
ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಯತ್ನ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ
ದಾವಣಗೆರೆ: ‘ಕಮ್ಯುನಿಸ್ಟ್ ಹಾಗೂ ನಗರ ನಕ್ಸಲರ ಜೊತೆಗೂಡಿ ದೇಶದಲ್ಲಿ ಅರಾಜಕತೆಯ ವಾತಾವರಣ ಸೃಷ್ಟಿಸಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡುವ ಅವರ ಯತ್ನಕ್ಕೆ ಯಶಸ್ಸು ಸಿಗುವುದಿಲ್ಲ’ ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಧಿಕಾರವಿಲ್ಲದೆ ಹತಾಶೆಗೊಂಡಿರುವ ಕಾಂಗ್ರೆಸ್‌ನವರು ನೀರಿಲ್ಲದ ಮೀನಿನಂತೆ ವಿಲವಿಲ ಒದ್ದಾಡುತ್ತಿದ್ದಾರೆ. ಸೋಲಿನ ವಿಮರ್ಶೆ ಮಾಡುವ ತಾಳ್ಮೆ ಹಾಗೂ ಶಕ್ತಿಯನ್ನು ಅವರು ಕಳೆದುಕೊಂಡಿದ್ದಾರೆ’ ಎಂದು ಹೇಳಿದರು.
‘ಕರ್ನಾಟಕ, ತಮಿಳುನಾಡು ಹಾಗೂ ಇನ್ನಿತರ ರಾಜ್ಯಗಳಲ್ಲಿ ಬಿಜೆಪಿಯೇತರ ಪಕ್ಷಗಳು ಗೆಲುವು ಸಾಧಿಸಿದಾಗ ಇವಿಎಂ ಪಾರದರ್ಶಕತೆಯ ಬಗ್ಗೆ ಕಾಂಗ್ರೆಸ್‌ನವರು ಮಾತನಾಡುವುದಿಲ್ಲ. ಬಿಜೆಪಿ ಗೆಲುವು ಸಾಧಿಸಿದ ಚುನಾವಣೆಗಳ ಬಗ್ಗೆ ಮಾತ್ರ ಸಂಶಯ ವ್ಯಕ್ತಪಡಿಸಿ ವಿರೋಧ ವ್ಯಕ್ತಪಡಿಸುತ್ತಿರುವುದು ಹಾಸ್ಯಾಸ್ಪದವಾಗಿದೆ’ ಎಂದು ಟೀಕಿಸಿದರು.
‘ಇ.ಡಿ., ಸಿಬಿಐ, ಚುನಾವಣಾ ಆಯೋಗ, ಸುಪ್ರೀಂ ಕೋರ್ಟ್ ಸೇರಿದಂತೆ ಎಲ್ಲವೂಗಳ ಬಗ್ಗೆಯೂ ತುಕ್ಡೆ ತುಕ್ಡೆ ಗ್ಯಾಂಗ್ ಅನುಮಾನಿಸುತ್ತಿದೆ. ಎಸ್‌ಐಆರ್ ವಿರೋಧಿಸಿ ಸುಪ್ರೀಂ ಕೋರ್ಟ್ ವರೆಗೆ ಮೆರವಣಿಗೆ ನಡೆಸಿದ್ದು ಇತಿಹಾಸದಲ್ಲೇ ಮೊದಲು. ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಜ್ಞಾನೇಶ್ ಕುಮಾರ್ ಅವರು ತಮ್ಮ ಇತಿಮಿತಿಯಲ್ಲೇ ಕಾರ್ಯನಿರ್ವಹಿಸಿದ್ದಾರೆ. ಎಲ್ಲಿಯೂ ಮತಕಳವು ನಡೆದಿಲ್ಲ’ ಎಂದು ಸಮರ್ಥಿಸಿಕೊಂಡರು.
‘ಶ್ರೀಲಂಕಾ, ಬಾಂಗ್ಲಾದೇಶ, ಫ್ರಾನ್ಸ್ ದೇಶಗಳಲ್ಲಿ ಏನಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಇದೀಗ ಭಾರತದಲ್ಲೂ ಅದೇ ರೀತಿಯ ಗಲಭೆಯನ್ನು ಉಂಟು ಮಾಡಲು ಮುಂದುವರಿದ ದೇಶಗಳು ಯತ್ನಿಸುತ್ತಿವೆ. ದೇಶದ ಬೆಳವಣಿಗೆಯನ್ನು ಸಹಿಸಲಾಗದೇ ಷಡ್ಯಂತ್ರ ನಡೆಸುತ್ತಿವೆ. ಇದಕ್ಕೆ ದೇಶದ ಜನರು ಗಾಳವಾಗಬಾರದು’ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ್ ಮೆಳ್ಳೆಕಟ್ಟೆ, ಪಕ್ಷದ ಮುಖಂಡರಾದ ಎಚ್.ಎಚ್.ಶಿವಯೋಗಿಸ್ವಾಮಿ, ಬಸವರಾಜ ನಾಯ್ಕ, ಎಚ್.ಪಿ.ರಾಜೇಶ್, ಲೋಕಿಕೆರೆ ನಾಗರಾಜ್, ಯಶವಂತರಾವ ಜಾಧವ್, ಎಸ್.ಟಿ.ವೀರೇಶ್, ಪ್ರಸನ್ನಕುಮಾರ್, ಧನಂಜಯ ಕಡ್ಲೇಬಾಳು, ಐರಣಿ ಅಣ್ಣೇಶ್, ಲಕ್ಷ್ಮಣ, ವೈ.ಮಂಜಪ್ಪ ಹಾಗೂ ಇನ್ನಿತರರಿದ್ದರು.
ಪತ್ರಿಕಾಗೋಷ್ಠಿಗೂ ಮುನ್ನ ನಡೆದ ಸಭೆಯಲ್ಲಿ ಪಕ್ಷದ ಕಾರ್ಯಕರ್ತರ ನಡುವೆ ವಾಗ್ವಾದ – ಮಾತಿನ ಚಕಮಕಿ ನಡೆಯಿತು. ಮುಖಂಡರು ಮಧ್ಯಪ್ರವೇಶಿಸಿ ಸಮಾಧಾನ ಪಡಿಸಿದರು.
‘ಚಿತ್ರದುರ್ಗಕ್ಕೆ ನೀರು ಆದೇಶ ಸರಿಯಲ್ಲ’
‘ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಗೆ ಭದ್ರಾ ಜಲಾಶಯದಿಂದ 1 ಟಿಎಂಸಿ ಅಡಿ ನೀರು ಬಿಡುಗಡೆಗೆ ಸರ್ಕಾರ ಆದೇಶಿಸಿರುವುದು ಸರಿಯಲ್ಲ’ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
‘ಈ ಮೊದಲು ಭದ್ರಾ ಜಲಾಶಯದಿಂದ 3 ಟಿಎಂಸಿ ಅಡಿ ನೀರು ಹರಿಸಲು ಆದೇಶಿಸಿದ್ದ ಸರ್ಕಾರ, ಇದೀಗ ಮತ್ತೊಮ್ಮೆ ಆದೇಶ ಹೊರಡಿಸಿ ಜಿಲ್ಲೆಯ ರೈತರಿಗೆ ಅನ್ಯಾಯ ಮಾಡುತ್ತಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
‘ಜಿಲ್ಲೆಯ ಬೇಸಿಗೆ ಬೆಳೆಗೆ ಸರ್ಕಾರ 120 ದಿನ ನೀರು ಹರಿಸಬೇಕು. ಭದ್ರಾ ನಾಲೆಗಳ ಹೂಳು ತೆಗೆಯಲು ಕ್ರಮ ವಹಿಸಬೇಕು. ಸರ್ಕಾರ ಜಿಲ್ಲೆಯ ರೈತರ ಹಿತ ಕಾಯದಿದ್ದರೆ ಪಕ್ಷಾತೀತವಾಗಿ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.