
ಧಾರವಾಡ| ದೀಪಾವಳಿ ಲಕ್ಷ್ಮಿ ಪೂಜೆ, ಹೊಸ ವಾಹನಗಳ ಖರೀದಿ ಸಡಗರ
ಧಾರವಾಡ: ದೀಪಾವಳಿ ಅಮಾವಾಸ್ಯೆ ಪ್ರಯುಕ್ತ ಜಿಲ್ಲೆಯಾದ್ಯಂತ ಸೋಮವಾರ ಲಕ್ಷ್ಮಿ ಪೂಜೆ, ಹೊಸ ವಾಹನಗಳ ಖರೀದಿ ಹಾಗೂ ಅಂಗಡಿ- ಮುಂಗಟ್ಟುಗಳಲ್ಲಿ ವಿಶೇಷ ಆರಾಧನೆ ಸಡಗರ ಮತ್ತು ವಿಜೃಂಭಣೆಯಿಂದ ಜರುಗಿತು.
ಹಬ್ಬದ ಅಂಗವಾಗಿ ಮಹಿಳೆಯರು ಮುಂಜಾನೆಯೇ ಮನೆ ಹಾಗೂ ಅಂಗಡಿಗಳ ಮುಂದೆ ಸಗಣಿ ಸಾರಿಸಿ, ಬಣ್ಣದ ರಂಗೋಲಿ ಹಾಕಿ ಮನೆಯನ್ನು ಶೃಂಗರಿಸಿದ್ದರು. ಸಂಜೆ ಮುಹೂರ್ತದಲ್ಲಿ ಜಿಲ್ಲೆಯ ವರ್ತಕರು ತಮ್ಮ ಅಂಗಡಿ-ಮುಂಗಟ್ಟುಗಳು, ಗಿರಣಿಗಳು ಹಾಗೂ ವ್ಯಾಪಾರ ಮಳಿಗೆಗಳಲ್ಲಿ ಲೆಕ್ಕಪುಸ್ತಕ (ಖಾತಾ ಪುಸ್ತಕ), ಹಣದ ಪೆಟ್ಟಿಗೆಯನ್ನಿಟ್ಟು ಮಹಿಳೆಯರನ್ನು ಕರಿಸಿ ಶಾಸ್ತ್ರೋಕ್ತವಾಗಿ ಲಕ್ಷ್ಮಿ ಪೂಜೆ ನೆರವೇರಿಸಿದರು. ವಿವಿಧ ಖಾದ್ಯಗಳನ್ನು ನೈವೇದ್ಯ ರೂಪದಲ್ಲಿ ಅರ್ಪಿಸಿ ಪ್ರಾರ್ಥಿಸಿದರು.
ಹೊಸ ವಾಹನಗಳ ಖರೀದಿ: ದೀಪಾವಳಿ ಅಮಾವಾಸ್ಯೆಯ ಶುಭ ಮುಹೂರ್ತದಲ್ಲಿ ಹೊಸ ವಾಹನಗಳನ್ನು ಖರೀದಿಸಲು ಸಾರ್ವಜನಿಕರು ಮುಗಿಬಿದ್ದಿದ್ದರು.
ನಗರದ ವಿವಿಧ ವಾಹನ ಶೋರೂಂಗಳಲ್ಲಿ ದ್ವಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನಗಳ ವಿತರಣೆ ಬಿರುಸಿನಿಂದ ಸಾಗಿತು.
ಸಂಜೆ ಮನೆಗಳ ಹೊಸ್ತಿಲಿಗೆ ವಿಶೇಷ ಪೂಜೆ ಸಲ್ಲಿಸಿದ ಮಹಿಳೆಯರು, ಮನೆಯ ಸುತ್ತಲೂ ಸಾಲು ಹಣತೆಗಳನ್ನು ಬೆಳಗಿ ಜಗಮಗಿಸುವಂತೆ ಮಾಡಿದರು. ರಾತ್ರಿಯಾಗುತ್ತಿದ್ದಂತೆ ಮಕ್ಕಳು, ಯುವಕ-ಯುವತಿಯರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಗರ ಹಾಗೂ ಗ್ರಾಮೀಣ ಭಾಗದ ಪ್ರಮುಖ ದೇವಸ್ಥಾನಗಳು ತಳಿರು-ತೋರಣ ಮತ್ತು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದವು. ಮುಂಜಾನೆಯಿಂದಲೇ ದೇವಸ್ಥಾನಗಳಿಗೆ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.