
ನನಗೆ ಹಳ್ಳ ತೋಡಲು ಕಾಯುತ್ತಿದ್ದಾರೆ: ನಿಖಿಲ್ ಕುಮಾರಸ್ವಾಮಿ
ಬಂಗಾರಪೇಟೆ: ‘ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗುತ್ತಿದ್ದೇನೆ ಎಂದು ನನಗೆ ಹಳ್ಳ ತೋಡಲು ಕೆಲವರು ಪ್ರತಿಕ್ಷಣ ಕಾಯುತ್ತಿದ್ದಾರೆ. ನನ್ನ ಲೋಪ ಏನಾದರೂ ಇದ್ದಿದ್ದರೆ ಇಷ್ಟೊತ್ತಿಗೆ ನನ್ನ ಬಾಯಿ ಮುಚ್ಚಿಸಿಬಿಡುತ್ತಿದ್ದರು. ಆದರೆ, ತಂದೆ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾಗಲೂ ನಾನು ಯಾವುದೇ ಹಸ್ತಕ್ಷೇಪ ಮಾಡಿರಲಿಲ್ಲ. ಹೀಗಾಗಿ, ಧೈರ್ಯವಾಗಿ ರೈತರ ಪರವಾಗಿ ನಿಂತು ಹೋರಾಟ ಮಾಡಲು ಸಾಧ್ಯವಾಗಿದೆ’ ಎಂದು ಜೆಡಿಎಸ್ ಯುವ ಘಟಕದ ರಾಜ್ಯ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ನಗರದ ಎಪಿಎಂಸಿ ಯಾರ್ಡ್‌ನಲ್ಲಿ ಶುಕ್ರವಾರ ಜೆಡಿಎಸ್ ಹಮ್ಮಿಕೊಂಡಿದ್ದ ‘ರೈತ ಸ್ವಾಭಿಮಾನಿ ಯಾತ್ರೆ’ ಹಾಗೂ ರೈತರೊಂದಿಗೆ ಸಂವಾದದಲ್ಲಿ ಅವರು ಮಾತನಾಡಿದರು.
ರೈತರು ಬಿಟ್ಟಿ ಭಾಗ್ಯಗಳನ್ನು ಬಯಸುತ್ತಿಲ್ಲ, ಸ್ವಾವಲಂಬಿ ಬದುಕಿಗೆ ಅಗತ್ಯವಿರುವ ಮೂಲಸೌಕರ್ಯ ಕೇಳುತ್ತಿದ್ದಾರೆ ಎಂದರು.
ಜಿಲ್ಲೆಗೆ ಕೃಷ್ಣಾ ನದಿಯಿಂದ ನೀರು ತರುವುದಕ್ಕೆ ಅವಕಾಶ ಇದೆ. ಈಗಾಗಲೇ ಕುಮಾರಣ್ಣ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಈ ಬಗ್ಗೆ ಮನವಿ ನೀಡಿ ಗಮನ ಸೆಳೆದಿದ್ದಾರೆ. ನೂರಕ್ಕೆ ನೂರು ಇದಕ್ಕೆ ಪರಿಹಾರ ಸಿಕ್ಕೇ ಸಿಗುತ್ತದೆ ಎಂದು ಹೇಳಿದರು.
ಕೊಳವೆ ಬಾವಿ ಕೊರೆಸಲು ₹2 ಲಕ್ಷ ಖರ್ಚು ಮಾಡಿ 1,600 ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ಬೆಳೆಗೆ ಕನಿಷ್ಠ 8 ಗಂಟೆಯಾದರೂ 3 ಫೇಸ್ ಕರೆಂಟ್ ಕೊಡಬೇಕು. ಲೋಡ್ ಶೆಡ್ಡಿಂಗ್‌ನಿಂದ ರೈತರು ಕಂಗಾಲಾಗಿದ್ದಾರೆ. ಅದೆಲ್ಲೋ ಗೃಹಜ್ಯೋತಿ, ಗೃಹಲಕ್ಷ್ಮಿ ಅಂತೀರಾ, ಎಲ್ಲಿದೆ ಜ್ಯೋತಿ? ರೈತರ ಜೀವನವೇ ಕತ್ತಲೆಯಾಗಿದೆ. ಬರೀ ಭಾಷಣದಿಂದ ಅಭಿವೃದ್ಧಿ ಆಗುವುದಿಲ್ಲ ಎಂದು ಕಿಡಿಕಾರಿದರು.
ರೈತರೊಂದಿಗೆ ಸಂವಾದ: ಇದೇ ವೇಳೆ ಅವರು ರೈತರೊಂದಿಗೆ ಸಂವಾದ ನಡೆಸಿದರು. ತರಕಾರಿ ಮಾರುಕಟ್ಟೆ ಹಾಗೂ ದನಗಳ ಸಂತೆಗೆ ಭೇಟಿ ನೀಡಿದರು.
ಬಂಗಾರಪೇಟೆ ತಾಲ್ಲೂಕು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳ ರೈತರು ಹಾಗೂ ರೈತ ಸಂಘಟನೆ ಪ್ರತಿನಿಧಿಗಳು ಸಮಸ್ಯೆ ಬಿಚ್ಚಿಟ್ಟರು.
ದುಬಾರಿ ಬೆಲೆಗೆ ಖರೀದಿಸಿದ ಬಿತ್ತನೆ ಬೀಜದಲ್ಲಿ ಶೇ 30ರಷ್ಟು ಮೊಳಕೆಯೂ ಬರುತ್ತಿಲ್ಲ, ಎಕರೆಗಟ್ಟಲೆ ಬೆಳೆ ಹಾಳಾಗಿ ಲಕ್ಷಾಂತರ ನಷ್ಟವಾಗಿದೆ ಎಂದು ರೈತರು ಹೇಳಿದರು.
ಕೇಂದ್ರ ಸರ್ಕಾರವು ಪಾಲಿಹೌಸ್‌ಗಳಿಗೆ ನೀಡುತ್ತಿದ್ದ ಸಹಾಯಧನವನ್ನು ಶೇ 50ರಿಂದ ಶೇ 35ಕ್ಕೆ ದಿಢೀರ್ ಇಳಿಸಿರುವುದರಿಂದ ನಿರ್ವಹಣಾ ವೆಚ್ಚ ಹೆಚ್ಚಾಗಿ ಕೃಷಿಕರು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. 'ಕೃಷಿ ಭಾಗ್ಯ' ಯೋಜನೆಯ ಪ್ರೋತ್ಸಾಹವೂ ಸಕಾಲಕ್ಕೆ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದಿನಕ್ಕೆ ಕೇವಲ 6 ಗಂಟೆ ವಿದ್ಯುತ್ ನೀಡುತ್ತಿದ್ದು, ಪದೇಪದೇ ಲೋಡ್ ಶೆಡ್ಡಿಂಗ್ ಹಾಗೂ ಟ್ರಾನ್ಸ್‌ಫಾರ್ಮರ್ ದುರಸ್ತಿ ವಿಳಂಬದಿಂದಾಗಿ ಬೆಳೆಗಳಿಗೆ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ. ಬಂಗಾರಪೇಟೆ ಭಾಗದಲ್ಲಿ ಸುಮಾರು 1,400 ಅಡಿ ಆಳದವರೆಗೆ ಬೋರ್‌ವೆಲ್ ಕೊರೆಸಿದರೂ ಹನಿ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಜಿಲ್ಲೆಯಲ್ಲಿ ಮಾವು ಸಂಸ್ಕರಣಾ ಕಾರ್ಖಾನೆ ಇಲ್ಲ, ಕೋಲ್ಡ್ ಸ್ಟೋರೇಜ್ ಇಲ್ಲ ಎಂದು ಮಾವು ಬೆಳೆಗಾರರು ತಿಳಿಸಿದರು.
ಅರಣ್ಯ ಅಂಚಿನ ಹಳ್ಳಿಗಳಲ್ಲಿ ಆನೆ, ಜಿಂಕೆ, ನವಿಲುಗಳ ದಾಳಿಯಿಂದಾಗಿ ಅಪಾರ ಪ್ರಮಾಣದ ಬೆಳೆ ನಾಶವಾಗುತ್ತಿದ್ದರೂ ಅರಣ್ಯ ಇಲಾಖೆಯಿಂದ ಸೂಕ್ತ ಪರಿಹಾರ ಸಿಗುತ್ತಿಲ್ಲ ಎಂದು ರೈತ ಮುಖಂಡ ಕೆ.ನಾರಾಯಣಗೌಡ ಹೇಳಿದರು.
ಜೆಡಿಎಸ್ ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಜೆ.ಕೆ.ಕೃಷ್ಣಾರೆಡ್ಡಿ, ಸಂಸದ ಎಂ.ಮಲ್ಲೇಶ್ ಬಾಬು, ಶಾಸಕರಾದ ಜಿ.ಕೆ.ವೆಂಕಟಶಿವಾರೆಡ್ಡಿ, ಸಮೃದ್ಧಿ ಮಂಜುನಾಥ್, ಮುಖಂಡರಾದ ಸಿಎಂಆರ್ ಶ್ರೀನಾಥ್, ಚೌಡರೆಡ್ಡಿ, ರಾಮೇಗೌಡ, ಹೂಡಿ ವಿಜಯಕುಮಾರ್, ವಕ್ಕಲೇರಿ ರಾಮು, ನಾಗರಾಜು, ನಟರಾಜ್, ಗಾಯತ್ರಿ ಮುತ್ತಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ, ಗುಟ್ಟಹಳ್ಳಿ ಮಂಜುನಾಥ, ಬಾಲಕೃಷ್ಣ, ಜಿ.ವಿ.ಶ್ರೀನಿವಾಸ ಪಾಲ್ಗೊಂಡಿದ್ದರು.
ಸತತ ಸೋಲು ಎದೆಗುಂದಿಸಿಲ್ಲ
ರೈತರ ಪರವಾಗಿ ವಿಧಾನಸೌಧದಲ್ಲಿ ಮಾತನಾಡಲು ನನಗೆ ಇನ್ನೂ ಅವಕಾಶ ಸಿಕ್ಕಿಲ್ಲ. ನಾನು ಸತತವಾಗಿ ಚುನಾವಣೆ ಸೋತಿರಬಹುದು, ಆದರೆ ಎದೆಗುಂದಿಲ್ಲ. ಪ್ರಜಾಪ್ರಭುತ್ವದಲ್ಲಿ ಬೀದಿಯಲ್ಲಿ ನಿಂತು ಹೋರಾಟ ಮಾಡಲು ಅವಕಾಶವಿದ್ದು, ಯಾರು ತಡೆಯಲು ಆಗಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ರೈತರ ಪರವಾಗಿ ಕಾಳಜಿ ಹೊಂದಿರುವ ಸಿಎಂಆರ್ ಶ್ರೀನಾಥ್ ಅವರಂಥವರನ್ನು ವಿಧಾನಸೌಧದಲ್ಲಿ ಕಾಣಬೇಕು. ಅವರು ರಾಜ್ಯದ ಹಲವು ಪ್ರದೇಶಗಳ ರೈತರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದರು.
ಕೆ.ಸಿ. ವ್ಯಾಲಿ ನೀರು ಬೆಳೆಗೂ ಯೋಗ್ಯವಲ್ಲ
ಕೆ.ಸಿ.ವ್ಯಾಲಿ ಯೋಜನೆಯ ನೀರು ಕನಿಷ್ಠ ಮೂರನೇ ಹಂತದ ಶುದ್ಧೀಕರಣವಾಗಬೇಕು. ಅದು ಆಗಿಲ್ಲ. ಈ ನೀರಿನಲ್ಲಿ ಬೆಳೆದ ಬೆಳೆ ತಿನ್ನಲು ಯೋಗ್ಯವಿಲ್ಲ, ಯಾರೂ ಖರೀದಿಸುವುದೂ ಇಲ್ಲ. ಇದು ಕೇವಲ ಬೆಂಗಳೂರಿನ ಕೊಳಚೆ ನೀರು, ಇದರಿಂದ ನಮ್ಮ ಅಂತರ್ಜಲ ಮಲಿನವಾಗುತ್ತಿದೆ. ಕೋಲಾರದ ಕೆರೆಗಳಿಗೆ ಕೃಷ್ಣೆಯ ಶುದ್ಧ ನೀರು ಹರಿಸಿದರೆ ಮಾತ್ರ ಜಿಲ್ಲೆ ಉಳಿಯುತ್ತದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.