
ಅಕ್ಷರ ದಾಸೋಹ ನೌಕರರಿಗೆ ಕನಿಷ್ಠ ವೇತನ ಜಾರಿಗೆ ಸಿಐಟಿಯು ಆಗ್ರಹ
ವಿರಾಜಪೇಟೆ: ಅಕ್ಷರ ದಾಸೋಹ ನೌಕರರನ್ನು ಕೇವಲ ‘ಸ್ವಯಂಸೇವಕರು’ ಅಥವಾ 'ಗೌರವ ಸಿಬ್ಬಂದಿ'ಯಾಗಿ ನೋಡದೆ, ಅವರನ್ನು ಕಾರ್ಮಿಕರೆಂದು ಪರಿಗಣಿಸಿ ಕನಿಷ್ಠ ವೇತನ ಜಾರಿಗೊಳಿಸಬೇಕು ಎಂದು ಸಿಐಟಿಯು ಜಿಲ್ಲಾ ಅಧ್ಯಕ್ಷ ಎ.ಸಿ. ಸಾಬು ಅವರು ಆಗ್ರಹಿಸಿದರು.
ಪಟ್ಟಣದ ಸಿಐಟಿಯುನ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲ್ಲೂಕು ಘಟಕಗಳ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಬೆಲೆ ಏರಿಕೆಯ ಕಾಲದಲ್ಲಿ ಅತಿ ಕಡಿಮೆ ಗೌರವ ಧನ ಪಡೆದು ಜೀವನ ನಡೆಸುವುದು ಅಸಾಧ್ಯವಾಗಿದೆ. ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿದ್ದರೂ ಉದ್ಯೋಗ ಭದ್ರತೆ, ಪಿಂಚಣಿ ಹಾಗೂ ಭವಿಷ್ಯ ನಿಧಿ ಇಲ್ಲದಿರುವುದು ಮಹಿಳಾ ನೌಕರರ ಬದುಕನ್ನು ಅಸುರಕ್ಷಿತವಾಗಿಸಿದೆ. ಅಲ್ಲದೆ, ಅಡುಗೆ ಮಾಡುವಾಗ ಎದುರಾಗುವ ಹೊಗೆಯ ಬಾಧೆ, ತೂಕದ ಪಾತ್ರೆಗಳ ಹೊರೆ ಮತ್ತು ಆರೋಗ್ಯ ಸಮಸ್ಯೆಗಳಿಗೆ ಸರ್ಕಾರದ ವತಿಯಿಂದಲೇ ಸೂಕ್ತ ಪರಿಹಾರ ಹಾಗೂ ಉಚಿತವಾಗಿ ವೈದ್ಯಕೀಯ ತಪಾಸಣಾ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಸಂಚಾಲಕಿ ಪದ್ಮಿನಿ ಶ್ರೀಧರ್ ಮಾತನಾಡಿ, ‘ಅಕ್ಷರ ದಾಸೋಹ ನೌಕರರಾಗಿ ಶ್ರಮಿಸುತ್ತಿರುವ ಬಹುಪಾಲು ಮಹಿಳೆಯರು ಬಡ ಹಾಗೂ ಗ್ರಾಮೀಣ ಹಿನ್ನೆಲೆಯವರಾಗಿದ್ದು, ಇವರಿಗೆ ಸರ್ಕಾರದಿಂದ ವಿಶೇಷ ಸಾಮಾಜಿಕ ಹಾಗೂ ಆರ್ಥಿಕ ಭದ್ರತಾ ವ್ಯವಸ್ಥೆಗಳು ಸಿಗಬೇಕು. ಮಹಿಳಾ ನೌಕರರಿಗೆ ತುರ್ತಾಗಿ ಪ್ರಸೂತಿ ರಜೆ, ಆರೋಗ್ಯ ವಿಮೆ ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನ ಸಿಗುವಂತಾಗಬೇಕು. ಯಾವುದೇ ರೀತಿಯ ಲಿಂಗ ತಾರತಮ್ಯ ಅಥವಾ ಕಿರುಕುಳವಾಗದಂತೆ ತಡೆಯಲು ದೂರು ನಿವಾರಣಾ ಸಮಿತಿಗಳು ಕಾರ್ಯನಿರ್ವಹಿಸಬೇಕು. ಮಹಿಳೆಯರು ತಮ್ಮ ಆರ್ಥಿಕ ಸ್ವಾವಲಂಬನೆಗಾಗಿ ಮತ್ತು ಹಕ್ಕುಗಳ ರಕ್ಷಣೆಗಾಗಿ ಒಗ್ಗಟ್ಟಿನ ಹೋರಾಟ ರೂಪಿಸುವುದು ಇಂದಿನ ತುರ್ತು ಅಗತ್ಯ’ ಎಂದರು.
ಬಿಸಿಯೂಟ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಸಿ. ಕುಸುಮ ಅವರು ಮಾತನಾಡಿ, ‘ಇಲಾಖೆಯಿಂದ ಗೌರವ ಧನ ಬಿಡುಗಡೆಯಲ್ಲಿ ಆಗುತ್ತಿರುವ ಅನಗತ್ಯ ವಿಳಂಬ ಮತ್ತು ಕೆಲವೆಡೆ ಕಳಪೆ ಗುಣಮಟ್ಟದ ಅಡುಗೆ ಸಾಮಗ್ರಿಗಳನ್ನು ನೀಡಿ ನೌಕರರ ಮೇಲೆ ಗೂಬೆ ಕೂರಿಸುವ ಪ್ರವೃತ್ತಿ ಸರಿಯಲ್ಲ. ನೌಕರರ ಕಷ್ಟಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಸಿದರು.
ಸಮ್ಮೇಳನದಲ್ಲಿ ಪೊನ್ನಂಪೇಟೆ ಹಾಗೂ ವಿರಾಜಪೇಟೆ ತಾಲ್ಲೂಕು ಸಮಿತಿಗಳಿಗೆ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಪೊನ್ನಂಪೇಟೆ ತಾಲ್ಲೂಕು ಸಮಿತಿ ಅಧ್ಯಕ್ಷರಾಗಿ ಶ್ವೇತಾ, ಕಾರ್ಯದರ್ಶಿಯಾಗಿ ಸೀನಾ ಹಾಗೂ ಖಜಾಂಚಿಯಾಗಿ ಸೌಮ್ಯ ಆಯ್ಕೆಯಾದರು. ವಿರಾಜಪೇಟೆ ತಾಲ್ಲೂಕು ಸಮಿತಿ ಅಧ್ಯಕ್ಷರಾಗಿ ಉಮ್ಮಕ್ಕ, ಕಾರ್ಯದರ್ಶಿಯಾಗಿ ರೂಪ ಹಾಗೂ ಖಜಾಂಚಿಯಾಗಿ ನಳಿನಿ ಎನ್.ಸಿ. ಆಯ್ಕೆಯಾದರು.