
ಪ್ರತ್ಯೇಕ ರಾಜ್ಯ ಧ್ವಜಾರೋಹಣಕ್ಕೆ ಯತ್ನ: ಹೋರಾಟಗಾರರ ವಶಕ್ಕೆ ಪಡೆದು ಬಿಡುಗಡೆ
ಕಲಬುರಗಿ: ಅಭಿವೃದ್ಧಿ ವಿಷಯದಲ್ಲಿ ಕಲ್ಯಾಣ ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರಲಾಗುತ್ತಿದೆ ಎಂದು ಆರೋಪಿಸಿ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಪ್ರತ್ಯೇಕ ರಾಜ್ಯ ಧ್ವಜಾರೋಹಣ ಮಾಡಲು ಉದ್ದೇಶಿಸಿದ್ದ ಸಾಮಾಜಿಕ ಕಾರ್ಯಕರ್ತ ಎಂ.ಎಸ್.ಪಾಟೀಲ ನರಿಬೋಳ ಸೇರಿ ಹಲವು ಮುಖಂಡರನ್ನು ಪೊಲೀಸರು ಭಾನುವಾರ ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.
ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಜಾಗೃತಿ ಹೋರಾಟ ಸಮಿತಿಯ ನೇತೃತ್ವದಲ್ಲಿ 10ಕ್ಕೂ ಹೆಚ್ಚು ಹೋರಾಟಗಾರರು ಜಿಲ್ಲಾ ನ್ಯಾಯಾಲಯದ ಬಳಿಯ ವಿಜ್ಞಾನೇಶ್ವರ ವೃತ್ತದಿಂದ ಎಸ್‌ವಿಪಿ ವೃತ್ತದವರೆಗೆ ಮೆರವಣಿಗೆಗೆ ಮುಂದಾದರು.
ಈ ವೇಳೆ ಕಲ್ಯಾಣ ಕರ್ನಾಟಕಕ್ಕೆ ತೆಲಂಗಾಣ ಮಾದರಿಯಲ್ಲಿ ಪ್ರತ್ಯೇಕ ರಾಜ್ಯದ ಸ್ಥಾನಮಾನ ನೀಡಬೇಕು. ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದರು. ಸಿದ್ಧಾರ್ಥ ಕಾನೂನು ಕಾಲೇಜು ಬಳಿ ಪೊಲೀಸರು ಹೋರಾಟಗಾರರನ್ನು ತಡೆದು ವಶಕ್ಕೆ ಪಡೆದರು.