ಉಚ್ಚಿಲ ದಸರಾಕ್ಕೆ ವಸ್ತು ಪ್ರದರ್ಶನದ ಮೆರುಗು

ಉಚ್ಚಿಲ ದಸರಾಕ್ಕೆ ವಸ್ತು ಪ್ರದರ್ಶನದ ಮೆರುಗು

ಉಚ್ಚಿಲ ದಸರಾಕ್ಕೆ ವಸ್ತು ಪ್ರದರ್ಶನದ ಮೆರುಗು

ಪಡುಬಿದ್ರಿ: ಶ್ರೀ ಕ್ಷೇತ್ರ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ಉಡುಪಿ ಉಚ್ಚಿಲ ದಸರಾ ಅಂಗವಾಗಿ ಆಯೋಜಿಸಿರುವ ವಸ್ತು ಪ್ರದರ್ಶನವು ಗ್ರಾಮೀಣ ಬದುಕಿನ ಸೊಗಡು, ಸಾಂಪ್ರದಾಯಿಕ ಕಲೆ, ಸೃಜನಶೀಲತೆ ಹಾಗೂ ಪರಿಸರ ಜಾಗೃತಿಯ ಸಂದೇಶ ಸಾರುವ ಮೂಲಕ ಜನರ ಗಮನ ಸೆಳೆಯುತ್ತಿದೆ.

ಮೀನಿನ ಆಕಾರದ ವಸ್ತು ಪ್ರದರ್ಶನದ ಪ್ರವೇಶದ್ವಾರ ವಿಶೇಷ ಆಕರ್ಷಣೆ. ಒಳ ಪ್ರವೇಶಿಸುತ್ತಿದ್ದಂತೆ ಪರಿಸರ ಜಾಗೃತಿ ಮೂಡಿಸುವ ವಿವಿಧ ಕಲಾಕೃತಿಗಳು, ಸಾಲುಮರದ ತಿಮ್ಮಕ್ಕ ಹಾಗೂ ಸುಕ್ರಿ ಬೊಮ್ಮಗೌಡ ಅವರ ಪ್ರತಿಕೃತಿಗಳು ಸಂದರ್ಶಕರನ್ನು ಸೆಳೆಯುತ್ತವೆ. ಉಳ್ಳಾಲದ ರಾಣಿ ಅಬ್ಬಕ್ಕ ಪ್ರತಿಕೃತಿ ಹಾಗೂ ಮೊಗವೀರ ಸಮುದಾಯದ ಇತಿಹಾಸ ಮತ್ತು ಜಾಗೃತಿಗೆ ಸಂಬಂಧಿಸಿದ ಮಾಹಿತಿ ಫಲಕಗಳು ವಿಶೇಷ ಮಹತ್ವ ಪಡೆದಿವೆ.

ಗ್ರಾಮೀಣ ಜೀವನಶೈಲಿ, ಕೃಷಿ ಪರಂಪರೆ, ಜನಪದ ಸಂಸ್ಕೃತಿ ಹಾಗೂ ವಿವಿಧ ಕರಕುಶಲ ಕಲೆಗಳನ್ನು ಪರಿಚಯಿಸುವ ಮಳಿಗೆಗಳನ್ನು ತೆರೆಯಲಾಗಿದೆ. ಮರದ ಕೆತ್ತನೆ, ತೆಂಗಿನಕಾಯಿ ಮತ್ತು ತೆಂಗಿನ ಚಿಪ್ಪಿನ ಕಲಾಕೃತಿಗಳು, ಬಿದಿರಿನ ಉತ್ಪನ್ನಗಳು, ಮಣ್ಣಿನ ಗೊಂಬೆಗಳು, ಮೆಟಲ್ ಆರ್ಟ್, ರೇಸಿನ್ ಆರ್ಟ್ ಹಾಗೂ ವಿವಿಧ ಹಸ್ತಕಲಾ ವಿನ್ಯಾಸಗಳು ಕಲಾಸಕ್ತರನ್ನು ಆಕರ್ಷಿಸುತ್ತಿವೆ.

ಶಾಲಿನಿ ಶಂಕರ್ ಅವರ ವಾಲ್ ಆರ್ಟ್, ಸಿರಿ ಆರ್ಟ್ಸ್‌ನ ಕಲಾಕೃತಿಗಳು, ಯತೀಶ್ ಕಿದಿಯೂರು ಅವರ ಜಾನಪದ ಮುಖವಾಡಗಳು, ಗಣೇಶನ ಪ್ರತಿಮೆಗಳು, ಯಕ್ಷಗಾನಕ್ಕೆ ಸಂಬಂಧಿಸಿದ ಕಲಾಕೃತಿಗಳು ಹಾಗೂ 3ಡಿ ಆರ್ಟ್ ಪ್ರದರ್ಶನವು ವಸ್ತುಪ್ರದರ್ಶನಕ್ಕೆ ಮೆರುಗು ನೀಡಿದೆ. ಮಡಿಕೆಯಲ್ಲಿ ಚಿತ್ರ ಬಿಡಿಸುವ ಕಲೆ, ಕಡ್ಡಿಗಳಿಂದ ರೂಪಿಸಿರುವ ಕಲಾಕೃತಿಗಳು, ವಿಜ್ಞಾನಾಧಾರಿತ ವಿನ್ಯಾಸಗಳು ಮತ್ತು ಆಲಂಕಾರಿಕ ಕಲಾಕೃತಿಗಳು ಸಂದರ್ಶಕರ ಕುತೂಹಲ ಹೆಚ್ಚಿಸಿವೆ.

ಯಕ್ಷಗಾನದ ಕಿರೀಟದ ಮಾದರಿ, ಬೋಲ್ಟ್ ಮತ್ತು ನಟ್‌ಗಳನ್ನು ಬಳಸಿ ನಿರ್ಮಿಸಿರುವ ಶಿವನ ವಿಗ್ರಹ ಹಾಗೂ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಕಲಾತ್ಮಕ ಪ್ರತಿಕೃತಿಗಳು, ಮಟ್ಟುಗುಳ್ಳದ ಮಾದರಿ, ದಾನ್ಯಗಳಿಂದ ರಚಿಸಿದ ಶಿವನ ವಿಗ್ರಹ ಮತ್ತು ಗುರುಪೀಠದ ಪ್ರಾತ್ಯಕ್ಷಿಕೆಗಳು ಪ್ರದರ್ಶನದ ಅಂದ ಹೆಚ್ಚಿಸಿವೆ.

ಮೀನುಗಾರಿಕಾ ಇಲಾಖೆಯ ಸಹಕಾರದಲ್ಲಿ ಪ್ರದರ್ಶಿಸಲಾಗಿರುವ ವಿವಿಧ ಸಮುದ್ರ ಮೀನುಗಳು ಹಾಗೂ ಆಲಂಕಾರಿಕ ಮೀನುಗಳು, ಸಮುದ್ರ ಜೀವವೈವಿಧ್ಯ, ಮೀನುಗಾರಿಕೆ ಮತ್ತು ಸಮುದ್ರ ಪರಿಸರದ ಕುರಿತು ಅರಿವು ಮೂಡಿಸುವ ಈ ಪ್ರದರ್ಶನವು ಮಕ್ಕಳಿಗೆ ಜ್ಞಾನ ನೀಡುತ್ತಿದೆ. ತೋಟಗಾರಿಕಾ ಇಲಾಖೆಯ ಮಳಿಗೆಯೂ ಇದೆ.

ದಸರಾ ಮಹೋತ್ಸವದ ರೂವಾರಿ ಜಿ. ಶಂಕರ್ ಸಲಹೆಯಂತೆ ಪ್ರತಿವರ್ಷ ವಿಭಿನ್ನ ಪರಿಕಲ್ಪನೆಯಲ್ಲಿ ಪ್ರದರ್ಶನ ರೂಪಿಸಲಾಗುತ್ತಿದೆ. ವಿ.ಕೆ.ಯಾದವ್, ನಿತ್ಯಾನಂದ ಕರ್ಕೇರ, ದಿವಾಕರ ಕಾರ್ವಿ ಸಹಕಾರದೊಂದಿಗೆ ವಸ್ತು ಪ್ರದರ್ಶನ ರೂಪುಗೊಂಡಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಕೌಂಟರ್‌ಗಳನ್ನು ತೆರೆಯಲಾಗಿದೆ ಎಂದು ವಸ್ತುಪ್ರದರ್ಶನ ಸಂಚಾಲಕ ಯತೀಶ್ ಕಿದಿಯೂರು ತಿಳಿಸಿದ್ದಾರೆ.

ಪ್ಲಾಸ್ಟಿಕ್ ಬಾಟಲಿಗಳಿಂದ ಮೀನು

2,500ಕ್ಕೂ ಅಧಿಕ ನಿರುಪಯುಕ್ತ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿ ನಿರ್ಮಿಸಿರುವ ಬೃಹತ್ ಮೀನು ಮಾದರಿ ವಸ್ತುಪ್ರದರ್ಶನದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಕಲಾವಿದ ವೆಂಕಟರಮಣ ಕಾಮತ್ (ವೆಂಕಿ ಪಲಿಮಾರು) ಮಾರ್ಗದರ್ಶನದಲ್ಲಿ, ಪಂಜಿನಡ್ಕದ ಅನುದಾನಿತ ಕೆಪಿಎಸ್‌ಕೆ ಸ್ಮಾರಕ ಪ್ರೌಢಶಾಲೆಯ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಈ ಮಾದರಿ ರೂಪಿಸಲಾಗಿದೆ. ಸುಮಾರು 23 ಅಡಿ ಉದ್ದ ಹಾಗೂ 11 ಅಡಿ ಎತ್ತರದ ಈ ಮೀನು ಮಾದರಿಯು ಪ್ಲಾಸ್ಟಿಕ್ ತ್ಯಾಜ್ಯದ ಮರುಬಳಕೆಯ ಮಹತ್ವವನ್ನು ಸಾರುತ್ತಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ