‘ಲಂಚ ತಿಂದ ಶಾಸಕರ ಹೆಸರು ಬಹಿರಂಗ’: ಗುತ್ತಿಗೆದಾರರಿಂದ ಸರ್ಕಾರಕ್ಕೆ ಎಚ್ಚರಿಕೆ

‘ಲಂಚ ತಿಂದ ಶಾಸಕರ ಹೆಸರು ಬಹಿರಂಗ’: ಗುತ್ತಿಗೆದಾರರಿಂದ ಸರ್ಕಾರಕ್ಕೆ ಎಚ್ಚರಿಕೆ

‘ಲಂಚ ತಿಂದ ಶಾಸಕರ ಹೆಸರು ಬಹಿರಂಗ’: ಗುತ್ತಿಗೆದಾರರಿಂದ ಸರ್ಕಾರಕ್ಕೆ ಎಚ್ಚರಿಕೆ

ಬೆಂಗಳೂರು: ‘ಗುತ್ತಿಗೆದಾರರಿಗೆ ₹38 ಸಾವಿರ ಕೋಟಿ ಬಿಲ್‌ ಬಾಕಿ ಇದ್ದು, ರಾಜ್ಯ ಸರ್ಕಾರ ನವೆಂಬರ್‌ ಅಂತ್ಯದೊಳಗೆ ಹಣ ಬಿಡುಗಡೆ ಮಾಡದಿದ್ದರೆ, ಲಂಚ ಪಡೆದಿರುವ ಶಾಸಕರ ಹೆಸರನ್ನು ಡಿಸೆಂಬರ್‌ನಲ್ಲಿ ಬಹಿರಂಗಪಡಿಸಲಾಗುತ್ತದೆ’ ಎಂದು ರಾಜ್ಯ ಗುತ್ತಿಗೆದಾರರ ಸಂಘ ಎಚ್ಚರಿಸಿದೆ.

‘ಕಳೆದ ಮೂರು ವರ್ಷದಿಂದ ಮುಖ್ಯಮಂತ್ರಿಯವರು ನೀಡಿರುವ ಭರವಸೆಗಳೂ ಈಡೇರಿಲ್ಲ. ನಮ್ಮ ಸಮಸ್ಯೆಗಳನ್ನು ಬಗೆಹರಿಸಲು ನವೆಂಬರ್ 1ರಿಂದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಆದರೂ ಹಣ ಬಿಡುಗಡೆಯಾಗದಿದ್ದರೆ, ಗುತ್ತಿಗೆದಾರರಿಂದ ಲಂಚ ತಿಂದವರ ಹೆಸರು ಘೋಷಿಸಿ, ದೇವರ ಮುಂದೆ ಪ್ರಮಾಣ ಮಾಡಲು ಆಹ್ವಾನಿಸಲಾಗುತ್ತದೆ’ ಎಂದು ಸಂಘದ ಅಧ್ಯಕ್ಷ ಆರ್. ಮಂಜುನಾಥ್ ಅವರು ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಹೇಳಿದರು.

‘ಗುತ್ತಿಗೆದಾರರಿಗೆ 2021–22ರಿಂದಲೂ ಬಿಲ್‌ ಪಾವತಿಸಿಲ್ಲ. ಕೆಂಪಣ್ಣ ಹೆಸರು ಬಳಸಿಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ನಮಗೆ ಸಹಾಯ ಮಾಡಲಿಲ್ಲ. ಅಂದಿನ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ನಾವು ಸ್ವಾತಂತ್ಯ ಉದ್ಯಾನದಲ್ಲಿ ನಡೆಸಿದ್ದ ಪ್ರತಿಭಟನಾ ಸ್ಥಳಕ್ಕೆ ಬಂದು ಒಂದೇ ಕಂತಿನಲ್ಲಿ ಹಣ ಬಿಡುಗಡೆ ಮಾಡುವುದಾಗಿ ಆಶ್ವಾಸನೆ ಕೊಟ್ಟಿದ್ದರು. ಮುಖ್ಯಮಂತ್ರಿಯಾದ ಬಳಿಕ ಡಿ.ಕೆ.ಶಿವಕುಮಾರ್ ಅವರು ಜೂನ್‌ನಲ್ಲಿ ನಡೆದ ಸಭೆಯಲ್ಲಿ ಬಾಕಿ ಬಿಲ್ ಪಾವತಿಸುವುದಾಗಿ ಭರವಸೆ ನೀಡಿದ್ದರು. ಅದೂ ಈವರೆಗೆ ಈಡೇರಿಲ್ಲ’ ಎಂದರು.

‘ಹಿಂದಿನ ಸರ್ಕಾರಕ್ಕಿಂತ ಈಗಿನ ಸರ್ಕಾರದಲ್ಲಿ ಕಮಿಷನ್ ದಂಧೆ ಹೆಚ್ಚಳವಾಗಿದೆ. ಕಮಿಷನ್ ಕೊಟ್ಟವರಿಗೆ ಮಾತ್ರ ಬಿಲ್ ಪಾವತಿಸಲಾಗುತ್ತಿದೆ. ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಕಾರಣದಿಂದ ಶೇಕಡ 75ರಷ್ಟು ಶಾಸಕರು, ಟೆಂಡರ್‌ಗಳಲ್ಲಿ ಮೂಗು ತೂರಿಸುತ್ತಿದ್ದಾರೆ. ಅನುದಾನ ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ಟೆಂಡರ್ ನಡೆಸಬಾರದು. ಕೂಡಲೇ ಕಾಂಟ್ರಾಕ್ಟ್ ಮ್ಯಾನೇಜ್‌ಮೆಂಟ್ (ಒಪ್ಪಂದ ನಿರ್ವಹಣೆ) ರದ್ದುಗೊಳಿಸಬೇಕು. ನಾಲ್ಕು ವರ್ಷದಿಂದ ಬಾಕಿ ಬಿಲ್‌ಗಳಿಗೆ ಹಣ ಬಿಡುಗಡೆ ಆಗದ ಕಾರಣದಿಂದ 1.5 ಲಕ್ಷ ಗುತ್ತಿಗೆದಾರರು ಪರದಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹಣ ಬಿಡುಗಡೆಯಾಗದಿದ್ದರೆ ವಿಷ ಕುಡಿಯುವ ಪರಿಸ್ಥಿತಿ ಇದೆ’ ಎಂದು ತಿಳಿಸಿದರು.

‘ಕಮಿಷನ್ ಕೊಟ್ಟರಷ್ಟೇ ಭೂಮಿ ಪೂಜೆಗೆ’

‘ಈಗಿನ ಸರ್ಕಾರದ ಮಂತ್ರಿಗಳಿಗೆ ಶಾಸಕರಿಗೆ ಕಮಿಷನ್ ನೀಡಬೇಕಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸುವ ಶಾಸಕರು ತಮಗೆ ಬೇಕಾದವರಿಗೆ ಟೆಂಡರ್ ಕೊಡಿಸುತ್ತಿದ್ದಾರೆ. ನಿಯಮ ಉಲ್ಲಂಘಿಸಿ ಟೆಂಡರ್ ಪ್ರಕ್ರಿಯೆಗಳು ನಡೆಯುತ್ತಿವೆ. ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರಿಗೆ ಟೆಂಡರ್ ಸಿಗುತ್ತಿಲ್ಲ ವಿಧಾನಸಭಾ ಚುನಾವಣೆ ಕಾರಣಕ್ಕಾಗಿ ಶಾಸಕರು ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಕಮಿಷನ್ ಕೊಟ್ಟರಷ್ಟೇ ಶಾಸಕರು ಸಚಿವರು ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಲು ಬರುತ್ತಾರೆ. ಅಲ್ಲದೆ ಇಲಾಖೆಯಲ್ಲಿ ಜ್ಯೇಷ್ಠತೆ ಆಧಾರದಲ್ಲಿ ಹಣ ಬಿಡುಗಡೆ ಆಗುತ್ತಿಲ್ಲ. 2017 ಮತ್ತು 2018ರಲ್ಲಿ ವ್ಯಾಟ್‌ನಿಂದ ಜಿಎಸ್‌ಟಿ ವ್ಯತ್ಯಾಸದ ಮೊತ್ತ ಶೇ 8ರಷ್ಟನ್ನು ತುರ್ತಾಗಿ ನೀಡಲು ಮುಖ್ಯಮಂತ್ರಿಯವರು ಆರ್ಥಿಕ ಇಲಾಖೆಗೆ ಶಿಫಾರಸ್ಸು ಮಾಡಬೇಕು’ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ  ಆರ್. ಮಂಜುನಾಥ್ ಹೇಳಿದರು.

‘ಟೆಂಡರ್‌ ಪಾರದರ್ಶಕವಾಗಿಲ್ಲ’

‘ಲೋಕೋಪಯೋಗಿ ಇಲಾಖೆ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹೊರತುಪಡಿಸಿ ಬೇರೆ ಇಲಾಖೆಗಳು ಟೆಂಡರ್ ಮತ್ತು ಹಣ ಬಿಡುಗಡೆಯ ವಿಚಾರದಲ್ಲಿ ಪಾರದರ್ಶಕವಾಗಿಲ್ಲ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರೇ ₹40 ಸಾವಿರ ಕೋಟಿ ಬಾಕಿ ಇದೆ ಎಂದು ಹೇಳುತ್ತಾರೆ. ಅವರಿಗೆ ಪತ್ರ ಬರೆದು ನಿರಂತರವಾಗಿ ಸಮಸ್ಯೆ ಹೇಳಿಕೊಂಡರೂ ಪ್ರಯೋಜನವಾಗಿಲ್ಲ. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುತ್ತಿಗೆದಾರರ ಸಭೆ ನಡೆಸಲಿಲ್ಲ. ಈಗಿನ ಮುಖ್ಯಮಂತ್ರಿ ಸಭೆ ಮಾಡಿದರೂ ಹಣ ಬಿಡುಗಡೆಯ ಭರವಸೆಯನ್ನು ಈಡೇರಿಸುತ್ತಿಲ್ಲ’ ‌ಎಂದು ರಾಜ್ಯ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಎಂ. ನಂದಕುಮಾರ್‌ ಟೀಕಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ