ಬಂಗಾರಪೇಟೆ | ಹಾದಿ ತಪ್ಪಿದ ‘ಫೀಡಿಂಗ್‌ ಪಾಯಿಂಟ್‌’ ಯೋಜನೆ, ನಿರ್ವಹಣೆ ಕೊರತೆ

ಬಂಗಾರಪೇಟೆ | ಹಾದಿ ತಪ್ಪಿದ ‘ಫೀಡಿಂಗ್‌ ಪಾಯಿಂಟ್‌’ ಯೋಜನೆ, ನಿರ್ವಹಣೆ ಕೊರತೆ

ಬಂಗಾರಪೇಟೆ | ಹಾದಿ ತಪ್ಪಿದ ‘ಫೀಡಿಂಗ್‌ ಪಾಯಿಂಟ್‌’ ಯೋಜನೆ, ನಿರ್ವಹಣೆ ಕೊರತೆ

ಬಂಗಾರಪೇಟೆ: ನಗರದಲ್ಲಿ ಬೀದಿನಾಯಿಗಳ ಹಸಿವು ನೀಗಿಸುವ ಉದ್ದೇಶದಿಂದ ನಗರಸಭೆ ಜಾರಿಗೆ ತಂದಿದ್ದ ‘ಫೀಡಿಂಗ್ ಪಾಯಿಂಟ್‌’ (ಆಹಾರ ನೀಡುವ ಸ್ಥಳ) ಯೋಜನೆ ನಿರ್ವಹಣೆ ಕೊರತೆಯಿಂದ ಸಂಪೂರ್ಣ ಹಾದಿ ತಪ್ಪಿದೆ.

ಯೋಜನೆಯ ಮೂಲ ಆಶಯವನ್ನೇ ಮರೆತ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ಜಾಗೃತಿ ಕೊರತೆಯಿಂದ ಪ್ರತಿಯೊಂದು ವಾರ್ಡ್‌ನ ಫೀಡಿಂಗ್ ಪಾಯಿಂಟ್‌ಗಳು ತ್ಯಾಜ್ಯದ ಅಡ್ಡೆಗಳಾಗಿ ಮಾರ್ಪಟ್ಟಿವೆ.

ನಗರದ ಒಟ್ಟು 27 ವಾರ್ಡ್‌ಗಳಲ್ಲಿ ಫೀಡಿಂಗ್ ಪಾಯಿಂಟ್ ಗುರುತಿಸಿ ಯೋಜನೆಗೆ ಚಾಲನೆ ನೀಡಿತ್ತು. ಬೀದಿನಾಯಿಗಳು ಆಹಾರಕ್ಕಾಗಿ ರಸ್ತೆಗಳಲ್ಲಿ ಸಾರ್ವಜನಿಕರು, ವೃದ್ಧರು ಹಾಗೂ ಶಾಲಾ ಮಕ್ಕಳ ಮೇಲೆ ದಾಳಿ ಮಾಡುವುದನ್ನು ತಡೆಯುವುದು ಈ ಯೋಜನೆಯ ಗುರಿಯಾಗಿತ್ತು. ಆರಂಭದಲ್ಲಿ ಪ್ರಾಣಿದಯಾ ಸಂಘಟನೆ ಹಾಗೂ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ, ಪ್ರಸ್ತುತ ಉಸ್ತುವಾರಿ ಕೊರತೆಯಿಂದಾಗಿ ಯೋಜನೆಯ ಉದ್ದೇಶವೇ ಹಾದಿ ತಪ್ಪಿದೆ.

ಫೀಡಿಂಗ್ ಪಾಯಿಂಟ್‌ಗಳಾಗಿ ಗುರುತಿಸಲಾದ ಸ್ಥಳಗಳಲ್ಲಿ ಬೀದಿನಾಯಿಗಳಿಗೆ ಯೋಗ್ಯ ಹಾಗೂ ಪೌಷ್ಟಿಕ ಆಹಾರ ನೀಡುವ ಬದಲಿಗೆ ನಗರದ ಹೋಟೆಲ್ ಮಾಲೀಕರು, ಮಾಂಸದಂಗಡಿ ಹಾಗೂ ಸ್ಥಳೀಯರು ಕೊಳೆತ, ದುರ್ವಾಸನೆ ಬೀರುವ ತ್ಯಾಜ್ಯವನ್ನು ತಂದು ಚೆಲ್ಲುತ್ತಿದ್ದಾರೆ. ಪ್ಲಾಸ್ಟಿಕ್ ಚೀಲಗಳಲ್ಲಿ ಕಟ್ಟಿಹಾಕುವ ಹಾಳಾದ ಆಹಾರ, ಹೆಚ್ಚು ಖಾರವಿರುವ ಅಡುಗೆ ಹಾಗೂ ಕೊಳೆತ ಮಾಂಸದ ತ್ಯಾಜ್ಯವನ್ನು ನಾಯಿಗಳು ತಿನ್ನಲಾಗದೆ ರಸ್ತೆಯಲ್ಲೇ ಬಿಡುತ್ತಿವೆ. ಹಾಗಾಗಿ ಫೀಡಿಂಗ್ ಪಾಯಿಂಟ್‌ಗಳು ನೊಣ, ಸೊಳ್ಳೆಗಳ ಅವಾಸ ತಾಣವಾಗಿದೆ. ಈಡೀ ಪ್ರದೇಶ ದುರ್ನಾತ ಬೀರುತ್ತಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ.

ಫೀಡಿಂಗ್ ಪಾಯಿಂಟ್‌ಗಳಲ್ಲಿ ಎಂತಹ ಆಹಾರ ಹಾಕಲಾಗುತ್ತಿದೆ. ಜೊತೆಗೆ ಅಲ್ಲಿನ ನೈರ್ಮಲ್ಯ ಹೇಗಿದೆ ಎಂಬುದನ್ನು ದಿನನಿತ್ಯ ಪರಿಶೀಲಿಸಲು ನಗರಸಭೆ ಯಾವುದೇ ಸಿಬ್ಬಂದಿಯನ್ನು ನಿಯೋಜಿಸಿಲ್ಲ. ಬೀದಿನಾಯಿಗಳಿಗೆ ತಿನ್ನಲು ಯೋಗ್ಯವಾದ ಬೇಯಿಸಿದ ಅನ್ನ, ಬಿಸ್ಕತ್, ಒಣ ಆಹಾರ ಅಥವಾ ಸ್ವಚ್ಛ ಮಾಂಸದ ತ್ಯಾಜ್ಯವನ್ನು ಮಾತ್ರ ಹಾಕಬೇಕು ಎಂಬ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಆಡಳಿತ ಸಂಪೂರ್ಣ ವಿಫಲವಾಗಿದೆ. ಜೊತೆಗೆ ಪ್ರತಿ ದಿನ ಫೀಡಿಂಗ್ ಪಾಯಿಂಟ್ ಸುತ್ತ ಶುಚಿಗೊಳಿಸದ ಹಿನ್ನೆಲೆ ಸುತ್ತಲಿನ ನಿವಾಸಿಗಳು ಫೀಡಿಂಗ್ ಪಾಯಿಂಟ್ ಅನ್ನೇ ತೆರವಿಗೊಳಿಸಲು ಒತ್ತಾಯಿಸುತ್ತಿದ್ದಾರೆ.

ಲಕ್ಷಾಂತರ ರೂಪಾಯಿ ವೆಚ್ಚದ ‘ಫೀಡಿಂಗ್ ಪಾಯಿಂಟ್’ ಯೋಜನೆ ಹಾದಿ ತಪ್ಪಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹಾಗಾಗಿ ನಗರಸಭೆ ತಕ್ಷಣವೇ ಎಚ್ಚೆತ್ತು ಸ್ವಯಂಸೇವಾ ಸಂಸ್ಥೆ ಅಥವಾ ಸ್ಥಳೀಯ ನಿವಾಸಿಗಳ ಸಹಯೋಗದೊಂದಿಗೆ ಯೋಜನೆಗೆ ಮರುಜೀವ ನೀಡಬೇಕು. ಪ್ರತಿ ವಾರ್ಡ್‌ನಲ್ಲೂ ಯೋಗ್ಯ ಆಹಾರ ಹಾಕುವ ಬಗ್ಗೆ ಸೂಚನಾ ಫಲಕ ಅಳವಡಿಸಬೇಕು. ಕೊಳೆತ ತ್ಯಾಜ್ಯ ಹಾಕುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪಾಯಿಂಟ್‌ ಸ್ವಚ್ಛಗೊಳಿಸಿ

ನಗರಸಭೆಯು ಸ್ಥಳ ಗುರುತಿಸಿ, ನಾಮಫಲಕ ಅಳವಡಿಸಿ ಜವಾಬ್ದಾರಿಯಿಂದ ಕೈತೊಳೆದುಕೊಂಡಿದೆ. ಫೀಡಿಂಗ್ ಪಾಯಿಂಟ್‌ಗಳಲ್ಲಿ ಯೋಗ್ಯ ಆಹಾರ ಸಿಗದ ಕಾರಣ ನಾಯಿಗಳು ಮತ್ತೆ ರಸ್ತೆಗಿಳಿದು ಪಾದಚಾರಿಗಳ ಮೇಲೆ ದಾಳಿ ನಡೆಸುತ್ತಿವೆ. ತ್ಯಾಜ್ಯದಿಂದಾಗಿ ನಮ್ಮ ಮನೆ ಬಳಿ ದುರ್ವಾಸನೆ ತಾಳಲಾಗುತ್ತಿಲ್ಲ. ತಕ್ಷಣವೇ ಪಾಯಿಂಟ್‌ ಸ್ವಚ್ಛಗೊಳಿಸದಿದ್ದರೆ ಹೋರಾಟ ಮಾಡಬೇಕಾಗುತ್ತದೆ.

–ಆರ್.ವೆಂಕಟೇಶ್, ಸ್ಥಳೀಯ ನಿವಾಸಿ

ಶುಚಿಗೊಳಿಸಿ ಇಲ್ಲವೇ ತೆರವುಗೊಳಿಸಿ

ನಗರಸಭೆಯು ಉತ್ತಮ ಉದ್ದೇಶದಿಂದಲೇ ಯೋಜನೆ ಆರಂಭಿಸಿತ್ತು. ಆದರೆ, ಇಲ್ಲಿ ತಂದು ಚೆಲ್ಲುವ ಕೊಳೆತ ಆಹಾರದಿಂದ ಇಡೀ ಬೀದಿಯಲ್ಲಿ ದುರ್ವಾಸನೆ ಬೀರುತ್ತಿದೆ. ನಾಯಿಗಳು ಆಹಾರಕ್ಕಾಗಿ ತಮ್ಮಲ್ಲೇ ಜಗಳವಾಡಿ ರಾತ್ರಿ ವೇಳೆ ನಿವಾಸಿಗಳ ಮೇಲೆ ಎರಗುತ್ತಿವೆ. ಪ್ರತಿದಿನ ಸ್ಥಳವನ್ನು ಶುಚಿಗೊಳಿಸಲು ಸಾಧ್ಯವಾಗದಿದ್ದರೆ ಫೀಡಿಂಗ್ ಪಾಯಿಂಟ್‌ಗಳನ್ನು ತಕ್ಷಣವೇ ತೆರವುಗೊಳಿಸಿ.

–ಎಂ.ನಾಗರಾಜ್, ಸ್ಥಳೀಯ ವರ್ತಕ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ