
ಮಂಗಳೂರು: ಶೆಡ್, ನವೀಕೃತ ಕ್ರೂಸ್ ಲಾಂಜ್ ಲೋಕಾರ್ಪಣೆ
ಮಂಗಳೂರು: ನವ ಮಂಗಳೂರು ಬಂದರಿನ ಹಡಗುಕಟ್ಟೆ ಪ್ರದೇಶದ ಒಳಭಾಗದಲ್ಲಿ ನಿರ್ಮಿಸಿರುವ ಮುಚ್ಚಿದ ಸರಕು ಸಂಗ್ರಹಣಾ ಶೆಡ್ ಹಾಗೂ ಅಂತರರಾಷ್ಟ್ರೀಯ ಕ್ರೂಸ್ ಲಾಂಜ್ ಅನ್ನು ನವ ಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ) ಹಾಗೂ ದೀನದಯಾಳ್ ಬಂದರು ಪ್ರಾಧಿಕಾರ (ಡಿಪಿಎ)ದ ಅಧ್ಯಕ್ಷ ಸುಶೀಲ್ ಕುಮಾರ್ ಸಿಂಗ್ ಶುಕ್ರವಾರ ಲೋಕಾರ್ಪಣೆಗೊಳಿಸಿದರು.
ಎನ್‌ಎಂಪಿಎ ₹8.65 ಕೋಟಿಯಲ್ಲಿ ನಿರ್ಮಿಸಿರುವ ಹೊಸ ಶೆಡ್ ಸರಕು ನಿರ್ವಹಣಾ ಮೂಲಸೌಕರ್ಯವನ್ನು ಬಲಪಡಿಸಲಿದೆ. ₹83.26 ಲಕ್ಷದಲ್ಲಿ ನಿರ್ಮಿಸಲಾದ ಕ್ರೂಸ್ ಲಾಂಜ್ ಐಷಾರಾಮಿ ಹಡಗಿನಲ್ಲಿ (ಕ್ರೂಸ್) ಬರುವ ಪ್ರವಾಸಿಗರಿಗೆ ಹೆಚ್ಚುವರಿ ಸೌಲಭ್ಯ ಕಲ್ಪಿಸಲಿದೆ.
120 ಮೀ ಉದ್ದ ಮತ್ತು 40 ಮೀ ಅಗಲವಿರುವ ಈ ನೂತನ ಶೆಡ್ ಅನ್ರಸಗೊಬ್ಬರ, ಸಕ್ಕರೆ, ಮೆಕ್ಕೆಜೋಳ, ಆಹಾರ ಧಾನ್ಯ ಹಾಗೂ ಪಶುಆಹಾರ ಆಮದು-ರಫ್ತು ಸರಕುಗಳನ್ನು ಸಂಗ್ರಹಿಸಲು ಇದು ನೆರವಾಗಲಿದೆ. ಸರಕುಗಳಿಗೆ ಅಗತ್ ರಕ್ಷಣೆ ಮತ್ತು ಸಂಗ್ರಹಣಾ ಸ್ಥಳ ಒದಗಿಸಲಿದೆ. ಬಂದರಿನ ಸರಕು ನಿರ್ವಹಣೆ ದಕ್ಷತೆಯನ್ನು ಹೆಚ್ಚಿಸಲಿದೆ. ಹೆಚ್ಚುತ್ತಿರುವ ವಾಣಿಜ್ಯ ಬೇಡಿಕೆಗಳನ್ನು ಪೂರೈಸಲು ಸಹಕಾರಿಯಾಗಲಿದೆ. ಹೊಸ ಸರಕು ನಿರ್ವಹಣೆಗೂ ನೆರವಾಗಲಿದೆ.
ಸುಮಾರು 18 ವರ್ಷ ಹಿಂದೆ 2,582 ಚ.ಮೀಟರ್ ವಿಸ್ತೀರ್ಣದ ಪ್ರದೇಶದಲ್ಲಿ ನಿರ್ಮಿಸಲಾದ ಕ್ರೂಸ್ ಲೌಂಜ್ ಅನ್ನು ಅಂತರರಾಷ್ಟ್ರೀಯ ಕ್ರೂಸ್ ಪ್ರಯಾಣಿಕರು ಹಾಗೂ ವಿದೇಶಿ ಪ್ರವಾಸಿಗರಿಗೆ ಆಧುನಿಕ ಮತ್ತು ಐಷರಾಮಿ ಸೌಕರ್ಯ ಕಲ್ಪಿಸುವ ಸಲುವಾಗಿ ನವೀಕರಿಸಲಾಗಿದೆ. ಹೆಚ್ಚುವರಿಯಾಗಿ 432 ಚ. ಮೀ. ಪ್ರದೇಶವನ್ನು ಸೇರ್ಪಡೆಗೊಳಿಸಲಾಗಿದೆ. ವಿಟ್ರಿಫೈಡ್ ಟೈಲ್ಸ್‌ನ ನೆಲಹಾಸು, ಅಲ್ಯೂಮಿನಿಯಂ ಕಾಂಪೋಸಿಟ್ ಪ್ಯಾನೆಲ್ ಹೊದಿಕೆ ಹಾಗೂ ಹೊಸ ಫಾಲ್ಸ್ ಸೀಲಿಂಗ್ ಅಳವಡಿಸಿ ಲೌಂಜ್‌ನ ಒಟ್ಟು ಅಂದವನ್ನು ಹೆಚ್ಚಿಸಲಾಗಿದೆ. ಪ್ರಯಾಣಿಕರಿಗೆ ಹೆಚ್ಚುವರಿ ಸೌಲಭ್ಯ ಕಲ್ಪಿಸಲಾಗಿದೆ ಎಂದು ಎನ್‌ಎಂಪಿಎ ಪ್ರಕಟಣೆಯಲ್ಲಿ ತಿಳಿಸಿದೆ.
ಎನ್‌ಎಂಪಿಎ ಉಪಾಧ್ಯಕ್ಷೆ ಎಸ್.ಶಾಂತಿ ಹಾಗೂ ಮುಖ್ಯ ಎಂಜಿನಿಯರ್ ವಿ.ರವೀಂದ್ರ ರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.