
ಅನ್ಯ ತಾಲ್ಲೂಕಿಗೆ ನೀರು ಹರಿಸಲು ಬಿಡೆವು; ಶಾಸಕ ಬಿ.ಪಿ.ಹರೀಶ್ ಖಡಕ್ ಎಚ್ಚರಿಕೆ
ಹರಿಹರ: ‘ತಾಲ್ಲೂಕಿನಲ್ಲಿರುವ ಕೆರೆಗಳಿಗೆ ನದಿ ನೀರು ಹರಿಸಲು ಹಾಗೂ ಕುಡಿಯುವ ನೀರಿಗಾಗಿ ನದಿಯಲ್ಲಿ ಬ್ಯಾರೇಜ್ ನಿರ್ಮಿಸಲು ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ತಾಲ್ಲೂಕಿನ ನದಿಯಿಂದ ಕೆರೆಗಳಿಗೆ ನೀರು ಹರಿಸುವ ಯೋಜನೆಗಳನ್ನು ಬಂದ್ ಮಾಡುವ ಚಳವಳಿ ಆರಂಭಿಸಲಾಗುವುದು’ ಎಂದು ಶಾಸಕ ಬಿ.ಪಿ.ಹರೀಶ್ ಖಡಕ್ ಎಚ್ಚರಿಕೆ ನೀಡಿದರು.
ನಗರದ ತಾಲ್ಲೂಕು ಕಚೇರಿಯಲ್ಲಿ ಶನಿವಾರ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಸಮುದ್ರದ ನೆಂಟಸ್ತನ, ಉಪ್ಪಿಗೆ ಬಡತನ ಎಂಬ ಗಾದೆ ಮಾತಿನಂತೆ 30 ಕಿ.ಮೀ. ನದಿ ದಡವನ್ನು ಹೊಂದಿದ್ದರೂ ತಾಲ್ಲೂಕಿನ ರೈತರ ಕೃಷಿಗೆ ಹಾಗೂ ಜನತೆ ಕುಡಿಯುವ ನೀರಿಗಾಗಿ ಹಾಹಾಕಾರ ಎದುರಿಸುವಂತಾಗಿದೆ’ ಎಂದು ಹೇಳಿದರು.
‘ಭದ್ರಾ ಜಲಾಶಯದಿಂದ ಜಿಲ್ಲೆಯೆಡೆಗೆ ಹರಿಸುವ ನೀರನ್ನು ಬೇರೆ ಯೋಜನೆಗಳ ಮೂಲಕ ಚಿತ್ರದುರ್ಗದಿಂದ ಹಿಡಿದು ಕೋಲಾರದವರೆಗೂ ಹರಿಸಲಾಗುತ್ತಿದೆ. ಇದರಿಂದಾಗಿ ನೈಜ ಅಚ್ಚುಕಟ್ಟು ಪ್ರದೇಶದ ಜಮೀನುಗಳಿಗೆ ನೀರು ಸಿಗದಾಗಿದೆ. ನಮ್ಮ ರೈತರಿಗಾಗುತ್ತಿರುವ ಅನ್ಯಾಯವನ್ನು ಇನ್ನು ಮುಂದೆ ಸಹಿಸಲಾಗುವುದಿಲ್ಲ’ ಎಂದು ಹರೀಶ್ ಆಕ್ರೋಶ ವ್ಯಕ್ತಪಡಿಸಿದರು.
‘ಮಳೆಗಾಲದ ಅವಧಿಯ ಭತ್ತ ಬೆಳೆಯಲು ನಮಗೆ ನೀರು ಸಿಗಲಿಲ್ಲ, ಇನ್ನು ಬೇಸಿಗೆ ಬೆಳೆಗೆ ನೀರು ಕನಸಿನ ಮಾತೆ ಸರಿ. ತಾಲ್ಲೂಕಿನ ರೈತರ ಹಾಗೂ ಜನರ ನೈಜ ಸ್ಥಿತಿಯ ಬಗ್ಗೆ ಮನವಿ ಸಲ್ಲಿಸುವ ಮೂಲಕ ಸರ್ಕಾರದ ಗಮನಕ್ಕೆ ತರುತ್ತೇವೆ. ಸ್ಪಂದನೆ ಸಿಗದಿದ್ದರೆ ಜಿಲ್ಲೆಯ ವಿವಿಧ ತಾಲ್ಲೂಕುಗಳ ಕೆರೆಗಳಿಗೆ ನೀರು ಹರಿಸುವ ಯೋಜನಾ ಕೇಂದ್ರಗಳ ಮುಂದೆ ಪ್ರತಿಭಟನೆ ನಡೆಸಿ ನೀರೆತ್ತುವುದನ್ನು ತಡೆಯುತ್ತೇವೆ’ ಎಂದು ಘೋಷಿಸಿದರು.
‘ಕೊಂಡಜ್ಜಿ, ಸಮೀಪದ ಬಾತಿ ಕೆರೆ, ಅಗಸನಕಟ್ಟೆ, ಚಂದಾಪುರ, ದೇವರಬೆಳೆಕೆರೆ ಸೇರಿದಂತೆ ತಾಲ್ಲೂಕಿನ ಕೆರೆಗಳಿಗೆ ಮಳೆಗಾಲದಲ್ಲಿ ನೀರು ಹರಿಸಿದರೆ ಕನಿಷ್ಠ ಆ ಭಾಗದ ಜಮೀನುಗಳ ಕೊಳವೆ ಬಾವಿಗಳಿಗೆ ಅಂತರ್ಜಲ ಸಿಗುತ್ತದೆ. ರೈತರಂತೆಯೇ ಇನ್ನು ನಗರದ ಹಾಗೂ ಗ್ರಾಮೀಣ ಭಾಗದ ಜನತೆಗೆ ಕುಡಿಯುವ ನೀರು ಸರಬರಾಜು ಮಾಡುವ ಜಲಸಿರಿ ಯೋಜನೆಗೂ ಮಳೆ ಬಾರದಿದ್ದರೆ ಗರ ಬಡಿಯಲಿದೆ. ಕುಡಿಯುವ ನೀರೆತ್ತುವ ಸ್ಥಳಗಳಲ್ಲಿ ನದಿಗೆ ಬ್ಯಾರೇಜ್ ನಿರ್ಮಿಸುವುದೂ ಕೂಡ ಅಗತ್ಯವಾಗಿದೆ’ ಎಂದು ಹೇಳಿದರು.
ಸಭೆಯಲ್ಲಿ ತಹಶೀಲ್ದಾರ್ ಸಂತೋಷ್ ಕುಮಾರ್ ಜಿ., ಇಒ ಸುಮಲತಾ ಎಸ್.ಪಿ., ಪೌರಾಯುಕ್ತೆ ವಿ.ಈರಮ್ಮ, ನೀರಾವರಿ ಇಲಾಖೆಯ ಎಂಜಿನಿಯರ್‌ಗಳಾದ ಚನ್ನಬಸಪ್ಪ, ಕೃಷ್ಣಮೂರ್ತಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ನಟರಾಜ್, ಪಶುಪಾಲನಾ ಇಲಾಖೆ ಮುಖ್ಯ ವೈದ್ಯಾಧಿಕಾರಿ ತಿಪ್ಪೇಸ್ವಾಮಿ ಎಸ್., ಪಿಡಬ್ಲ್ಯೂಡಿ ಎಇಇ ಮರಿಸ್ವಾಮಿ, ಬೆಸ್ಕಾಂ ಎಇಇ ಲಕ್ಷ್ಮಪ್ಪ, ಕಂದಾಯ ನಿರೀಕ್ಷಕ ಸಮೀರ್ ಅಹ್ಮದ್ ಹಾಗೂ ಇತರೆ ಇಲಾಖಾಧಿಕಾರಿಗಳು ಹಾಜರಿದ್ದರು.
‘ಬೇರೆ ತಾಲ್ಲೂಕಿನ ಬಗ್ಗೆ ಹೊಟ್ಟೆಕಿಚ್ಚಿಲ್ಲ’
‘ಅನ್ಯ ತಾಲ್ಲೂಕುಗಳ ಕೆರೆಗಳಿಗೆ ನೀರು ಹರಿಸುವುದರಿಂದ ಆ ಭಾಗದ ರೈತರಿಗೆ ಆಗುತ್ತಿರುವ ಅನುಕೂಲದ ಬಗ್ಗೆ ನಮಗೆ ಹೊಟ್ಟೆಕಿಚ್ಚಿಲ್ಲ. ಆದರೆ ಆ ಭಾಗದ ರೈತರ ಹಿತ ಕಾಯುತ್ತಿರುವಂತೆಯೇ ಹರಿಹರ ತಾಲ್ಲೂಕಿನ ರೈತರ ಹಿತವನ್ನೂ ಕಾಯುವುದು ಸರ್ಕಾರದ ಕರ್ತವ್ಯವಲ್ಲವೆ’ ಎಂದು ಹರೀಶ್ ಪ್ರಶ್ನಿಸಿದರು.