
ಮೈಸೂರು ದಸರಾ: ಪ್ರೇಕ್ಷಕರ ಮನಗೆದ್ದ ಪೈಲ್ವಾನರ ಕಾದಾಟ
ಮೈಸೂರು: ದಸರಾ ಕುಸ್ತಿಯ ಎರಡನೇ ದಿನವಾದ ಸೋಮವಾರ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದ ಅಂಕಣದಲ್ಲಿ ಹಿರಿಯ–ಕಿರಿಯ ಪೈಲ್ವಾನರ ಕಾದಾಟವು ಪ್ರೇಕ್ಷಕರ ಮನಗೆದ್ದಿತು.
ಬೆಳಿಗ್ಗೆ ಮ್ಯಾಟ್ ಅಂಕಣದಲ್ಲಿ ವಿವಿಧ ವಿಭಾಗಗಳ ಕುಸ್ತಿಪಟುಗಳು ಸೆಣೆಸಿದರೆ, ಸಂಜೆ ಅದೇ ಮಣ್ಣಿನಲ್ಲಿ ಪೈಲ್ವಾನರು ದೂಳೆಬ್ಬಿಸುತ್ತ ಮಿಂಚಿದರು. ಪಟ್ಟು–ಪ್ರತಿಪಟ್ಟುಗಳ ಕಸರತ್ತಿಗೆ ನೋಡುಗರು ಶಿಳ್ಳೆ–ಚಪ್ಪಾಳೆಗಳ ಪ್ರಶಂಸೆ ವ್ಯಕ್ತಪಡಿಸಿದರು.
ಕೆಲವೇ ಸೆಕೆಂಡ್‌ಗಳಲ್ಲಿ ಚಿತ್:ಸಂಜೆ ನಡೆದ ನಾಡಕುಸ್ತಿಯಲ್ಲಿ ಮೈಸೂರಿನ ಅಬ್ದುಲ್ ರೆಹಮಾನ್, ಬೆಂಗಳೂರಿನ ಯತಿನ್ ಅವರನ್ನು ಕೇವಲ 35 ಸೆಕೆಂಡುಗಳಲ್ಲಿ ಚಿತ್ ಮಾಡಿ ಬೀಗಿದರು. ಶಾಂತಿನಗರದ ಮಹಮ್ಮದ್ ಗಯಾಜ್ ಅವರು ರಮ್ಮನಹಳ್ಳಿಯ ಹರ್ಷರನ್ನು ಕೆಲವೇ ಸೆಕೆಂಡುಗಳಲ್ಲಿ ಮಣ್ಣು ಮುಕ್ಕಿಸಿದರು.
ಕ್ಯಾತಮಾರನಹಳ್ಳಿಯ ಉಲ್ಲಾಸ್, ಯಲಹಂಕದ ಅಕ್ಷಯ್ ಆರಾಧ್ಯ ವಿರುದ್ಧ 1 ನಿಮಿಷದಲ್ಲಿ ಜಯಗಳಿಸಿದರೆ, ಅಶೋಕಪುರಂನ ಎಸ್. ಪೃಥ್ವಿ, ಶಾಂತಿನಗರದ ಅಜ್ವೇನ್ ಭಾಷಾ ವಿರುದ್ಧ 1 ನಿಮಿಷ 10 ಸೆಕೆಂಡ್‌ಗಳಲ್ಲಿ ಗೆದ್ದುಬೀಗಿದರು. ಮೈಸೂರಿನ ಸಯ್ಯದ್ ಸುಹೇನ್, ಯಲಹಂಕದ ಆರ್. ನಿತೀಶ್ ವಿರುದ್ಧ 1 ನಿಮಿಷ 25 ಸೆಕೆಂಡ್‌ಗಳಲ್ಲಿ ಜಯ ತಂದಿತ್ತರು. ಬನ್ನೂರಿನ ಹರೀಶ್ ವಿರುದ್ಧ ಗುಂಡ್ಲುಪೇಟೆಯ ಜಿ.ಆರ್. ಧನರಾಜ್ 1 ನಿಮಿಷದಲ್ಲಿ ಗೆದ್ದು ಸೈ ಎನಿಸಿಕೊಂಡರು.
ದಿನದಂತ್ಯಕ್ಕೆ ಸುಮಾರು 50ಕ್ಕೂ ಹೆಚ್ಚು ಜೋಡಿ ಕುಸ್ತಿ ಪಂದ್ಯಗಳು ಜರುಗಿದವು.
ಫೈನಲ್ ಪ್ರವೇಶ: ಬೆಳಿಗ್ಗೆ ನಡೆದ ಗ್ರೀಕೋ ರೋಮನ್ ಶೈಲಿಯ ಮ್ಯಾಟ್ ಕುಸ್ತಿಯಲ್ಲಿ ಗೆಲುವು ಸಾಧಿಸುವ ಮೂಲಕ 60 ಕೆ.ಜಿ ವಿಭಾಗದಲ್ಲಿ ಮೈಸೂರು ವಿಭಾಗದ ಎಸ್. ಸಚಿನ್ ಹಾಗೂ ಬೆಳಗಾವಿಯ ಸುದೀಪ್ ನೇಸರಗಿ), 63 ಕೆ.ಜಿ ವಿಭಾಗದಲ್ಲಿ ಶಿವಪ್ಪ ಆಳಬಾಳ್, ಬೆಳಗಾವಿಯ ಸೂರಜ್ ಹಾಗೂ 130 ಕೆ.ಜಿ ವಿಭಾಗದಲ್ಲಿ ವರುಣ್ ಅಥಣಿ ಹಾಗೂ ವಿಜಯ್ ಫೈನಲ್ ಪ್ರವೇಶಿಸಿದರು.