
ಚೇಳೂರು: ವೈದ್ಯಕೀಯ ಸೇವೆ; ಇನ್ನೂ ಇಲ್ಲ ಖಾತರಿ
ಚೇಳೂರು: ತಾಲ್ಲೂಕಾಗಿ ಘೋಷಣೆಯಾಗಿ ಆರು ವರ್ಷ ಕಳೆದರೂ ಗುಣಮಟ್ಟದ ವೈದ್ಯಕೀಯ ಸೇವೆ ಮರೀಚಿಕೆಯಾಗಿಯೇ ಉಳಿದಿದೆ.
ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಗಲು ಮತ್ತು ರಾತ್ರಿ ನಿರಂತರವಾಗಿ ವೈದ್ಯರು ಕಡ್ಡಾಯವಾಗಿ ಲಭ್ಯವಿರುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂಬ ಸಾರ್ವಜನಿಕರ ಒತ್ತಾಯ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡ ನಿರ್ಮಾಣವಾಗುವವರೆಗೆ ಈಗಿರುವ ಹಳೆಯ ಆಸ್ಪತ್ರೆಯಲ್ಲಿಯೇ ದಿನದ 24 ಗಂಟೆಯೂ ವೈದ್ಯಕೀಯ ಸೇವೆ ದೊರೆಯುವಂತೆ ಸಂಬಂಧಪಟ್ಟ ಇಲಾಖೆ ಹಾಗೂ ಆಡಳಿತ ಕ್ರಮ ಕೈಗೊಳ್ಳಬೇಕು ಎನ್ನುವುದು ಸ್ಥಳೀಯರ ಪ್ರಮುಖ ಬೇಡಿಕೆ.
ಚೇಳೂರು ಹಾಗೂ ಅದರ ಸುತ್ತಲಿನ ಹತ್ತಾರು ಗ್ರಾಮಗಳ ಬಡ ಮತ್ತು ಮಧ್ಯಮ ವರ್ಗದ ಜನರು ತಮ್ಮ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಹಾಗೂ ಕಾಯಿಲೆಗಳಿಗೆ ಈ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೇ ಅವಲಂಬಿಸಿದ್ದಾರೆ. ಆದರೆ ರಾತ್ರಿ ವೇಳೆ ತುರ್ತು ಆರೋಗ್ಯ ಸಮಸ್ಯೆ ಎದುರಾದಾಗ ಆಸ್ಪತ್ರೆಯಲ್ಲಿ ವೈದ್ಯರು ಸಿಗುತ್ತಾರೊ ಇಲ್ಲವೊ ಎಂಬ ಆತಂಕ ಸಾರ್ವಜನಿಕರನ್ನು ಕಾಡುತ್ತಿದೆ.
ಹರಿಗೆ ನೋವಿನಿಂದ ಬಳಲುವ ಮಹಿಳೆಗಳು ಹಾಗೂ ಅಪಘಾತ ಅಥವಾ ತೀವ್ರ ಸ್ವರೂಪದ ರೋಗಗಳಿಗೆ ತುರ್ತು ಚಿಕಿತ್ಸೆಯ ಅಗತ್ಯವಿರುವವರಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ. ದೂರದ ಬಾಗೇಪಲ್ಲಿ ಅಥವಾ ಚಿಂತಾಮಣಿಯ ಆಸ್ಪತ್ರೆಗಳಿಗೆ ತೆರಳಬೇಕಾದ ಅನಿವಾರ್ಯವಿದೆ. ಇದರಿಂದ ಬಡ ರೋಗಿಗಳಿಗೆ ಸಮಯ ಹಾಗೂ ಹಣ ವ್ಯಯವಾಗುತ್ತಿದ್ದು ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
ಆ್ಯಂಬುಲೆನ್ಸ್ ಸೌಲಭ್ಯವಿದ್ದರೂ ತುರ್ತು ಸಂದರ್ಭಗಳಲ್ಲಿ ಚಾಲಕರು ಸಮಯಕ್ಕೆ ಸರಿಯಾಗಿ ಲಭ್ಯವಿರುವುದಿಲ್ಲ. ರಾತ್ರಿ ಅಥವಾ ಅರೆಕ್ಷಣದ ತುರ್ತು ಪರಿಸ್ಥಿತಿಯಲ್ಲಿ ಚಾಲಕರ ದೂರವಾಣಿ ಕರೆಗಳಿಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಕೇವಲ ಕಾಗದದ ಮೇಲಿರುವ ಸೌಲಭ್ಯಗಳಲ್ಲದೆ ರೋಗಿಗಳಿಗೆ ವಾಸ್ತವದಲ್ಲಿ ಅನುಕೂಲವಾಗುವಂತೆ ವೈದ್ಯರು ಹಾಗೂ ಆ್ಯಂಬುಲೆನ್ಸ್ ಚಾಲಕರು ಹಗಲು ಮತ್ತು ರಾತ್ರಿ ಪಾಳಿಯಲ್ಲಿ ಸದಾ ಲಭ್ಯವಿರುವಂತೆ ಕಟ್ಟುನಿಟ್ಟಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಲು ಈಗಾಗಲೇ ಸರ್ಕಾರದ ಅನುಮೋದನೆ ದೊರೆತಿದೆ. ಆದರೆ ಹಳೆಯ ಕಟ್ಟಡವನ್ನು ತೆರವುಗೊಳಿಸಿ ನೂತನ ಸುಸಜ್ಜಿತ ಕಟ್ಟಡ ನಿರ್ಮಿಸುವ ಪ್ರಕ್ರಿಯೆ ಇನ್ನೂ ನನೆಗುದಿಗೆ ಬಿದ್ದಿದೆ. ಆರಂಭಿಕ ಹಂತದಲ್ಲಿ ತಾಂತ್ರಿಕ ಕಾರಣಗಳಿಂದಾಗಿ ಕಟ್ಟಡದ ಅರ್ಧಭಾಗವನ್ನು ಮಾತ್ರ ತೆರವುಗೊಳಿಸುವಂತೆ ಎಂಜಿನಿಯರ್‌ಗಳು ವರದಿ ನೀಡಿದ್ದರು. ಆದರೆ ಪ್ರಸ್ತುತ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಸಂಪೂರ್ಣ ಕಟ್ಟಡ ತೆರವುಗೊಳಿಸಿ ನೂತನ ಕಟ್ಟಡ ನಿರ್ಮಿಸಬೇಕು ಎಂದು ಸರ್ಕಾರಕ್ಕೆ ಹೊಸದಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಹೊಸ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಂಡು ಸಾರ್ವಜನಿಕರ ಬಳಕೆಗೆ ಮುಕ್ತವಾಗಲು ಇನ್ನೂ ಸಾಕಷ್ಟು ಕಾಲಾವಕಾಶ ಬೇಕಾಗುತ್ತದೆ. ಆದರೆ ಕಟ್ಟಡ ಕಾಮಗಾರಿ ನಡೆಯುವ ಈ ಮಧ್ಯಂತರ ಅವಧಿಯಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ಈಗಿರುವ ತಾತ್ಕಾಲಿಕ ವ್ಯವಸ್ಥೆಯಲ್ಲೇ ಹಗಲು-ರಾತ್ರಿ ವೈದ್ಯರು ಲಭ್ಯವಿರುವಂತೆ ನೋಡಿಕೊಳ್ಳುವುದು ಅತ್ಯಗತ್ಯ. ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ಮತ್ತು ಕಟ್ಟಡ ಕಾಮಗಾರಿ ಸಂಪೂರ್ಣವಾಗಿ ಮುಗಿಯುವವರೆಗೆ ಸಾರ್ವಜನಿಕರಿಗೆ ತುರ್ತು ಚಿಕಿತ್ಸೆಯಲ್ಲಿ ಯಾವುದೇ ತೊಂದರೆಯಾಗದಂತೆ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವುದು ಚೇಳೂರಿನ ಜನರ ನಿರೀಕ್ಷೆ.
ತಾತ್ಕಾಲಿಕ ವೈದ್ಯರ ನಿಯೋಜನೆ
ಪ್ರಸ್ತುತ ಚೇಳೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಬ್ಬ ವೈದ್ಯರ ಹುದ್ದೆ ಮಾತ್ರ ಮಂಜೂರಾಗಿದೆ. ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಆರು ತಿಂಗಳಲ್ಲಿ ಹೊಸ ಕಟ್ಟಡ ಪೂರ್ಣಗೊಳಿಸಿ ನಾಲ್ಕರಿಂದ ಐದು ಕಾಯಂ ವೈದ್ಯರನ್ನು ನೇಮಿಸುವ ಗುರಿಯಿದೆ. ಅಲ್ಲಿಯವರೆಗೆ ರಾತ್ರಿ ವೇಳೆಯೂ ತಾತ್ಕಾಲಿಕ ವೈದ್ಯರನ್ನು ನಿಯೋಜಿಸುವ ಕುರಿತು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಅವರೊಂದಿಗೆ ಚರ್ಚಿಸಲಾಗುವುದು. ಆ್ಯಂಬುಲೆನ್ಸ್‌ಗೆ ಹಗಲು ಮತ್ತು ರಾತ್ರಿ ಪಾಳಿಯಲ್ಲಿ ಚಾಲಕರ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಸಂಪೂರ್ಣ ಕಟ್ಟಡ ತೆರವುಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
-ಡಾ. ಚೇತನ್, ಜಿಲ್ಲಾ ಆರೋಗ್ಯಾಧಿಕಾರಿ
ರಾತ್ರಿ ವೇಳೆ ತುರ್ತು ಆರೋಗ್ಯ ಸಮಸ್ಯೆ ಅಥವಾ ಹೆರಿಗೆ ನೋವು ಕಾಣಿಸಿಕೊಂಡರೆ ಆಸ್ಪತ್ರೆಯಲ್ಲಿ ವೈದ್ಯರು ಇರುವುದಿಲ್ಲ. ಹಾಗಾಗಿ ಗರ್ಭಿಣಿಯರು ದೂರದ ಬಾಗೇಪಲ್ಲಿ ಅಥವಾ ಚಿಂತಾಮಣಿಗೆ ಅಲೆಯುವಂತಾಗಿದೆ. ಗೀತಾ, ಗೃಹಿಣಿ