
ಸೇಂಟ್ ಆಗ್ನೆಸ್ ಕಾಲೇಜಿನ ಹೆಸರು ಕೆಡಿಸಲು ಹುನ್ನಾರ: ಎ.ಸಿ. ವಿನಯರಾಜ್
ಮಂಗಳೂರು: ‘ಅಲ್ಪಸಂಖ್ಯಾತರ ಸಂಸ್ಥೆ ಎಂಬ ಕಾರಣಕ್ಕೆ ನಗರದ ಸೇಂಟ್ ಆಗ್ನೆಸ್ ಕಾಲೇಜಿನ ಹೆಸರು ಕೆಡಿಸಿ ಧರ್ಮಗಳ ನಡುವೆ ಕಂದಕ ಸೃಷ್ಟಿಸುವ ಹುನ್ನಾರವನ್ನು ಬಿಜೆಪಿ ಮತ್ತು ಸಂಘ ಪರಿವಾರದ ಸಂಘಟನೆಗಳು ನಡೆಸಿವೆ’ ಎಂದು ಕೆಪಿಸಿಸಿ ವಕ್ತಾರ ಎ.ಸಿ. ವಿನಯರಾಜ್ ಆರೋಪಿಸಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಕೆನರಾ ಕಾಲೇಜು ಸೇರಿದಂತೆ ಅನೇಕ ಸ್ವಾಯತ್ತ ಕಾಲೇಜುಗಳಲ್ಲೂ ಸೋಮವಾರ ಪರೀಕ್ಷೆಗಳು ನಡೆದಿವೆ. ಅದು ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ.ವೈ. ಭರತ್ ಶೆಟ್ಟಿ ಹಾಗೂ ಎಬಿವಿಪಿ ಕಾರ್ಯಕರ್ತರಿಗೆ ಕಾಣಿಸಿಲ್ಲವೇ. ಪರೀಕ್ಷೆ ಮುಂದೂಡುವಂತೆ ಒತ್ತಾಯಿಸಿ ಅಂದು ಸೇಂಟ್ ಆಗ್ನೆಸ್ ಕಾಲೇಜಿನ ಬಳಿ ಮಾತ್ರ ಪ್ರತಿಭಟಿಸಿದ್ದು ಏಕೆ’ ಎಂದು ಪ್ರಶ್ನಿಸಿದರು.
‘ಕಾಲೇಜುಗಳನ್ನು ನಡೆಸಬೇಕಾದುದು ವಿಶ್ವವಿದ್ಯಾಲಯಗಳ ನಿಯಮದಂತೆ. 90 ದಿನಗಳ ತರಗತಿಗಳ ಬಳಿಕ ಓದುವುದಕ್ಕೆ ರಜೆ ಕೊಡಬೇಕು. ಆ ಪ್ರಕಾರ ಪರೀಕ್ಷಾ ವೇಳಾಪಟ್ಟಿಯನ್ನು ಕಾಲೇಜಿನವರು ಮೊದಲೆ ಪ್ರಕಟಿಸಿದ್ದಾರೆ. ಆಗ ಯಾರೂ ಆಕ್ಷೇಪ ಸಲ್ಲಿಸಿಲ್ಲ. ಯಾವುದೇ ವಿದ್ಯಾರ್ಥಿಗಳ ಸಂಘಟನೆಯೂ ಪರೀಕ್ಷೆ ಮುಂದೂಡುವಂತೆ ಮನವಿ ಕೊಟ್ಟಿಲ್ಲ’ ಏಕೆ ಎಂದು ಪ್ರಶ್ನೆ ಮಾಡಿದರು.
‘ಕಾಲೇಜು ವಿದ್ಯಾರ್ಥಿಗಳನ್ನು ದುರ್ಬಳಕೆ ಮಾಡಿಕೊಂಡು ಧರ್ಮಗಳ ನಡುವೆ ಕಂದಕ ಸೃಸ್ಟಿಸಲು ಶಾಸಕರು ಹಾಗೂ ಎಬಿವಿಪಿಯವರು ಯತ್ನಿಸಿದ್ದಾರೆ. ವರ್ಷಗಳ ಹಿಂದೆ ಜೆರೋಸಾ ಶಾಲೆಯಲ್ಲೂ ಇದೇ ರೀತಿ ಮಾಡಿದ್ದರು. ಮತ ಗಳಿಸಲು ಅಲ್ಪಸಂಖ್ಯಾತರ ಸಂಸ್ಥೆಯನ್ನು ಗುರಿಯಾಗಿಸಿ ಧರ್ಮ ರಾಜಕಾರಣ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಪೋಷಕರು ಈ ಷಡ್ಯಂತ್ರವನ್ನು ಅರ್ಥಮಾಡಿಕೊಳ್ಳಬೇಕು’ ಎಂದರು.
‘ರಜೆ ವಿಚಾರದಲ್ಲಿ ಗೊಂದಲ ಇದ್ದರೆ, ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಕೊಟ್ಟು ಕಾನೂನು ಪ್ರಕಾರ ಇತ್ಯರ್ಥ ಮಾಡಿಕೊಳ್ಳಬೇಕು. ಇಂತಹ ಸೂಕ್ಷ್ಮ ವಿಚಾರಗಳನ್ನು ಪರಸ್ಪರ ಸಂವಾದದ ಮೂಲಕ ಬಗೆಹರಿಸುವ ಹೊಣೆ ಜನಪ್ರತಿನಿಧಿಗಳಿಗೆ ಇದೆ’ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ‘ಕಾನೂನು ಸುವ್ಯವಸ್ಥೆಗೆ, ಸಾಮರಸ್ಯಕ್ಕೆ ಧಕ್ಕೆ ತರುವ ಉದ್ದೇಶ ಹೊಂದಿರುವ ಇಂತಹ ದಾಳಿಗಳಿಗೆ ಆಸ್ಪದ ನೀಡಬಾರದು’ ಎಂದರು.
ಪಕ್ಷದ ಮುಖಂಡರಾದ ಉದಯ್ ಆಚಾರ್, ನೀರಜ್ ಪಾಲ್, ಅಪ್ಪಿ, ಅನಿಲ್ ಕುಮಾರ್,ಟಿ.ಹೊನ್ನಯ್ಯ ಇದ್ದರು.