
ದೇಶದ ಶ್ರೀಮಂತ ಪರಂಪರೆಗೆ ಮಹಿಳೆಯರೇ ಆಧಾರ ವಿನಯ ಗುರೂಜಿ
ಹರಿಹರ: ‘ಭಾರತದ ಪರಂಪರೆಗಳನ್ನು ಸುಭದ್ರಗೊಳಿಸುವಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ’ ಎಂದು ಗೌರಿಗದ್ದೆಯ ದತ್ತಾಶ್ರಮದ ಅವಧೂತ ವಿನಯ ಗುರೂಜಿ ಹೇಳಿದರು.
ನಗರದಲ್ಲಿ ಶನಿವಾರ ನಡೆದ ಸೋಮವಂಶೀಯ ಸಹಸ್ರಾರ್ಜುನ ಕ್ಷತ್ರಿಯ (ಎಸ್.ಎಸ್.ಕೆ.) ಸಮಾಜದ ರಾಜ್ಯಮಟ್ಟದ ಮಹಿಳಾ ಸಮಾವೇಶದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ದೇಶದ ವಿಶಿಷ್ಟವಾದ ಧರ್ಮಾಚರಣೆ, ಸಂಸ್ಕಾರದಂತಹ ಪರಂಪರೆಗಳನ್ನು ಜಗತ್ತು ಬೆರಗಾಗಿ ನೋಡುತ್ತದೆ, ಇಂತಹ ಪರಂಪರೆಗಳನ್ನು ಉಳಿಸಿ, ಬೆಳೆಸುತ್ತಿರುವ ಕೀರ್ತಿ ಎಲ್ಲಾ ಸಮುದಾಯಗಳ ಮಹಿಳೆಯರಿಗೆ ಸಲ್ಲುತ್ತದೆ’ ಎಂದರು.
‘ಎಸ್.ಎಸ್.ಕೆ. ಸಮುದಾಯದ ಮಹಿಳೆಯರೂ ದೇಶದ ಧರ್ಮ, ಅಧ್ಯಾತ್ಮ, ಪರಂಪರೆಗಳ ಮೂಲಕ ದೇಶಕ್ಕೆ ತಮ್ಮದೆ ಆದ ಕೊಡುಗೆಯನ್ನು ನೀಡಿದ್ದಾರೆ. ಈ ಮಹಿಳಾ ಶಕ್ತಿಯನ್ನು ಸರಿಯಾದ ದಿಕ್ಕಿಗೆ ಹರಿಸುವ ಮೂಲಕ ಸಮುದಾಯ ಮತ್ತಷ್ಟು ವಿಕಾಸವನ್ನು ಹೊಂದಬೇಕು’ ಎಂದು ಹೇಳಿದರು.
ಎಸ್.ಎಸ್.ಕೆ. ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಶಶಿಕುಮಾರ್ ಮೆಹರವಾಡೆ ಮಾತನಾಡಿ, ‘ರಾಜ್ಯದ ಎಸ್.ಎಸ್.ಕೆ. ಸಮಾಜದ ಮಹಿಳೆಯರು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಪ್ರಗತಿ ಸಾಧಿಸಬೇಕು. ರಾಜಕೀಯ ಕ್ಷೇತ್ರದಲ್ಲಿ ಶೇ 33ರಷ್ಟು ಮೀಸಲಾತಿ ಬಂದಿದ್ದು ಅದನ್ನು ಸದುಪಯೋಗ ಪಡಿಸಿಕೊಂಡು ಸ್ವಾವಲಂಬಿ ಬದುಕನ್ನು ಗಳಿಸಬೇಕು’ ಎಂದರು.
‘ಇದೇ ಮಾದರಿಯಲ್ಲಿ ಸಮುದಾಯದ ಯುವಕರ ಸಮಾವೇಶವನ್ನೂ ಆಯೋಜಿಸಲಾಗುವುದು, ಸಮುದಾಯದ ವಿಕಾಸಕ್ಕಾಗಿ ಬಿಸಿನೆಸ್ ನೆಟ್‌ವರ್ಕ್ ಸೌಲಭ್ಯ ರೂಪಿಸಲಾಗುವುದು’ ಎಂದು ಹೇಳಿದರು.
‘ರಾಜ್ಯದ ಬಳ್ಳಾರಿ, ರಾಯಚೂರು ಸೇರಿದಂತೆ ಇತರೆ ನಗರಗಳಲ್ಲಿ ಸಮುದಾಯದ ಜಣಗಣತಿ ನಡೆಸಲಾಗುತ್ತಿದೆ. ಐಎಎಸ್, ಕೆಎಎಸ್ ಉಚಿತ ತರಬೇತಿ ನೀಡಲು ವ್ಯವಸ್ಥೆ ಮಾಡಲಾಗುತ್ತದೆ. ಬೆಂಗಳೂರಿನಲ್ಲಿ ಮಹಿಳಾ ಹಾಸ್ಟೆಲ್ ಒಂದು ತಿಂಗಳಲ್ಲಿ ಆರಂಭಿಸಲಾಗುವುದು’ ಎಂದರು.
ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ರಾಜಶ್ರೀ ಜಡಿ, ‘ಪೇಂಡಾನು ಖೋಳೊ ಭರಾನು, ಸಾಮೂಹಿಕ ಬಹಿರಂಗ ಮದ್ಯಪಾನ, ಪ್ರೀ ವೆಡ್ಡಿಂಗ್ ಶೂಟಿಂಗ್, ಬಹಿರಂಗ ಪ್ರದರ್ಶನ ನಿಷೇಧ, ಅಭಿಜಿತ್ ಲಗ್ನ ಮುಹೂರ್ತದಲ್ಲಿ ಮದುವೆ ಅಕ್ಷತೆ ಕಾರ್ಯ ನಡೆಸಬೇಕೆಂದು ಸಮಾಜದ ಒಳಿತಿಗಾಗಿ 5 ನಿರ್ಣಯಗಳನ್ನು ಕೈಗೊಳ್ಳಲಾಗಿದೆ’ ಎಂದರು.
ಈ ಸಂದರ್ಭದಲ್ಲಿ ಬಾಲಯೋಗಿನಿ ಜಯಶ್ರೀ ಮಾತಾಜೀ, ಸಮಾಜದ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಖೋಡೆ, ಶಾಸಕ ಬಿ.ಪಿ.ಹರೀಶ್, ಸಮುದಾಯದ ಮುಖಂಡರಾದ ಅಶೋಕ್ ಕಾಟವೆ, ಸತೀಶ್ ಮೆಹರವಾಡೆ, ಟಿ.ಎಂ.ಮೆಹರವಾಡೆ, ರಾಮಚಂದ್ರಸಾ ಕಬಾಡಿ, ಶ್ರೀನಿವಾಸ್ ಮೆಹರವಾಡೆ, ರೂಪಾ ಕಾಟವೆ, ಕೃಷ್ಣಸಾ ಭೂತೆ, ಜಯಲಕ್ಷ್ಮಿ, ಸಂದೀಪ್ ಭೂತೆ ಹಾಗೂ ಇತರರು ಇದ್ದರು.