಳಲ್ಲಿ ಆರು ತಿಂಗಳ ತರಬೇತಿ ನೀಡಿ, ಲೆಕ್ಕ ಪರಿಶೋಧನೆ ಮಾಡಲು ಅವರಿಗೆ ಉದ್ಯೋಗಾವಕಾಶ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಈ ಯೋಜನೆಯಿಂದ ಸಾರ್ವಜನಿಕರಿಗೆ ಸಹಕಾರ ಸಂಘದ ಮೇಲೆ ವಿಶ್ವಾಸ ಹೆಚ್ಚಾಗಿ, ನಿರುದ್ಯೋಗ ಸಮಸ್ಯೆಯೂ ನಿವಾರಣೆ ಆಗುತ್ತದೆ ಎಂದು ಸಹಕಾರ ಸಚಿವ ಲಕ್ಷ್ಮಣ ಸಂಗಪ್ಪ ಸವದಿ ಹೇಳಿದರು.
ಬೆಳ್ತಂಗಡಿ ತಾಲ್ಲೂಕಿನ ಪೆರಾಡಿಯಲ್ಲಿ ಬುಧವಾರ ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಮೃತ ಮಹೋತ್ಸವ, ಸಂಘದ ಸಭಾಭವನ ಮತ್ತು ಗೋದಾಮು ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ₹27 ಸಾವಿರ ಕೋಟಿ ಸಾಲ ನೀಡಲಾಗಿದೆ. ಇಷ್ಟು ದೊಡ್ಡ ಮೊತ್ತದ ಸಾಲ ನೀಡಿದ ಕರ್ನಾಟಕ ರಾಜ್ಯವು ದೇಶದಲ್ಲೆ ಪ್ರಥಮ ಸ್ಥಾನದಲ್ಲಿದೆ. ಅಲ್ಲದೇ ರೈತರಿಗೆ ಶೇ . 3ರ ಕನಿಷ್ಠ ಬಡ್ಡಿ ದರದಲ್ಲಿ ಕೂಡ ಸಾಲ ನೀಡಲಾಗುತ್ತದೆ’ ಎಂದು ಹೇಳಿದರು.
ಶಾಸಕ ಕೆ.ಹರೀಶ್ ಪೂಂಜ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರ ಸಂಘಗಳು ಎಂ.ಎನ್.ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ಶಿಸ್ತುಬದ್ಧವಾಗಿ ಕಾರ್ಯ ನಿರ್ವಹಿಸುತ್ತಿವೆ. ಸಹಕಾರಿ ಸಂಘಗಳಿಂದ ರೈತರಿಗೆ ಕಡಿಮೆ ಮೊತ್ತದ ಬೆಳೆವಿಮೆ ಸಿಗುತ್ತಿದೆ. ₹5 ಲಕ್ಷ ವರೆಗೆ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಬೇಕು. ಈ ದಿಸೆಯಲ್ಲಿ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಅಳದಂಗಡಿ ತಿಮ್ಮಣ್ಣರಸ ಡಾ. ಪದ್ಮಪ್ರಸಾದ ಅಜಿಲ, ಪಡ್ಯಾರಬೆಟ್ಟ ಕೊಡಮಣಿತ್ತಾಯ ದೈವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಜೀವಂಧರ ಕುಮಾರ್, ಶಿರ್ತಾಡಿ ಚರ್ಚ್‌ನ ಧರ್ಮಗುರು ಸಿಲ್ವೆಸ್ಟರ್ ವಿನ್ಸೆಂಟ್ ಲೋಬೊ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಕೆಎಂಎಫ್ ಅಧ್ಯಕ್ಷ ರವಿರಾಜ ಹೆಗ್ಡೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಇಒ ಅನಿಲ್ ಕುಮಾರ್ ಎಸ್.ಎಸ್., ಹಿರಿಯ ಸಹಕಾರಿ ಧುರೀಣ ಕುಶಾಲಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು.
ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಣ ಸ್ವಾಗತಿಸಿದರು. ಸಿಇಒ ಹೇಮಾ ಧನ್ಯವಾದವಿತ್ತರು.
ಶಿಕ್ಷಕ ಅಜಿತ್ ಕೊಕ್ರಾಡಿ ಕಾರ್ಯಕ್ರಮ ನಿರ್ವಹಿಸಿದರು.
ಶೇ 100ರಷ್ಟು ಸಾಲ ವಸೂಲಾತಿ: ರಾಜೇಂದ್ರ ಕುಮಾರ್
ರೈತರ ಹಿತ ಚಿಂತನೆಯೊಂದಿಗೆ ಸಹಕಾರಿ ಸಂಘಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ₹15 ಲಕ್ಷ ವರೆಗೆ ಸಾಲ ನೀಡಲಾಗುತ್ತದೆ. ಯಾವುದೇ ಒತ್ತಡ ಇಲ್ಲದೆ ಶೇ ನೂರರಷ್ಟು ಸಾಲ ವಸೂಲಾತಿಯೂ ಮಾಡಲಾಗುತ್ತಿದೆ. ಸಹಕಾರಿ ಸಂಘದ ಅಧ್ಯಕ್ಷರು ಯಾವುದೇ ಪಕ್ಷದ ನೆಲೆಯಲ್ಲಿ ಕೆಲಸ ಮಾಡದೆ, ರಾಜಕೀಯ ರಹಿತವಾಗಿ ಜನರ ಸೇವೆ ಮಾಡಬೇಕು ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.
ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರ ಪ್ರತಿಭೆ, ಶಕ್ತಿ-ಸಾಮರ್ಥ್ಯ ಕೇವಲ ಅಡುಗೆ ಮನೆ ಹಾಗೂ ಮನೆ ಕೆಲಸಕ್ಕೆ ಸೀಮಿತವಾಗಬಾರದು ಎಂಬ ಉದ್ದೇಶದಿಂದ ಮಹಿಳಾ ಸಬಲೀಕರಣಕ್ಕಾಗಿ ನವೋದಯ ಸ್ವ-ಸಹಾಯ ಸಂಘಗಳ ಮೂಲಕ ವಿಶೇಷ ಪ್ರೋತ್ಸಾಹ, ಸಹಕಾರ ಮತ್ತು ಮಾರ್ಗದರ್ಶನ ನೀಡಲಾಗುತ್ತದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲಾ ಸಹಕಾರ ಸಂಘಗಳು ಪ್ರತಿವರ್ಷ ಕೋಟ್ಯಾಂತರ ರೂಪಾಯಿ ಲಾಭ ಗಳಿಸುತ್ತಿವೆ. ಪೆರಾಡಿ ಸಹಕಾರ ಸಂಘಕ್ಕೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ₹10 ಲಕ್ಷ ನೆರವು ನೀಡಲಾಗುವುದು ಎಂದು ಅವರು ಪ್ರಕಟಿಸಿದರು.