
ವೈದ್ಯ ವೃತ್ತಿ ಜತೆ ಕನ್ನಡ ಸಾಹಿತ್ಯ ‘ಪ್ರೀತಿ’ ಡಾ.ಬಸವರಾಜ ಹೊಸಕೇರಿ
ಅಣ್ಣಿಗೇರಿ: ‘ದೇಶ ಸುತ್ತಿ ನೋಡು, ಕೋಶ ಓದಿ ನೋಡು’ ಎಂಬ ನಾಣ್ಣುಡಿಗೆ ಜೀವಂತ ಸಾಕ್ಷಿ ಡಾ.ಬಸವರಾಜ ಹೊಸಕೇರಿ. ಆರು ದಶಕಗಳ ಕನ್ನಡ ಸಾಹಿತ್ಯ ಪ್ರೀತಿ, ಐದು ಸಾವಿರಕ್ಕೂ ಅಧಿಕ ಪುಸ್ತಕಗಳ ಸಂಗ್ರಹ, 75ನೇ ವಯಸ್ಸಿನಲ್ಲಿಯೂ ನಿರಂತರ ಓದು. ಗ್ರಾಮೀಣ ನೆಲದಲ್ಲಿ ಜ್ಞಾನದ ದೀಪ ಬೆಳಗುತ್ತಿರುವ ಹಿರಿಯ ವೈದ್ಯರು ಇವರು.
ಕನ್ನಡ ಕೇವಲ ಭಾಷೆಯಲ್ಲ; ಅದು ನಮ್ಮ ನಾಡಿನ ಸಂಸ್ಕೃತಿ, ಪರಂಪರೆ ಮತ್ತು ಅಸ್ಮಿತೆಯ ಪ್ರತೀಕ. ಕನ್ನಡ ಭಾಷೆ ಮತ್ತು ಸಾಹಿತ್ಯದ ಮೇಲೆ ಅಪಾರ ಪ್ರೀತಿ, ಅಭಿಮಾನ ಹಾಗೂ ಗೌರವ ಹೊಂದಿರುವ ಅಪರೂಪದ ವ್ಯಕ್ತಿತ್ವವೇ ಡಾ.ಬಸವರಾಜ ಹೊಸಕೇರಿ.
ಇಲ್ಲಿನ ಶಲವಡಿ ಗ್ರಾಮದ ಹಿರಿಯ ವೈದ್ಯರಾಗಿರುವ ಇವರು ವೈದ್ಯ ವೃತ್ತಿಯ ಜೊತೆಗೆ, ಆರು ದಶಕಗಳಿಂದ ಕನ್ನಡ ಸಾಹಿತ್ಯ ಕೃತಿಗಳನ್ನು ಓದುವ ಹವ್ಯಾಸವನ್ನೂ ರೂಢಿಸಿಕೊಂಡಿದ್ದಾರೆ. ಇಂದಿಗೂ ಸಾಹಿತ್ಯದ ಮೇಲಿನ ಒಲವು ಮತ್ತು ಹೊಸ ವಿಚಾರಗಳನ್ನು ತಿಳಿಯುವ ಕುತೂಹಲ ಕುಂದಿಲ್ಲ.
ಗ್ರಾಮದಲ್ಲಿ ಕನ್ನಡ ದಿನಪತ್ರಿಕೆ ಸಿಗದಿದ್ದರೆ, ನಗರದಿಂದ ತರಿಸಿಕೊಂಡು ಓದುತ್ತಾರೆ. ವಾರಪತ್ರಿಕೆ, ಮಾಸಪತ್ರಿಕೆ ಹಾಗೂ ವಿವಿಧ ಸಾಹಿತ್ಯ ಕೃತಿಗಳನ್ನೂ ಓದುತ್ತಾರೆ.
ಐದು ಸಾವಿರಕ್ಕೂ ಅಧಿಕ ಪುಸ್ತಕಗಳ ಸಂಗ್ರಹ: ಡಾ.ಬಸವರಾಜ ವಿ.ಹೊಸಕೇರಿ ಅವರು ತಮ್ಮ ಮನೆಯ ಪುಸ್ತಕ ಕಪಾಟಿನಲ್ಲಿ ಐದು ಸಾವಿರಕ್ಕೂ ಅಧಿಕ ಪುಸ್ತಕಗಳನ್ನು ಸಂಗ್ರಹಿಸಿಕೊಂಡಿದ್ದಾರೆ. ಇದು ಅವರ ಸಾಹಿತ್ಯಾಸಕ್ತಿ, ಅಧ್ಯಯನಶೀಲತೆ ಮತ್ತು ಜ್ಞಾನಸಂಪಾದನೆಯ ಮೇಲಿನ ಅಪಾರ ಒಲವನ್ನು ಪ್ರತಿಬಿಂಬಿಸುತ್ತದೆ.
ಅವರು ಕನ್ನಡ ಸಾಹಿತ್ಯ ಪರಿಷತ್, ಶರಣ ಸಾಹಿತ್ಯ ಪರಿಷತ್, ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ, ಜಾನಪದ ಸಾಹಿತ್ಯ ಪರಿಷತ್ತು ಸೇರಿದಂತೆ ವಿವಿಧ ಕನ್ನಡಪರ ಸಂಸ್ಥೆಗಳ ಆಜೀವ ಸದಸ್ಯರಾಗಿದ್ದಾರೆ.