
ಕಲೆ ಅತ್ಯುತ್ತಮ ಒತ್ತಡ ನಿವಾರಕ: ಡಿಡಿಪಿಐ ಕೃಷ್ಣಪ್ರಸಾದ್
ದಾವಣಗೆರೆ: ಧಾವಂತದ ಬದುಕಿನಲ್ಲಿ ಒತ್ತಡದಿಂದ ಹೊರಬರಲು ಕಲೆಗಳು ಸಹಕಾರಿ. ಸಂಗೀತ, ಚಿತ್ರಕಲೆಗಳು ಒತ್ತಡ ನಿವಾರಕದಂತೆ ಕಾರ್ಯನಿರ್ವಹಿಸಲಿವೆ ಎಂದು ಡಿಡಿಪಿಐ ಬಿ.ಎಚ್. ಕೃಷ್ಣಪ್ರಸಾದ್ ಅಭಿಪ್ರಾಯಪಟ್ಟರು.
ಇಲ್ಲಿನ ದೃಶ್ಯಕಲಾ ಕಾಲೇಜಿನಲ್ಲಿ ಮೂರು ದಿನ ಹಮ್ಮಿಕೊಂಡಿರುವ ಕಲಾವಿದ ಪಿ.ಎಸ್. ಕಡೇಮನಿ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ‘ಕಲಾಪಯಣ’ ಉದ್ಘಾಟಿಸಿ ಅವರು ಮಾತನಾಡಿದರು.
‘ಭಾವನೆಗಳನ್ನು ವ್ಯಕ್ತಪಡಿಸಲು ಕಲೆಯನ್ನು ಮಾನವ ಆಯ್ಕೆ ಮಾಡಿಕೊಂಡ. ಕಲೆಯು ಅಭಿವ್ಯಕ್ತಿಯ ಮಾಧ್ಯಮ ಮಾತ್ರವಲ್ಲ, ಮನಸ್ಸಿ ಒತ್ತಡವನ್ನು ಕಡಿಮೆ ಮಾಡುತ್ತದೆ’ ಎಂದರು.
‘ಇತ್ತೀಚಿನ ದಿನಗಳಲ್ಲಿ ಕಲೆಗೆ ಆದ್ಯತೆ ನೀಡುವುದು ಕಡಿಮೆಯಾಗಿದೆ. ವಿದ್ಯಾರ್ಥಿಗಳು ಶಿಕ್ಷಣ ಹಾಗೂ ಉದ್ಯೋಗಕ್ಕೆ ಸೀಮಿತ ಆಗುವುದು ಬೇಡ’ ಎಂದು ಕಿವಿಮಾತು ಹೇಳಿದರು.
‘ಸಂಗೀತ ಅಥವಾ ರಂಗಭೂಮಿ ಕಲೆಯಲ್ಲಿ ಆಳವಾಗಿ ತೊಡಗಿಕೊಂಡಾಗ ಮನಸ್ಸು ಹಗುರವಾಗುತ್ತದೆ. ಎಷ್ಟೇ ಕಷ್ಟ ಎದುರಾದರೂ ಕಲಾಕೃತಿಯ ಕ್ಯಾನ್ವಾಸ್ ಮುಂದೆ ಕುಳಿತರೆ ಎಲ್ಲಾ ಸಮಸ್ಯೆಗಳು ಮರೆತುಹೋಗುತ್ತವೆ. ಚಿತ್ರಕಲೆ ಸೃಜನಶೀಲ ಅಭಿವ್ಯಕ್ತಿ. ಗ್ರಾಮೀಣ ಬದುಕಿನ ಸೌಂದರ್ಯ ಹಿಡಿದಿಟ್ಟ ಕಲಾಕೃತಿಗಳು ಹಸಿರಾಗಿವೆ’ ಎಂದು ಕಲಾವಿದ ಪಿ.ಎಸ್. ಕಡೇಮನಿ ಅಭಿಪ್ರಾಯಪಟ್ಟರು.
‘ಪ್ರಾಥಮಿಕ ಹಂತದ ಶಿಕ್ಷಣದಲ್ಲೇ ಚಿತ್ರಕಲೆಗೆ ಬುನಾದಿ ಹಾಕಬೇಕು. ಆಗ ಮಾತ್ರ ಕಾಲೇಜು ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಚಿತ್ರಕಲೆ ವ್ಯಾಸಂಗಕ್ಕೆ ಉತ್ಸುಕತೆ ತೋರುತ್ತಾರೆ. ಕಲಾ ಕಾಲೇಜಿನ ಪದವಿ ವಿದ್ಯಾರ್ಥಿಗಳು ಶಾಲಾ ವಿದ್ಯಾರ್ಥಿಗಳನ್ನು ಚಿತ್ರಕಲೆಯತ್ತ ಸೆಳೆಯುವ ಪ್ರಯತ್ನ ಮಾಡಬೇಕು’ ಎಂದು ಪ್ರಾಧ್ಯಾಪಕ ಜಯರಾಜ್ ಚಿಕ್ಕಪಾಟೀಲ ಸಲಹೆ ನೀಡಿದರು.
ಚಿತ್ರಕಲಾ ಪ್ರದರ್ಶನದ ಸಂಚಾಲಕ ವಿದ್ಯಾಧರ ಸಾಲಿ, ಪ್ರಾಧ್ಯಾಪಕ ಓಂಕಾರಮೂರ್ತಿ, ಸಂತೋಷ್ ಕುಮಾರ್ ಕುಲಕರ್ಣಿ, ದತ್ತಾತ್ರೇಯ ಎನ್. ಭಟ್ಟ ಹಾಜರಿದ್ದರು.