
ಯಳಂದೂರು: ಸವಾಲಿನ ಸುಳಿಯಲ್ಲಿ ಸಿಲುಕಿದ ಗ್ರಾಮೀಣ ಭಾಗದ ಕೈಮಗ್ಗ ಉದ್ಯಮ
ಯಳಂದೂರು: ಜಾಗತೀಕರಣ, ಆಧುನೀಕರಣ ಹಾಗೂ ಖಾಸಗೀಕರಣದ ಸವಾಲುಗಳನ್ನು ಎದುರಿಸಲಾಗದೆ ಗ್ರಾಮೀಣ ಭಾಗದ ಗುಡಿ ಕೈಗಾರಿಕೆಗಳು ಕ್ರಮೇಣ ನೇಪಥ್ಯಕ್ಕೆ ಸರಿಯುತ್ತಿವೆ.
ಕಚ್ಚಾ ವಸ್ತುಗಳ ಬೆಲೆ ಏರಿಕೆ, ಕಾರ್ಮಿಕರ ಕೊರತೆ, ಉತ್ಪಾದನಾ ವೆಚ್ಚ ಹೆಚ್ಚಳ ಮತ್ತು ಮಾರುಕಟ್ಟೆಯ ಸ್ಪರ್ಧೆಯಿಂದ ಖಾದಿ, ರೇಷ್ಮೆ ಹಾಗೂ ಕೈಮಗ್ಗ ಉದ್ಯಮಗಳು ಸಂಕಷ್ಟಕ್ಕೆ ಸಿಲುಕಿವೆ. ಖಾದಿ ಉದ್ಯಮ ನಂಬಿಕೊಂಡಿದ್ದ ನೂರಾರು ಕುಟುಂಬಗಳ ಬದುಕಿನ ಮೇಲೂ ಪರಿಣಾಮ ಬೀರಿದೆ.
ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ರೇಷ್ಮೆ ನೂಲುವ ಚರಕಗಳಿದ್ದು, ವಿಶೇಷವಾಗಿ ಮಹಿಳೆಯರ ಆರ್ಥಿಕ ಸ್ವಾವಲನಂಬನೆಗೆ ದಾರಿಯಾಗಿದ್ದವು. ಗ್ರಾಮೀಣ ಭಾಗದವರಿಗೆ ಉದ್ಯೋಗ ನೀಡುವುದರ ಜತೆಗೆ ಹಳ್ಳಿಗಳ ಆರ್ಥಿಕತೆಗೆ ಬಲ ತುಂಬಿದ್ದ ಕೈಮಗ್ಗಗಳು ಬಡ ಕುಟುಂಬಗಳ ನಿರ್ವಹಣೆಗೆ ಆದಾಯದ ಮೂಲವಾಗಿಯೂ ಕಾರ್ಯ ನಿರ್ವಹಿಸುತ್ತಿವೆ.
ಬದಲಾದ ಕಾಲಘಟ್ಟದಲ್ಲಿ ಜನರ ಬದಲಾದ ಅಭಿರುಚಿಯ ಪರಿಣಾಮ ಕೈಮಗ್ಗಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಬಿಳಿಗಿರಿರಂಗನ ಬೆಟ್ಟದಲ್ಲಿ ವಿಜಿಕೆಕೆ ಆವರಣದಲ್ಲಿ 25 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಕೈಮಗ್ಗದ ಘಟಕದಲ್ಲಿ ಗುಣಮಟ್ಟದ ಸೀರೆ, ಬಟ್ಟೆಗಳ ತಯಾರಿಕೆ ನಡೆಯುತ್ತಿದೆ. ಶಾಲಾ ಮಕ್ಕಳ ಸಮವಸ್ತ್ರ ತಯಾರಿಕೆಗೂ ಕೇಂದ್ರ ಹೆಸರು ವಾಸಿಯಾಗಿತ್ತು.
ಆದರೆ, ಯಂತ್ರಗಳಿಂದ ತಯಾರಾಗುವ ಬಟ್ಟೆಗಳು ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿರುವುದರಿಂದ ಕೈಮಗ್ಗ ಉತ್ಪನ್ನಗಳಿಗೆ ಬೆಲೆ ಹಾಗೂ ಬೇಡಿಕೆ ಕುಸಿದಿದ್ದು ಮಾರುಕಟ್ಟೆಯಲ್ಲಿ ಸ್ಪರ್ಧೆ ಎದುರಿಸಲಾಗದೆ ಘಟಕಗಳು ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ.
ಹಿಂದೆ, ನೇಕಾರರು ಹಾಗೂ ಕಾರ್ಮಿಕರಿಗೆ ಸರ್ಕಾರದಿಂದ ವಿವಿಧ ರೀತಿಯ ಪ್ರೋತ್ಸಾಹಧನ, ಸೌಲಭ್ಯಗಳು ದೊರೆಯುತ್ತಿತ್ತು. ಇದರಿಂದ ಉದ್ಯಮವನ್ನು ಹೇಗೋ ಮುನ್ನಡೆಸಿಕೊಂಡು ಹೋಗಲಾಗುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಆರ್ಥಿಕ ನೆರವು ಹಾಗೂ ಸೌಲಭ್ಯಗಳು ನಿಂತಿದೆ. ಕೈಮಗ್ಗದ ಕಾರ್ಮಿಕರು ಅನಿವಾರ್ಯವಾಗಿ ಪರ್ಯಾಯ ಉದ್ಯೋಗದತ್ತ ಮುಖ ಮಾಡುವಂತಾಗಿದೆ ಎನ್ನುತ್ತಾರೆ ಇಲ್ಲಿನ ಶ್ರಮಿಕರು.
ಬಿಳಿಗಿರಿರಂಗನ ಬೆಟ್ಟದ ಖಾದಿ ಕೈಮಗ್ಗ ಕೇಂದ್ರ ಹಲವು ವರ್ಷಗಳಿಂದ ಸ್ಥಗಿತಗೊಂಡಿದೆ. ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಬಹುತೇಕರು ಕಾಫಿ ತೋಟ ಹಾಗೂ ಇತರ ಕಡೆಗಳಲ್ಲಿ ಕೂಲಿ ಕೆಲಸಕ್ಕೆ ತೆರಳಿದ್ದಾರೆ ಎನ್ನುತ್ತಾರೆ ಸ್ಥಳೀಯ ನಿವಾಸಿ ನಂಜೇಗೌಡ.
ಕಚ್ಚಾ ವಸ್ತುಗಳ ಬೆಲೆ ಏರಿಕೆ: ಖಾದಿ ಮತ್ತು ರೇಷ್ಮೆ ಬಟ್ಟೆ ತಯಾರಿಕೆಗೆ ಅಗತ್ಯವಾದ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಉತ್ಪಾದನಾ ವೆಚ್ಚವೂ ಹೆಚ್ಚಾಗಿದೆ. ಸವಾಲುಗಳ ಮಧ್ಯೆ ಉದ್ಯಮವನ್ನು ನಿರಂತರವಾಗಿ ನಡೆಸಲು ಬಂಡವಾಳದ ಕೊರತೆ ಎದುರಾಗಿದೆ. ಮಾಂಬಳ್ಳಿ, ಅಗರ, ಹೊನ್ನೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಲವು ರೇಷ್ಮೆ ಘಟಕಗಳು ನೂಲು ಬಿಚ್ಚಾಣಿಕೆ ಮುಂದುವರಿಸಿಕೊಂಡು ಬಂದಿದ್ದರೂ ರೇಷ್ಮೆ ಬೆಲೆ, ಕಚ್ಚಾ ವಸ್ತುಗಳ ದರ ಏರಿಕೆ, ಕಾರ್ಮಿಕರ ಕೊರತೆ ಹಾಗೂ ಉತ್ಪಾದನಾ ವೆಚ್ಚ ಹೆಚ್ಚಳದಿಂದ ಉದ್ಯಮ ನಡೆಸುವುದು ಕಷ್ಟವಾಗಿದೆ ಎಂದು ರೇಷ್ಮೆ ಘಟಕದ ಶಕೀಲ್ ಅಹಮದ್ ಹೇಳುತ್ತಾರೆ.
ಕೈಮಗ್ಗ ಉತ್ಪನ್ನಗಳಿಗೆ ಮಾರುಕಟ್ಟೆ ಸೃಷ್ಟಿಸಲು ಸರ್ಕಾರಿ ಕಚೇರಿಗಳು ಹಾಗೂ ಶಾಲಾ-ಕಾಲೇಜುಗಳ ಸಮವಸ್ತ್ರ, ಸರ್ಕಾರಿ ಕಾರ್ಯಕ್ರಮಗಳ ಉಡುಪು ಮತ್ತು ಇತರ ಅಗತ್ಯಗಳಲ್ಲಿ ಸ್ಥಳೀಯ ಕೈಮಗ್ಗ ಉತ್ಪನ್ನಗಳಿಗೆ ಆದ್ಯತೆ ನೀಡಿದರೆ ಉದ್ಯಮಕ್ಕೆ ಉತ್ತೇಜನ ದೊರೆಯಲಿದೆ ಎನ್ನುತ್ತಾರೆ ಮಾಲೀಕರು.
ಕೈಮಗ್ಗ ಉಳಿದರೆ ಕೌಶಲ ಉಳಿಯುತ್ತದೆ; ಗ್ರಾಮೀಣ ಕುಟುಂಬಗಳ ಬದುಕಿಗೂ ಆಸರೆ ಸಿಗಲಿದೆ. ಆದ್ದರಿಂದ ಆರ್ಥಿಕ ನೆರವು ಮತ್ತು ಖಚಿತ ಮಾರುಕಟ್ಟೆಯ ಬೆಂಬಲ ನೀಡಬೇಕಾಗಿದೆ ಎನ್ನುತ್ತಾರೆ ತಜ್ಞರು.
ಗಾಂಧೀಜಿ ಆಶಯಗಳಿಗೆ ಒತ್ತಾಸೆ ಅಗತ್ಯ
ಮಹಾತ್ಮ ಗಾಂಧೀಜಿಯವರು ಗ್ರಾಮೀಣ ಆರ್ಥಿಕತೆ, ಸ್ವಾವಲಂಬನೆ ಹಾಗೂ ಶ್ರಮಾಧಾರಿತ ಉದ್ಯೋಗಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. ಹೊಸ ನಿಯಮಗಳ ಪ್ರಕಾರ ಗ್ರಾಮೋದ್ಯೋಗ ಕೇಂದ್ರವನ್ನು ಪುನಃ ನೋಂದಾಯಿಸಿಕೊಳ್ಳಲು ಹೆಚ್ಚಿನ ವೆಚ್ಚವಾಗುತ್ತಿದ್ದು, ಲಕ್ಷಾಂತರ ರೂಪಾಯಿ ಬಂಡವಾಳದ ಅಗತ್ಯವಿದೆ. ಕಚ್ಚಾ ವಸ್ತುಗಳ ಬೆಲೆ ಏರಿಕೆಯ ನಡುವೆ ಘಟಕವನ್ನು ಪುನಾರಂಭಿಸುವುದು ಸವಾಲು. ಸರ್ಕಾರದ ವಿಶೇಷ ಪ್ಯಾಕೇಜ್ ಅಥವಾ ಪುನಶ್ಚೇತನ ಯೋಜನೆ ರೂಪಿಸಿ ನೆರವು ನೀಡಿದರೆ ಸ್ಥಗಿತಗೊಂಡ ಘಟಕಗಳನ್ನು ಮತ್ತೆ ಆರಂಭಿಸಿ, ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬಹುದು ಎಂದು ವಿಜಿಕೆಕೆ ಕೈಮಗ್ಗದ ವ್ಯವಸ್ಥಾಪಕ ವೆಂಕಟೇಶ್ ಹೇಳುತ್ತಾರೆ.