ಡಿಸಿಸಿ ಬ್ಯಾಂಕ್‌ ಅಧ್ಯಕ್ಷರ ಚುನಾವಣೆ: ಸಿಎಂ ಅಂಗಳಕ್ಕೆ ‘ಕೈ’ ಶಾಸಕರ ಜಗಳ!

ಡಿಸಿಸಿ ಬ್ಯಾಂಕ್‌ ಅಧ್ಯಕ್ಷರ ಚುನಾವಣೆ: ಸಿಎಂ ಅಂಗಳಕ್ಕೆ ‘ಕೈ’ ಶಾಸಕರ ಜಗಳ!

ಡಿಸಿಸಿ ಬ್ಯಾಂಕ್‌ ಅಧ್ಯಕ್ಷರ ಚುನಾವಣೆ: ಸಿಎಂ ಅಂಗಳಕ್ಕೆ ‘ಕೈ’ ಶಾಸಕರ ಜಗಳ!

ಕೋಲಾರ: ಕೋಲಾರ–ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರ ಚುನಾವಣೆ ವೇಳೆ ನಡೆದ ಬೆಳವಣಿಗೆಗಳು, ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರ ನಿಯೋಜನೆ ವಿವಾದ, ಬ್ಯಾಂಕ್‌ನ ಪುನಶ್ಚೇತನ ವಿಚಾರ ಹಾಗೂ ಅವಳಿ ಜಿಲ್ಲೆಗಳಲ್ಲಿನ ಕಾಂಗ್ರೆಸ್‌ ಶಾಸಕರ ನಡುವಿನ ಆಂತರಿಕ ಭಿನ್ನಾಭಿಪ್ರಾಯ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಮನೆ ಅಂಗಳದಲ್ಲಿ ಪ್ರತಿಧ್ವನಿಸಿವೆ.

ಈ ವಿಚಾರವಾಗಿ ‘ಕೈ’ ಶಾಸಕರು ಭಾನುವಾರ ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಮುಖ್ಯಮಂತ್ರಿ ಭೇಟಿಯಾಗಿ ಪರಸ್ಪರ ದೂರುಗಳ ಸುರಿಮಳೆ ಹರಿಸಿದ್ದಾರೆ. ಕಾಂಗ್ರೆಸ್‌ ಪಾಳಯದಲ್ಲಿ ಶಾಸಕರ ನಡುವಿನ ವೈಮನಸ್ಯ, ಅಸಮಾಧಾನ ತಣಿದಿಲ್ಲ ಎಂಬುದು ಸ್ಪಷ್ಟವಾಗಿದೆ.

ಒಂದು ನಿಯೋಗದಲ್ಲಿ ತೆರಳಿ ಭೇಟಿಯಾದವರೆಲ್ಲಾ ‘ಘಟಬಂಧನ್‌’ನಲ್ಲಿ (ಕೆ.ಆರ್.ರಮೇಶ್‌ ಕುಮಾರ್‌ ಬಣ) ಗುರುತಿಸಿಕೊಂಡವರು. ಕೆ.ಎಚ್‌.ಮುನಿಯಪ್ಪ ಬಣದಲ್ಲಿರುವ ಕೆಜಿಎಫ್‌ ಕಾಂಗ್ರೆಸ್‌ ಶಾಸಕಿ ರೂಪಕಲಾ ಶಶಿಧರ್‌ ಕೂಡ ಇದೇ ದಿನ ಪ್ರತ್ಯೇಕವಾಗಿ ಭೇಟಿಯಾಗಿ ಚರ್ಚಿಸಿದ್ದಾರೆ.

‌ಡಿಸಿಸಿ ಬ್ಯಾಂಕ್‌ ಅಧ್ಯಕ್ಷರೂ ಆಗಿರುವ ಕೋಲಾರ ಶಾಸಕ ಕೊತ್ತೂರು ಮಂಜುನಾಥ್‌, ನಾಮನಿರ್ದೇಶಿತ ಅಧಿಕಾರೇತರ ಸದಸ್ಯರೂ ಆಗಿರುವ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಮಾಲೂರು ಶಾಸಕ ಕೆ.ವೈ.ನಂಜೇಗೌಡ, ಚಿಂತಾಮಣಿ ಶಾಸಕ ಎಂ.ಸಿ.ಸುಧಾಕರ್, ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ವಿಧಾನ ಪರಿಷತ್‌ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಖಾಜಿಕಲ್ಲಹಳ್ಳಿ ಮುನಿರಾಜು, ಕೋಲಾರ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ ಭೇಟಿ ಮಾಡಿದರು.

ಪ್ರಮುಖವಾಗಿ 15 ತಿಂಗಳ ನಂತರ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆದು ಆಡಳಿತ ಮಂಡಳಿ ಜಾರಿಗೆ ಬಂದ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್‌ ಅವರಿಗೆ ಧನ್ಯವಾದ ಸಲ್ಲಿಸುವುದು ಈ ಭೇಟಿಯ ಉದ್ದೇಶವಾಗಿತ್ತು. ಆದರೆ, ಹಲವಾರು ವಿಚಾರಗಳು ಚರ್ಚೆ ಆಗಿವೆ, ದೂರುಗಳು ವಿನಿಯಮವಾಗಿವೆ.

ಪ್ರಮುಖವಾಗಿ ವಿಧಾನಸಭೆ ಕಲಾಪದ ವೇಳೆ ಎಸ್.ಎನ್‌.ನಾರಾಯಣಸ್ವಾಮಿ ಹಾಗೂ ರೂಪಕಲಾ ಶಶಿಧರ್‌ ನಡುವಿನ ಮಾತಿನ ಚಕಮಕಿ ವಿಚಾರ ಪ್ರಸ್ತಾಪವಾಗಿದೆ. ರೂಪಕಲಾ ಅವರು ತಮಗೆ ಬೆದರಿಕೆ ಹಾಕಿದ್ದಾರೆ ಎಂದು ಬಂಗಾರಪೇಟೆ ಶಾಸಕರು ಆರೋಪಿಸಿದ್ದರು.

‘ಕಲಾಪದ ವೇಳೆ ನಾನು ಹಾಗೂ ಎಸ್‌.ಎನ್‌.ಸುಬ್ಬಾರೆಡ್ಡಿ ಬೇರೆ ಯಾವುದೋ ವಿಚಾರ ಚರ್ಚಿಸುತ್ತಿದ್ದಾಗ ಏಕಾಏಕಿ ತಮ್ಮ ಬಳಿ ಬಂದ ರೂಪಕಲಾ ಮೇಜು ಕುಟ್ಟಿ ನೋಡ್ಕೋತಿನಿ ಎಂಬುದಾಗಿ ಧಮ್ಕಿ ಹಾಕಿದರು. ಈಗಾಗಲೇ ಅವರ ಅಪ್ಪ (ಕೆ.ಎಚ್‌.ಮುನಿಯಪ್ಪ) ನನ್ನನ್ನು ಮುಗಿಸಿದ್ದಾರೆ. ಈಗ ರೂಪಕಲಾ ಇನ್ನೊಂದು ಮುಖ ತೋರಿಸಿದ್ದಾರೆ’ ಎಂಬುದಾಗಿ ನಾರಾಯಣಸ್ವಾಮಿ ಈಚೆಗೆ ಹೇಳಿದ್ದರು. ಅದೇ ವಿಚಾರವನ್ನು ಡಿ.ಕೆ.ಶಿವಕುಮಾರ್ ಬಳಿಯೂ ಚರ್ಚಿಸಿದರು ಎಂಬುದಾಗಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ನಾನು ಎಸ್‌.ಎನ್‌.ಸುಬ್ಬಾರೆಡ್ಡಿ ಮಾತನಾಡಬಾರದೇ? ನಾನು ಕೆ.ವೈ.ನಂಜೇಗೌಡ ಮಾತನಾಡಬಾರದೇ? ನಾನು ಯಾರಿಗೆ ಅವಮಾನ ಮಾಡಿದ್ದೇನೆ? ಏಕೆ ಆ ರೀತಿ ತಪ್ಪಾಗಿ ಭಾವಿಸಿದರು?’ ಎಂಬುದಾಗಿ ಮುಖ್ಯಮಂತ್ರಿ ಬಳಿ ಕೇಳಿದರು ಎನ್ನಲಾಗಿದೆ.

ತಮಗೆ ನೋವಾಗಿರುವುದು ನಿಜ, ಆದರೆ, ಮುಖ್ಯಮಂತ್ರಿ ಭೇಟಿ ವೇಳೆ ಯಾರ ಬಗ್ಗೆಯೂ ದೂರು ನೀಡಿಲ್ಲ, ಬೇರೆ ವಿಚಾರ ಚರ್ಚಿಸಿರುವುದಾಗಿ ರೂಪಕಲಾ ಶಶಿಧರ್‌ ಹೇಳಿದರು.

ಇನ್ನೊಂದೆಡೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಇದೇ ಪರಿಸ್ಥಿತಿ. ಚಿಕ್ಕಬಳ್ಳಾಪುರ ಕಾಂಗ್ರೆಸ್‌ ಶಾಸಕ ಪ್ರದೀಪ್ ಈಶ್ವರ್ ಮತ್ತು ಚಿಂತಾಮಣಿ ಶಾಸಕ ಡಾ.ಎಂ.ಸಿ.ಸುಧಾಕರ್ ನಡುವೆಯೂ ರಾಜಕೀಯ ಸಮರ ಹಾಗೂ ಒಳಜಗಳ ನಡೆಯುತ್ತಿದೆ. ಆದರೆ, ಭೇಟಿ ವೇಳೆ ಈ ವಿಚಾರ ಪ್ರಸ್ತಾಪವಾಗಿಲ್ಲ ಎಂಬುದು ಗೊತ್ತಾಗಿದೆ.

‘ಬ್ಯಾಲಹಳ್ಳಿ ಅಧ್ಯಕ್ಷರಾಗಿದ್ದಾಗ ನೂರಾರು ಕೋಟಿ ದುರ್ಬಳಕೆ’

‘ಬ್ಯಾಲಹಳ್ಳಿ ಗೋವಿಂದಗೌಡ 10 ವರ್ಷ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿ‌ದ್ದರು. ಅವರ ಅವಧಿಯಲ್ಲಿ ನೂರಾರು ಕೋಟಿ ರೂಪಾಯಿ ದುರುಪಯೋಗ ಆಗಿರುವುದು ಸಭೆ ನಡೆಸಿ ದಾಖಲೆ ಪರಿಶೀಲಿಸಿದಾಗ ಗೊತ್ತಾಗಿದೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂಬುದಾಗಿ ಮುಖ್ಯಮಂತ್ರಿಗೆ ಒತ್ತಾಯಿಸಿದ್ದೇವೆ’ ಎಂದು ಶಾಸಕ ಹಾಗೂ ಡಿಸಿಸಿ ಬ್ಯಾಂಕ್‌ ನಾಮನಿರ್ದೇಶಿತ ಸದಸ್ಯ ಎಸ್‌.ಎನ್‌.ನಾರಾಯಣಸ್ವಾಮಿ ತಿಳಿಸಿದರು.

ಮುಖ್ಯಮಂತ್ರಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಡಿಸಿಸಿ ಬ್ಯಾಂಕ್‌ನಲ್ಲಿ ನಡೆದಿರುವ ಅವ್ಯವಹಾರಗಳ ತನಿಖೆ ಆಗಬೇಕು. ಮಹಿಳೆಯರಿಗೆ ಸಾಲ ಕೊಡುವಂತಾಗಬೇಕು ಎಂಬ ವಿಚಾರಗಳನ್ನೂ ಗಮನಕ್ಕೆ ತಂದಿದ್ದೇವೆ’ ಎಂದರು.

ಕೆ.ಎಚ್‌.ಮುನಿಯಪ್ಪ 7 ಬಾರಿ ಸಂಸದ, 10 ವರ್ಷ ಕೇಂದ್ರ ಮಂತ್ರಿ, ಈಗ ರಾಜ್ಯ ಸಚಿವರಾಗಿದ್ದಾರೆ. ರೂಪಕಲಾ 10 ವರ್ಷ ಡಿಸಿಸಿ ಬ್ಯಾಂಕ್‌ ನಿರ್ದೇಶಕರಾಗಿ, ಎರಡು ಬಾರಿ ಶಾಸಕರಾಗಿ, ನಿಗಮದ ಅಧ್ಯಕ್ಷರಾಗಿದ್ದಾರೆ. ಅವರಿಗೆ ಶಕ್ತಿ ಇದ್ದು, ನೋಡ್ಕೋತಿನಿ ಎಂದಿದ್ದಾರೆ. ಅವರ ಶಕ್ತಿಗೆ ತಲೆಬಾಗಲೇಬೇಕಾಗುತ್ತದೆ ಎಂದು ಹೇಳಿದರು.

ನೋವಾಗಿದೆ, ಕೋಲಾರಮ್ಮ ಕೈಬಿಡಲ್ಲ: ಶಾಸಕಿ ರೂಪಕಲಾ

ನನ್ನ ನೋವು ಅರ್ಥ ಮಾಡಿಕೊಳ್ಳಬಹುದೆಂದು ನನ್ನದೇ ಪಕ್ಷದವರಿಗೆ ಕೆಲ ವಿಚಾರ ಹೇಳಿದೆ. ಅವರೇನು ವಿರೋಧ ಪಕ್ಷದವವರಲ್ಲ. ಆದರೆ, ಅವರು ಬೇರೆ ಬೇರೆ ಅರ್ಥ ಬರುವಂತೆ ಮಾತನಾಡಿ ಅದನ್ನು ವೈಭವೀಕರಿಸಿದ್ದಾರೆ. ಇದರಿಂದ ನನಗೆ ನೋವಾಗಿರುವುದು ನಿಜ. ನನ್ನ ಭಾವನೆಯನ್ನು ಅವರು ಅರ್ಥ ಮಾಡಿಕೊಂಡಿಲ್ಲ. ಕೋಲಾರಮ್ಮ ತಾಯಿಯನ್ನು ನಾನು ಬಲವಾಗಿ ನಂಬಿದ್ದೇನೆ, ಆ ತಾಯಿ ನನ್ನ ಕೈ ಬಿಡಲ್ಲ ಎಂದು ಕೆಜಿಎಫ್‌ ಶಾಸಕಿ ರೂಪಕಲಾ ಶಶಿಧರ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ನಾನು ಯಾರ ಮೇಲೂ ವೈಯಕ್ತಿಕ ದ್ವೇಷ ಮಾಡಲ್ಲ, ಆರೋಪ ಮಾಡಲ್ಲ. ಮನಸ್ಸಿಗೆ ತಡೆಯಲು ಆಗದಿದ್ದಾಗ ಭಾವನೆ ವ್ಯಕ್ತಪಡಿಸುತ್ತೇನೆ. ಆದರೆ, ಅದನ್ನು ವೈಭವೀಕರಿಸುವುದು ಕೆಲವರ ಸ್ವಾತಂತ್ರ. ಅದಕ್ಕೆ ನಾನು ಏನೂ ಹೇಳಲ್ಲ, ಸಮಯವೇ ಉತ್ತರವೇ ನೀಡುತ್ತದೆ ಎಂದರು.

ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಜನರ ಭಾವನೆಗಳಿಗೆ ಸ್ಪಂದಿಸಬೇಕು. ರೈತರಿಗೆ, ಬಡವರಿಗೆ ಸಮಯ ಕೊಡಬೇಕು ಎಂದು ನುಡಿದರು.

ಶಾಸಕಿ ರೂಪಕಲಾ ಪ್ರತ್ಯೇಕ ಭೇಟಿ

ಕೆಜಿಎಫ್‌ ಕಾಂಗ್ರೆಸ್‌ ಶಾಸಕಿ ರೂಪಕಲಾ ಶಶಿಧರ್‌ ಕೂಡ ಬೆಂಗಳೂರಿನಲ್ಲಿ ಭಾನುವಾರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಚರ್ಚಿಸಿದರು. ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಭೇಟಿ ಕೂಡ ಕುತೂಹಲ ಮೂಡಿಸಿತ್ತು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ರೂಪಕಲಾ, ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ, ಬರ ಹಾಗೂ ಕುಡಿಯುವ ನೀರಿನ ವಿಚಾರ ಚರ್ಚೆ ನಡೆಸಿದೆ ಎಂದರು. ಬರ ಹಿನ್ನೆಲೆಯಲ್ಲಿ ಕೋಲಾರಕ್ಕೂ ಪ್ರವಾಸ ಮಾಡಬೇಕಿತ್ತು ಎಂಬುದಾಗಿ ಮುಖ್ಯಮಂತ್ರಿ ಹೇಳಿದರು. ಕುಡಿವ ನೀರಿನ ಸಮಸ್ಯೆ ಗಮನದಲ್ಲಿದ್ದು, ಬಗೆಹರಿಸುವುದು ತಮ್ಮ ಜವಾಬ್ದಾರಿ, ಡಿ.ಸಿ ಜೊತೆ ಮಾತನಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ರೂಪಕಲಾ ತಿಳಿಸಿದರು.

ಡಿಸಿಸಿ ಬ್ಯಾಂಕ್ ಎಂ.ಡಿ ನಿಯೋಜನೆ ಚರ್ಚೆ

ಮುಖ್ಯಮಂತ್ರಿ ಭೇಟಿ ವೇಳೆ ಕೋಲಾರ–ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ನ ಕಾರ್ಯವೈಖರಿ ಕುರಿತು ಚರ್ಚೆ ನಡೆದಿದೆ.

‌ಬೆಂಗಳೂರು ಜೆಆರ್‌ಸಿ ಆಗಿರುವ ವೆಂಕಟೇಶಪ್ಪ ಅವರಿಗೆ ಮತ್ತೆ ಎಂ.ಡಿಯಾಗಿ ಪ್ರಭಾರ ನೀಡಲಾಗಿದ್ದು, ಅಧಿಕಾರ ಸ್ವೀಕರಿಸಿದ್ದಾರೆ. ಈವರೆಗೆ ಖಾನ್ ಪರ್ವೇಜ್‌ ಪ್ರಭಾರ ಎಂ.ಡಿ ಆಗಿದ್ದರು.

‘ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅವರಿಗೆ ಸುಳ್ಳು ಹೇಳಿ ಶಾಸಕರೊಬ್ಬರು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶಪ್ಪ ಅವರನ್ನು ತೆಗೆಸಿದ್ದಾರೆ. ಅವರನ್ನು ತೆಗೆಸಲು ಕಾರಣವೇನು? ಅವರು ಏಕೆ ಇಲ್ಲಿಗೆ ಬೇಡ? ಸಂಬಂಧಪಟ್ಟವರು ಕಾರಣ ಕೊಡಬೇಕು’ ಎಂಬುದಾಗಿ ಡಿಸಿಸಿ ಬ್ಯಾಂಕ್‌ನ ನಿರ್ದೇಶಕರು, ಶಾಸಕರು ಡಿ.ಕೆ.ಶಿವಕುಮಾರ್‌ ಬಳಿ ಕೇಳಿಕೊಂಡರು ಎಂದು ಮೂಲಗಳು ತಿಳಿಸಿವೆ.

ಬ್ಯಾಂಕ್‌ನ ಅಕ್ರಮಗಳನ್ನು ತನಿಖೆ ನಡೆಸಬಾರದೇ? ಲೋಕಾಯುಕ್ತ ತನಿಖೆಗೆ ಆದೇಶವಾದರೆ ಹೈಕೋರ್ಟ್‌ಗೆ ಹೋಗಿ ತಡೆಯಾಜ್ಞೆ ತರುತ್ತಾರೆ. ಸಿಒಡಿ ತನಿಖೆ ತಡೆಕೋರಿ ಸುಪ್ರೀಂ ಕೋರ್ಟ್‌ಗೆ ಹೋಗುತ್ತಾರೆ. ರಿ ಆಡಿಟ್‌ಗೂ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ತರುತ್ತಾರೆ. ಈ ರೀತಿ ಮಾಡಲು ಕಾರಣ ಏನು’ ಎಂದು ಪ್ರಶ್ನಿಸಿದರು ಎಂಬುದು ಗೊತ್ತಾಗಿದೆ.

ಬ್ಯಾಂಕ್‌ನ ಸಾಲದ ಪರಿಸ್ಥಿತಿಯನ್ನೂ ವಿವರಿಸಿದ್ದಾರೆ. ₹ 411 ಕೋಟ್‌ ಎನ್‌ಪಿಎ (ವಸೂಲಿ ಆಗದ ಸಾಲ) ಬಗ್ಗೆಯೂ ಗಮನಕ್ಕೆ ತಂದಿದ್ದಾರೆ. ಪುನಶ್ಚೇತನ ಸಂಬಂಧ ಮುಖ್ಯಮಂತ್ರಿ ಕೆಲ ಸಲಹೆ, ಸೂಚನೆ ನೀಡಿದ್ದಾರೆ.

ಯಾವ ಅಧಿಕಾರಿಯನ್ನು ಹಾಕಿಸಿಕೊಳ್ಳಬೇಕು, ಹೇಗೆ ಆಡಳಿತ ನಡೆಸಬೇಕು ಎಂಬುದು ಡಿಸಿಸಿ ಬ್ಯಾಂಕ್‌ನ ಹೊಸ ಅಧ್ಯಕ್ಷರಿಗೆ ಬಿಟ್ಟ ವಿಚಾರ. ಅಧ್ಯಕ್ಷ ಆಗಿರುವುದರಿಂದ ಅವರ ಜವಾಬ್ದಾರಿ ಇರುತ್ತದೆ ರೂಪಕಲಾ ಶಶಿಧರ್‌, ಕೆಜಿಎಫ್‌ ಶಾಸಕಿ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ