
ಉಡುಪಿ: ತಾಪಮಾನ ಏರಿಕೆಯಿಂದ ರೇಷ್ಮೆ ಕೃಷಿಗೆ ಸಂಕಷ್ಟ
ಉಡುಪಿ: ಹವಾಮಾನ ವೈಪರೀತ್ಯದಿಂದಾಗಿ ಅಕ್ಟೋಬರ್ ತಿಂಗಳಲ್ಲೇ ಬಿಸಿಲಿನ ಧಗೆ ಏರುತ್ತಿರುವುದು ಜಿಲ್ಲೆಯ ರೇಷ್ಮೆ ಕೃಷಿಕರಿಗೆ ಸಂಕಷ್ಟ ತಂದೊಡ್ಡಿದೆ.
ಮಾರುಕಟ್ಟೆಯಲ್ಲಿ ರೇಷ್ಮೆ ಗೂಡಿಗೆ ಉತ್ತಮ ಧಾರಣೆ ಇದ್ದರೂ ತಾಪಮಾನ ಏರಿಕೆ ಆಗಿರುವುದರಿಂದ ಜಿಲ್ಲೆಯ ರೇಷ್ಮೆ ಕೃಷಿಕರು ಕೃಷಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ.
ಈ ಬಾರಿ ಸೆಪ್ಟೆಂಬರ್ ತಿಂಗಳಲ್ಲಿ ಗರಿಷ್ಠ ತಾಪಮಾನವು 34 ಡಿಗ್ರಿ ಸೆಲ್ಶಿಯಸ್ನಷ್ಟು ದಾಖಲಾಗಿತ್ತು. ತಾಪಮಾನವು 34 ಡಿಗ್ರಿ ಸೆಲ್ಸಿಯಸ್ ದಾಟಿದರೆ ರೇಷ್ಮೆ ಕೃಷಿಗೆ ಸಮಸ್ಯೆಯಾಗುತ್ತದೆ ಎನ್ನುತ್ತಾರೆ ರೈತರು.
ಬೆಂಗಳೂರಿನಿಂದ ರೇಷ್ಮೆ ಮೊಟ್ಟೆ ಖರೀದಿಸಿ ತಂದು ಅಕ್ಟೋಬರ್ ಆರಂಭದಲ್ಲಿ ಕೃಷಿ ಆರಂಭಿಸಬೇಕಿತ್ತು, ಆದರೆ ತಾಪಮಾನ ಜಾಸ್ತಿ ಆಗಿರುವುದರಿಂದ ಬಹುತೇಕ ರೇಷ್ಮೆ ಕೃಷಿಕರು ಕೃಷಿ ಮಾಡಿಲ್ಲ. ನವೆಂಬರ್ ತಿಂಗಳಲ್ಲಿ ಚಳಿಯ ವಾತಾವರಣ ಆರಂಭವಾಗಿ ತಾಪಮಾನ ಇಳಿಕೆಯಾದರೆ ಕೃಷಿ ಮುಂದುವ ರಿಸುವ ಚಿಂತನೆಯಲ್ಲಿದ್ದೇವೆ ಎನ್ನುತ್ತಾರೆ ಬೆಳೆಗಾರರು. ವರ್ಷದಲ್ಲಿ ಮೂರರಿಂದ ನಾಲ್ಕು ಬಾರಿ ಬೆಂಗಳೂರಿನಿಂದ ರೇಷ್ಮೆ ಮೊಟ್ಟೆ ಖರೀದಿಸಿ ತಂದು ಕೃಷಿ ಮಾಡುತ್ತೇವೆ. ಸಾಮಾನ್ಯವಾಗಿ ಮಾರ್ಚ್ ತಿಂಗಳ ನಂತರ ತಾಪಮಾನ ಏರಿಕೆಯಾಗುವುದರಿಂದ ಆ ಸಂದರ್ಭದಲ್ಲಿ ಕೃಷಿ ಮಾಡುತ್ತಿರಲಿಲ್ಲ. ಆದರೆ ಈ ಬಾರಿ ಅಕ್ಟೋಬರ್ ತಿಂಗಳಲ್ಲೇ ಮಾರ್ಚ್ ತಿಂಗಳ ವಾತಾವರಣವಿದೆ ಎನ್ನುತ್ತಾರೆ ಕೃಷಿಕರು.
ಜಿಲ್ಲೆಯಲ್ಲಿ ರೇಷ್ಮೆ ಗೂಡು ಖರೀದಿ ಕೇಂದ್ರ ಇಲ್ಲದಿರುವುದು ಕೂಡ ಇಲ್ಲಿನ ರೇಷ್ಮೆ ಕೃಷಿಕರ ಹಿನ್ನೆಡೆಗೆ ಕಾರಣವಾಗಿದೆ. ಕಾರ್ಕಳದಲ್ಲಿದ್ದ ಜಿಲ್ಲೆಯ ಏಕೈಕ ರೇಷ್ಮೆ ಗೂಡು ಖರೀದಿ ಕೇಂದ್ರವು ಬಾಗಿಲು ಮುಚ್ಚಿ ಹಲವು ವರ್ಷಗಳೇ ಕಳೆದಿವೆ. ಜಿಲ್ಲೆಯಲ್ಲಿ ಸುಮಾರು 30 ಮಂದಿ ರೇಷ್ಮೆ ಬೆಳೆಗಾರರಿದ್ದಾರೆ ಎಂದು ರೇಷ್ಮೆ ಇಲಾಖೆಯ ಮೂಲಗಳು ಹೇಳುತ್ತಿವೆ. ಮಾರುಕಟ್ಟೆ ಸಮಸ್ಯೆ ಇರುವುದರಿಂದ ರೈತರು ಈ ಬೆಳೆಯಿಂದ ವಿಮುಖರಾಗುತ್ತಿದ್ದಾರೆ ಎನ್ನುತ್ತಾರೆ ಬೆಳೆಗಾರರು.
ರೇಷ್ಮೆ ಗೂಡುಗಳನ್ನು ಮಾರಾಟ ಮಾಡಲು ಹಾಸನಕ್ಕೆ ಕೊಂಡೊಯ್ಯಬೇಕಾಗಿರುವುದರಿಂದ ಸಾಗಾಟ ವೆಚ್ಚವೂ ರೈತರ ಮೇಲೆ ಬೀಳುತ್ತಿದೆ. ಜಿಲ್ಲೆಯ ರೈತರು ಉಪಕೃಷಿಯಾಗಿ ರೇಷ್ಮೆ ಕೃಷಿ ನಡೆಸುತ್ತಿದ್ದಾರೆ.
‘ಹವಾವಮಾನ ವೈಪರೀತ್ಯವಾದರೆ ಅದು ರೇಷ್ಮೆ ಹುಳುಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ತಾಪಮಾನ ಏರಿಕೆಯಾದಂತೆ ಹಾಲು ತೊಂಡೆ ರೋಗವು ರೇಷ್ಮೆ ಹುಳುಗಳಿಗೆ ಬಾಧಿಸುತ್ತದೆ. ಈ ರೋಗ ಬಾಧಿಸಿದರೆ ರೇಷ್ಮೆ ಹುಳುಗಳು ಬಿದಿರಿನ ತಟ್ಟೆಯಿಂದ ಕೆಳಗೆ ಬೀಳುತ್ತವೆ ಮತ್ತು ಸಾಯುತ್ತವೆ’ ಎನ್ನುತ್ತಾರೆ ಕಾರ್ಕಳದ ರೇಷ್ಮೆ ಕೃಷಿಕ ಶ್ರೀಧರ ಪೂಜಾರಿ.
‘ವಾತಾವರಣದಲ್ಲಿ ತೇವಾಂಶ ಕೊರತೆಯಾದರೆ ಅದು ರೇಷ್ಮೆ ಹುಳುಗಳ ಮೇಲೆ ಪರಿಣಾಮ ಬೀರುತ್ತದೆ. ಆ ಕಾರಣಕ್ಕೆ ಕೃಷಿ ಮಾಡಿಲ್ಲ. ರೇಷ್ಮೆ ಹುಳುಗಳಲ್ಲಿ ಒಮ್ಮೆ ರೋಗ ಕಾಣಿಸಿಕೊಂಡರೆ ಅದು ನಿಯಂತ್ರಣಕ್ಕೆ ಬರುವುದಿಲ್ಲ’ ಎನ್ನುತ್ತಾರೆ ಅವರು.
‘ಸದ್ಯ ಕೆ.ಜಿ. ರೇಷ್ಮೆ ಗೂಡಿಗೆ ₹800 ರಿಂದ ₹1000ದ ನಡುವೆ ಧಾರಣೆ ಇದೆ. ಆದರೆ ಅತಿಯಾದ ಬಿಸಿಲಿನ ವಾತಾವರಣದಿಂದಾಗಿ ಅಕ್ಟೋಬರ್ ತಿಂಗಳಲ್ಲಿ ಕೃಷಿಯನ್ನೇ ಆರಂಭಿಸಿಲ್ಲ. ಚಳಿಯ ವಾತಾವರಣ ಬರುವವರೆಗೆ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದೇವೆ’ ಎನ್ನುತ್ತಾರೆ ರೇಷ್ಮೆ ಕೃಷಿಕ ಶ್ರೀಧರ ಪೂಜಾರಿ.
‘ಈ ವರ್ಷದ ಆರಂಭದಿಂದಲೇ ರೇಷ್ಮೆ ಗೂಡಿಗೆ ಉತ್ತಮ ಧಾರಣೆ ಇದೆ. ಆದರೆ ಜಿಲ್ಲೆಯಲ್ಲಿ ಖರೀದಿ ಕೇಂದ್ರ ಇಲ್ಲದಿರುವುದರಿಂದ ರೇಷ್ಮೆ ಗೂಡುಗಳನ್ನು ಮಾರಾಟ ಮಾಡಲು ಹಾಸನಕ್ಕೆ ಕೊಂಡೊಯ್ಯುವ ಅನಿವಾರ್ಯತೆ ಇದೆ’ ಎನ್ನುತ್ತಾರೆ ಅವರು.