
ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರವಿಲ್ಲದೆ ಹುಲ್ಲು ಕಡ್ಡಿಯೂ ಅಲುಗಾಡಲ್ಲ: BYV
ಮುಳಬಾಗಿಲು (ಕೋಲಾರ): ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರವಿಲ್ಲದೆ ಒಂದು ಹುಲ್ಲುಕಡ್ಡಿಯೂ ಅಲ್ಲಾಡುವುದಿಲ್ಲ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕ ಜೀವನದಲ್ಲಿ 25 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಸೇವಾ ಸಂಕಲ್ಪ ಅಭಿಯಾನ ಅಂಗವಾಗಿ ಅವರು, ಗುರುವಾರ ತಾಲ್ಲೂಕಿನ ಕುರುಡುಮಲೆಯಲ್ಲಿ ವಿನಾಯಕನಿಗೆ ಪೂಜೆ ಸಲ್ಲಿಸಿ ಮಾತನಾಡಿದರು.
ಗುತ್ತಿಗೆದಾರರು ಮಾಡಿರುವ ಕಮಿಷನ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, 'ಸ್ವತಃ ಆಡಳಿತ ಪಕ್ಷದ ಶಾಸಕ ಅಶೋಕ್ ರೈ ಅವರೇ ಸಚಿವರಿಗೆ ಶೇ 8ರಷ್ಟು ಕಮಿಷನ್ ನೀಡಬೇಕಾಗಿದೆ ಎಂದು ಪತ್ರ ಬರೆದಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ₹ 5 ಸಾವಿರ ಕೋಟಿ ಎಲ್ಲಿಗೆ ಹೋಯಿತು ಎಂಬುದಕ್ಕೆ ಇಂದಿಗೂ ಉತ್ತರವಿಲ್ಲ. ಇಂತಹ ಭ್ರಷ್ಟ ಸರ್ಕಾರವನ್ನು ಮುಂದಿನ ಚುನಾವಣೆಯಲ್ಲಿ ಜನ ಬುಡಸಮೇತ ಕಿತ್ತೊಗೆಯಲಿದ್ದಾರೆ' ಎಂದು ಎಚ್ಚರಿಸಿದರು.
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ವಿಚಾರವಾಗಿ ಕಾಂಗ್ರೆಸ್ ನಡೆಸುತ್ತಿರುವ ಹೋರಾಟದ ಬಗ್ಗೆ ಕೇಳಿದ ಪ್ರಶ್ನೆಗೆ, 'ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ತೀವ್ರ ಹತಾಶೆಗೆ ಒಳಗಾಗಿವೆ. ಪ್ರಧಾನಿ ಮೋದಿ ಅವರ ಜನಪ್ರಿಯತೆ ಮತ್ತು ಜನಪರ ಯೋಜನೆಗಳನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ, ಸಂವಿಧಾನಾತ್ಮಕ ಸಂಸ್ಥೆಯಾದ ಚುನಾವಣಾ ಆಯೋಗದ ಮೇಲೆಯೇ ಆರೋಪ ಮಾಡಿ ಅನುಮಾನ ಹುಟ್ಟಿಸುವ ದುಸ್ಸಾಹಸ ಮಾಡುತ್ತಿದ್ದಾರೆ. ದೇಶದ ಜನತೆಗೆ ಈ ಕಪಟ ನಾಟಕದ ಅರಿವಿದೆ' ಎಂದು ತಿರುಗೇಟು ನೀಡಿದರು.
ರೈತರ ಬದುಕಿನ ಜೊತೆ ಚೆಲ್ಲಾಟ:
ರಾಜ್ಯ ಸರ್ಕಾರದ ವೈಫಲ್ಯಗಳನ್ನು ಪಟ್ಟಿ ಮಾಡಿದ ವಿಜಯೇಂದ್ರ, ಭೀಕರ ಬರಗಾಲದ ಸಂದರ್ಭದಲ್ಲಿ ರೈತರಿಗೆ ಹೆಕ್ಟೇರ್‌ಗೆ ₹ 50 ಸಾವಿರ ಪರಿಹಾರ ನೀಡುವಂತೆ ಒತ್ತಾಯಿಸಿದರೆ, ಸರ್ಕಾರ ಕೇವಲ ₹ 2,500 ಭಿಕ್ಷೆ ಮಾದರಿಯ ನೆರವು ನೀಡಿ ಸಂಕಷ್ಟಕ್ಕೆ ತಳ್ಳಿದೆ. ರೈತರ ಪಾಲಿಗೆ ಈ ಸರ್ಕಾರ ಬದುಕಿದ್ದರೂ ಸತ್ತಂತೆ ಆಗಿದೆ. ಮತ್ತೊಂದೆಡೆ ವಾಹನ ಸವಾರರಿಗೆ ₹5 ಸಾವಿರ ದಂಡ ವಿಧಿಸುವ ಮಾತನಾಡಿ ವಸೂಲಿಗೆ ಇಳಿದಿದ್ದಾರೆ ಕಿಡಿಕಾರಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ರಿಯಲ್ ಎಸ್ಟೇಟ್ ಬಿಟ್ಟರೆ ಬೇರೆ ಆದ್ಯತೆ ಇಲ್ಲ ಎಂದು ಆರೋಪಿಸಿದ ಅವರು, ಕಳೆದ ಮೂರು ವರ್ಷಗಳಲ್ಲಿ ಎಸ್‌ಸಿಪಿ-ಟಿಎಸ್‌ಪಿ ಯೋಜನೆಗೆ ಸೇರಬೇಕಿದ್ದ ₹ 55 ಸಾವಿರ ಕೋಟಿ ಅನುದಾನವನ್ನು ಇತರೆ ಕಾರ್ಯಕ್ರಮಗಳಿಗೆ ಅಕ್ರಮವಾಗಿ ವರ್ಗಾಯಿಸಿ ದಲಿತ ಸಮುದಾಯಕ್ಕೆ ದ್ರೋಹ ಎಸಗಲಾಗಿದೆ ಎಂದು ಆರೋಪಿಸಿದರು.
ಬಂಗಾರಪೇಟೆ ಮತ್ತು ಕೆಜಿಎಫ್ ವಿಧಾನಸಭಾ ಕ್ಷೇತ್ರಗಳಲ್ಲಿ ಸೇವಾ ಸಂಕಲ್ಪ ಅಭಿಯಾನ ನಡೆಯಲಿದೆ. ವಿಕಸಿತ ಭಾರತದ ಸಂಕಲ್ಪ ತೊಟ್ಟಿರುವ ಪ್ರಧಾನಿ ಮೋದಿ ಅವರಿಗೆ ಭಗವಂತ ಉತ್ತಮ ಆರೋಗ್ಯ, ಆಯುಷ್ಯ ನೀಡಲಿ ಎಂದು ಪ್ರಾರ್ಥಿಸಿದ್ದೇವೆ ಎಂದು ತಿಳಿಸಿದರು.
ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳು ಕಾರ್ಯಕರ್ತರ ಚುನಾವಣೆ. ಈ ನಿಟ್ಟಿನಲ್ಲಿ ಕಾರ್ಯಕರ್ತರನ್ನು ಹುರಿದುಂಬಿಸುವುದು ಮತ್ತು ಪಕ್ಷ ಸಂಘಟನೆ ಈ ಯಾತ್ರೆಯ ಮುಖ್ಯ ಉದ್ದೇಶ. ದಕ್ಷಿಣ ಭಾರತದಲ್ಲಿ ಬಿಜೆಪಿಯ ಹೆಬ್ಬಾಗಿಲಾಗಿರುವ ಕರ್ನಾಟಕದಲ್ಲಿ ಮತ್ತೆ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರಬೇಕಾದರೆ ಕೋಲಾರ ಜಿಲ್ಲೆಯಲ್ಲೂ ಗರಿಷ್ಠ ಸಂಖ್ಯೆಯ ಬಿಜೆಪಿ ಶಾಸಕರು ಗೆಲ್ಲಬೇಕು ಎಂದು ಹೇಳಿದರು.