
ಅದೃಷ್ಟವನ್ನೇ ಬದಲಾಯಿಸಿದ ಸ್ಪೂನ್ : Shark Tankನಲ್ಲಿ 3 ಕೋಟಿಯ ಡೀಲ್ ಪಡೆದ ಚಮಚದ ಡಿಸೈನ್
Shark Tank : ಜಗತ್ತು ಬದಲಾಯಿಸುವ ಕಲ್ಪನೆಗೆ ದೊಡ್ಡ ದೊಡ್ಡ ಮೆಷಿನ್, ದುಬಾರಿ ಟೆಕ್ನಾಲಜಿಯೇ ಬೇಕು ಎಂದೇನಿಲ್ಲ. ಅಡುಗೆಮನೆಯ ಒಂದು ಸಣ್ಣ ವಸ್ತುವಿನಿಂದ ಕೂಡಾ ಈ ಕಲ್ಪನೆ ಹುಟ್ಟಬಹುದು. ಭಾರತೀಯ ಡಿಸೈನರ್ ರಾಹುಲ್ ಅಗರ್ವಾಲ್ ಈಗ ಇದೇ ರೀತಿಯ ಸಾಧನೆ ಮಾಡಿದ್ದಾರೆ. ಎಲ್ಲಾ ಅಡುಗೆ ಮನೆಯಲ್ಲೂ ಚಮಚ ಇದ್ದೇ ಇರುತ್ತದೆ. ಚಮಚ ಅಂದರೆ ಅದಕ್ಕಿರುವುದು ಒಂದೇ ರೂಪ. ಶತಮಾನಗಳಿಂದಲೂ ಇದೇ ಡಿಸೈನಿನ ಸ್ಪೂನನ್ನು ನಾವು ನೋಡಿರುವುದು, ಬಳಸಿರುವುದು. ಆದ್ರೆ ಈಗ ಈ ಸ್ಪೂನಿಗೇ ಹೊಸ ರೂಪ ಕೊಟ್ಟಿದ್ದಾರೆ ರಾಹುಲ್ ಅಗರ್ವಾಲ್.
ಐಡಿಯಾದ ಮೇಲೆ 3 ಕೋಟಿ ಡೀಲ್ :
ತಮ್ಮ ಈ ಹೊಸ ಐಡಿಯಾದ ಮೇಲೆ ರಾಹುಲ್ ಅಗರ್ವಾಲ್ ಅಮೆರಿಕದ ಬ್ಯುಸಿನೆಸ್ ರಿಯಾಲಿಟಿ ಶೋ ಶಾರ್ಕ್ ಟ್ಯಾಂಕ್ ಯುಎಸ್ಎಯಲ್ಲಿ 350,000 ಡಾಲರ್ ಅಂದರೆ ಸುಮಾರು 3 ಕೋಟಿ ರೂ.ಗಳ ಡೀಲ್ ಪಡೆದಿದ್ದಾರೆ. ಈ ಮೂಲಕ ಹಳೆಯ ಕಲ್ಪನೆಗೆ ಚ್ಯಾಲೆಂಜ್ ಹಾಕುವ ಧೈರ್ಯ ಇದ್ದರೆ ಹೊಸ ವ್ಯವಹಾರ ಆರಂಭಿಸಬಹುದು ಎನ್ನುವುದನ್ನು ಇವರ ಸಾಧನೆ ತೋರಿಸುತ್ತದೆ.
ವೃತ್ತಿಜೀವನದ ದಿಕ್ಕು ಬದಲಾಯಿಸಿದ ಒಂದು ಆಲೋಚನೆ :
ರಾಹುಲ್ ಅಗರ್ವಾಲ್ ಅವರ ಈ ಕಥೆ ಶುರುವಾಗಿದ್ದು 2014 ರಲ್ಲಿ. ಆಗ ಅವರು ಅಹಮದಾಬಾದಿನ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಡಿಸೈನಿನಲ್ಲಿ ಕಲಿಯುತ್ತಿದ್ದರು. ಒಂದು ದಿನ ಅವನ ಸೀನಿಯರ್ ಬಂದು ಚಮಚಕ್ಕೆ ಇನ್ನು ಹೊಸ ಡಿಸೈನ್ ನೀಡುವುದು ಸಾಧ್ಯ ಇಲ್ಲ. ಇದೇ ಅದರ ಫೈನಲ್ ರೂಪ ಎಂದು ಹೇಳಿದ್ದಾರೆ. ಇದಕ್ಕೆ ಮತ್ತೆ ಹೊಸ ಡಿಸೈನ್ ಕೊಡಲು ಪ್ರಯತ್ನಿಸುವುದರಲ್ಲಿ ಯಾವ ಅರ್ಥವೂ ಇಲ್ಲ ಎಂದು ಹೇಳಿದ್ದಾರೆ. ಆದರೆ ರಾಹುಲಿಗೆ ಇದು ಸರಿ ಕಾಣಲಿಲ್ಲ. ಅವರು ಇದನ್ನೇ ಚ್ಯಾಲೆಂಜ್ ಆಗಿ ತೆಗೆದುಕೊಳ್ಳುತ್ತಾರೆ. ಇಲ್ಲಿ ಇನ್ನೊಂದು ವಿಶೇಷ ಅಂದರೆ ಅಡುಗೆ ಮಾಡುವುದೆಂದರೆ ರಾಹುಲಿಗೆ ಕೂಡಾ ಸುತಾರಾಂ ಇಷ್ಟವಿಲ್ಲ. ಇಷ್ಟಿದ್ದರೂ ಅವರಿಗೆ ಚಮಚಕ್ಕೆ ಹೊಸ ಡಿಸೈನ್ ಕೊಡುವ ಉತ್ಸಾಹ. ನಿಜಕ್ಕೂ ಚಮಚಕ್ಕೆ ಹೊಸ ಡಿಸೈನ್ ಕೊಡೋದಕ್ಕೆ ಸಾಧ್ಯ ಇಲ್ಲವಾ ಎನ್ನುವ ಪ್ರಶ್ನೆ ಅವರ ಮನಸ್ಸಿನಲ್ಲಿ ಮೂಡುತ್ತದೆ. ಅವರ ಮನಸ್ಸಿನಲ್ಲಿ ಬಂದ ಈ ಆಲೋಚನೆ ಅವರ ವೃತ್ತಿಜೀವನದ ದಿಕ್ಕನ್ನೇ ಬದಲಾಯಿಸುತ್ತದೆ.
ನಾಲ್ಕು ಚಮಚದ ಕೆಲಸ ಮಾಡುವುದು ಒಂದು ವಸ್ತು :
ರಾಹುಲ್ ಅವರ ಕಲ್ಪನೆಯಿಂದ ಹುಟ್ಟಿಕೊಂಡ ಈ ಪಾಲಿಗನ್ ಪ್ರಾಡೆಕ್ಟ್ ಸಾಂಪ್ರದಾಯಿಕ ಅಳತೆಯ ಚಮಚಗಳ ಬದಲಿಗೆ ವಿನ್ಯಾಸಗೊಳಿಸಲಾಗಿದೆ. ಸಾಮಾನ್ಯವಾಗಿ ನಾವು ಅಡುಗೆ ಮಾಡುವಾಗ ಬೇರೆ ಬೇರೆ ಅಳತೆಗೆ ತಕ್ಕಂತೆ ಆರು ಚಮಚಗಳನ್ನು ಇಟ್ಟುಕೊಳ್ಳಬೇಕಾಗುತ್ತದೆ. ಆದರೆ ಇಲ್ಲಿ ಕೇವಲ ಈ ಎರಡು ಸಾಧನ ಇದ್ದರೆ ಸಾಕು. ಇದರ ವಿಶೇಷತೆಯೇ ಅದರ ಫೋಲ್ಡಿಂಗ್ ಡಿಸೈನ್. ಇಲ್ಲಿ ಕೊಟ್ಟಿರುವ ಗುರುತುಗಳ ಮೇಲೆ ಸ್ವಲ್ಪ ಒತ್ತಡ ಹಾಕಿದರೆ ಚಪ್ಪಟೆಯಾದ ಉಪಕರಣ ಒಂದು ನಿರ್ದಿಷ್ಟ ಗಾತ್ರದೊಂದಿಗೆ ಚಮಚದ ಆಕಾರಕ್ಕೆ ಬರುತ್ತದೆ.
ದೊಡ್ಡ ಉಪಕರಣವನ್ನು ಅರ್ಧ, ಒಂದು ಅಥವಾ ಎರಡು ಟೇಬಲ್ ಸ್ಪೂನಿನ ಅಳತೆಗೆ ಬಳಸಬಹುದು. ಸಣ್ಣ ಉಪಕರಣ ಕಾಲು ಭಾಗ, ಅರ್ಧ ಅಥವಾ ಒಂದು ಟೀ ಚಮಚದ ಅಳತೆ ಕೊಡುತ್ತದೆ. ಕೇವಲ 2.8 ಮಿಲಿಮೀಟರ್ ದಪ್ಪವಿರುವ ಈ ಉಪಕರಣವನ್ನು ಆಹಾರ-ಸುರಕ್ಷಿತ ವಸ್ತು, ಸಿಲಿಕೋನ್ ಮತ್ತು ಆಯಸ್ಕಾಂತದ ಸಹಾಯದಿಂದ ತಯಾರಿಸಲಾಗಿದೆ. ಬಳಕೆಯ ನಂತರ, ಅವುಗಳನ್ನು ಮತ್ತೆ ಚಪ್ಪಟೆಯಾಗಿ ಪೋಲ್ಡ್ ಮಾಡಬಹುದು. ಇದು ಅಡುಗೆಮನೆಯ ಜಾಗವನ್ನು ಕೂಡಾ ಉಳಿಸುತ್ತದೆ.
ಶಾರ್ಕ್ ಟ್ಯಾಂಕ್ ನಲ್ಲಿ ಗೆದ್ದ ಐಡಿಯಾ :
ರಾಹುಲ್ ಅಗರ್ವಾಲ್ ಅವರ ಈ ಆವಿಷ್ಕಾರ ಶಾರ್ಕ್ ಟ್ಯಾಂಕ್ ಯುಎಸ್ಎಯ ಸೀಸನ್ 18, ಎಪಿಸೋಡ್ 4ರಲ್ಲಿ ಪ್ರಸಾರವಾಗಿತ್ತು. ಇಲ್ಲಿ ಅವರು ಹೂಡಿಕೆದಾರ ಲೋರಿ ಗ್ರೈನರ್ ಮತ್ತು ಅತಿಥಿ ಶಾರ್ಕ್ ಮಿಂಡಿ ಕಾಲಿಂಗ್ ಅವರನ್ನು ಭೇಟಿಯಾದರು. ಇಬ್ಬರೂ ಈ ಪ್ರಾಡೆಕ್ಟಿನಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದರು. 350,000 ಡಾಲರ್ ಗೆ ಬದಲಾಗಿ ಶೇಕಡಾ 8 ರಷ್ಟು ಈಕ್ವಿಟಿ ಮತ್ತು ಶೇಕಡಾ 2 ರಷ್ಟು ಅಡ್ವೆಜೈರಿ ಷೇರ್ ಕೊಡುವ ಡೀಲಿಗೆ ರಾಹುಲ್ ಒಪ್ಪಿಕೊಂಡರು. ಈ ಒಪ್ಪಂದದ ಆಧಾರದ ಮೇಲೆ, ಅವರ ಕಂಪನಿಯ (company) ಮೌಲ್ಯವನ್ನು ಸುಮಾರು 3.5 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.
ರಾಹುಲ್ ಅವರ ಯಶಸ್ಸಿನ ನಿಜವಾದ ಶಕ್ತಿ ಬರೀ ದೊಡ್ಡ ಹೂಡಿಕೆಯ ಮೊತ್ತವಲ್ಲ. ಸಣ್ಣ ಸಣ್ಣ ವಸ್ತುವಿನಿಂದಲೂ ಹೊಸ ಅವಕಾಶವನ್ನು ಹೇಗೆ ಪಡೆಯಬಹುದು ಎನ್ನುವುದನ್ನು ಇವರು ಸಾಬೀತು ಮಾಡಿದ್ದಾರೆ. ಕೆಲವೊಮ್ಮೆ ದೊಡ್ಡ ವ್ಯವಹಾರ ಶುರು ಮಾಡಲು ಜಗತ್ತನ್ನು ಬದಲಾಯಿಸೋ ಅಗತ್ಯ ಇಲ್ಲ. ನಾವು ನೋಡುವ ವಿಧಾನ ಬದಲಾದರೆ ಸಾಕು.