ಕಾರವಾರದ ಟ್ಯಾಗೋರ್ ಕಡಲತೀರದಲ್ಲಿ ಸೌಕರ್ಯಗಳ ಕೊರತೆ

ಕಾರವಾರದ ಟ್ಯಾಗೋರ್ ಕಡಲತೀರದಲ್ಲಿ ಸೌಕರ್ಯಗಳ ಕೊರತೆ

ಕಾರವಾರದ ಟ್ಯಾಗೋರ್ ಕಡಲತೀರದಲ್ಲಿ ಸೌಕರ್ಯಗಳ ಕೊರತೆ

ಕಾರವಾರ: ನಿಸರ್ಗದತ್ತ ಸೊಬಗು ಹೊಂದಿದ್ದರೂ ಇಲ್ಲಿನ ಟ್ಯಾಗೋರ್ ಕಡಲತೀರ ಸೌಕರ್ಯಗಳ ಕೊರತೆಯ ಕಾರಣಕ್ಕೆ ಪ್ರವಾಸಿಗರನ್ನು ಸೆಳೆಯುವಲ್ಲಿ ಎಡವುತ್ತಿದೆ ಎಂಬ ದೂರು ಸಾರ್ವಜನಿಕ ವಲಯದಲ್ಲಿ ಹೆಚ್ಚುತ್ತಿದೆ.

ನಗರ ಪ್ರದೇಶಕ್ಕೆ ಹೊಂದಿಕೊಂಡಿರುವ ಜಿಲ್ಲೆಯ ಏಕೈಕ ಕಡಲತೀರ ಇದಾಗಿದ್ದು, ಹೆಚ್ಚು ಆಳವಿಲ್ಲದ ತೀರ ಪ್ರದೇಶವನ್ನು ಒಳಗೊಂಡಿದೆ. ಸುತ್ತ ಹಸಿರು ಪರ್ವತಗಳ ಸಾಲು, ನೀಲಿ ಕಡಲು ಆಕರ್ಷಣೆಯ ಕೇಂದ್ರ. ಸುಮಾರು ಎರಡೂವರೆ ಕಿ.ಮೀಗೂ ಹೆಚ್ಚು ಉದ್ದದ ಕಡಲತೀರ ಇಲ್ಲಿದೆ.

ಸಂಜೆಯ ವೇಳೆಯಲ್ಲಂತೂ ಸಾವಿರಾರು ಜನರು ಕಿಕ್ಕಿರಿದು ಕಡಲತೀರದಲ್ಲಿ ನೆರೆಯುತ್ತಾರೆ. ವಾಯುವಿಹಾರಕ್ಕೆ ಬಂದವರು, ಪ್ರವಾಸಿಗರು, ಸಮೀಪದ ಮಕ್ಕಳ ಉದ್ಯಾನದಲ್ಲಿ ಆಡಿ ನಲಿಯಲು ಬರುವ ಚಿಣ್ಣರು, ಪಕ್ಕದಲ್ಲಿನ ಫುಡ್‌ ಕೋರ್ಟ್‌ನಲ್ಲಿ ತಿನಿಸು ಸವಿಯಲು ನೆರೆದವರು..ಹೀಗೆ ವಿವಿಧ ಬಗೆಯ ಜನರಿಂದ ಕಡಲತೀರ ದಿನದ ನಿರ್ದಿಷ್ಟ ಸಮಯದಲ್ಲಿ ಮಾತ್ರ ಕಿಕ್ಕಿರಿದಿರುತ್ತದೆ.

ಕಡಲತೀರದಲ್ಲಿ ಜನರಿಗೆ ಕುಳಿತುಕೊಳ್ಳುವ ಆಸನಗಳು ಮರಳಿನಲ್ಲಿ ಹುದುಗಿ ಹೋಗಿದ್ದರೆ, ಕೆಲವೆಡೆ ಶೆಲ್ಟರ್‌ಗಳ ಚಾವಣಿಯೂ ಮುರಿದು ಬಿದ್ದಿದೆ. ಜೀವರಕ್ಷಕರ ವೀಕ್ಷಣಾ ಗೋಪುರ ಗಾಳಿಮಳೆಗೆ ಚೆಲ್ಲಾಪಿಲ್ಲಿಯಾಗಿದೆ.

‘ಕಾರವಾರದಿಂದ ಕೇವಲ 25 ಕಿ.ಮೀ ದೂರದಲ್ಲಿರುವ ಗೋವಾದ ಪಾಲೊಲೆಂ ಕಡಲತೀರ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ಅಲ್ಲಿಗೆ ದೇಶೀಯ ಪ್ರವಾಸಿಗರಿಂದ ಹಿಡಿದು ಜಗತ್ತಿನ ನಾನಾ ದೇಶಗಳಿಂದ ಬಂದ ಪ್ರವಾಸಿಗರು ಭೇಟಿ ನೀಡುತ್ತಾರೆ. ಅಲ್ಲಿಗಿಂತಲೂ ಹೆಚ್ಚು ಉದ್ದದ ಹಾಗೂ ಸೊಬಗಿನಿಂದ ಕೂಡಿರುವ ಟ್ಯಾಗೋರ್ ಕಡಲತೀರ ಮಾತ್ರ ಆ ಮಟ್ಟದಲ್ಲಿ ಪ್ರವಾಸಿಗರನ್ನು ಸೆಳೆಯುವಲ್ಲಿ ವಿಫಲವಾಗಿದೆ’ ಎಂದು ಬೇಸರಿಸುತ್ತಾರೆ ನಗರದ ನಿವಾಸಿ ಅನಿಲ ನಾಯ್ಕ.

‘ದೋಣಿ ವಿಹಾರ, ವೈವಿಧ್ಯಮಯ ಜಲಸಾಹಸ ಚಟುವಟಿಕೆಗಳು ಗೋವಾ ಮಾತ್ರವಲ್ಲದೆ ಜಿಲ್ಲೆಯ ಗೋಕರ್ಣ, ಮುರುಡೇಶ್ವರ ಕಡಲತೀರದಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ನಗರ ಪ್ರದೇಶದ ವ್ಯಾಪ್ತಿಯಲ್ಲೇ ಇದ್ದರೂ ಟ್ಯಾಗೋರ್ ಕಡಲತೀರದಲ್ಲಿ ಮಾತ್ರ ಜಲಸಾಹಸ ಚಟುವಟಿಕೆ ಹೆಚ್ಚಿಸಲು ಪ್ರವಾಸೋದ್ಯಮ ಇಲಾಖೆಗೆ, ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ. ಒಂದೆರಡು ಚಟುವಟಿಕೆ ಮಾತ್ರವೇ ಇದ್ದು, ಪ್ರವಾಸಿಗರ ದಟ್ಟಣೆ ವೇಳೆ ತಾಸುಗಟ್ಟಲೆ ಕಾಯಬೇಕಾಗುತ್ತದೆ’ ಎಂದು ನಿತಿನ್ ಗಡಕರ ದೂರಿದರು.

‘ರಾಷ್ಟ್ರೀಯ ಹೆದ್ದಾರಿಗೆ ನಗರ ವ್ಯಾಪ್ತಿಯಲ್ಲಿ ಮೇಲ್ಸೇತುವೆ ನಿರ್ಮಿಸಿದ್ದರಿಂದ ಪ್ರವಾಸೋದ್ಯಮಕ್ಕೆ ದೊಟ್ಟ ಪೆಟ್ಟು ಬಿದ್ದಿದೆ. ಕೇರಳ, ಬೆಂಗಳೂರು ಸೇರಿದಂತೆ ನಾನಾ ಕಡೆಗಳಿಂದ ಗೋವಾಕ್ಕೆ ಸಾಗುವ ಪ್ರವಾಸಿಗರು ಈ ಮೊದಲು ಕೆಲ ಹೊತ್ತಾದರೂ ಟ್ಯಾಗೋರ್ ಕಡಲತೀರ, ಐಎನ್ಎಸ್ ಚಪಲ್ ಯುದ್ಧನೌಕೆ ಮ್ಯೂಸಿಯಂನಂತಹ ತಾಣಗಳಿಗೆ ಭೇಟಿ ನೀಡುತ್ತಿದ್ದರು. ಮೇಲ್ಸೇತುವೆ ನಿರ್ಮಾಣವಾದ ಬಳಿಕ ವಾಹನಗಳು ನಗರಕ್ಕೆ ಬರುತ್ತಿಲ್ಲ. ನೇರವಾಗಿ ಹೊರವಲಯದಿಂದಲೇ ಸಾಗುತ್ತಿದ್ದು, ಟ್ಯಾಗೋರ್ ಕಡಲತೀರ ಸೇರಿದಂತೆ ಇಲ್ಲಿರುವ ಪ್ರವಾಸಿ ತಾಣಗಳು ಅವರ ಗಮನ ಸೆಳೆಯುತ್ತಿಲ್ಲ’ ಎಂದು ಗಿರೀಶ್ ಬಾಂದೇಕರ ಅಸಮಾಧಾನ ವ್ಯಕ್ತಪಡಿಸಿದರು.

‘ಕಡಲತೀರಕ್ಕೆ ನಸುಕಿನ ಜಾವದಲ್ಲಿ ವಾಕಿಂಗ್‌ಗೆ ಬರುವವರ ಸಂಖ್ಯೆ ನೂರಾರಿದೆ. ನಗರಕ್ಕೆ ಬಂದ ಪ್ರವಾಸಿಗರು ಬೆಳಿಗ್ಗೆ ವಾಕಿಂಗ್‌ಗೆ ಬಂದು ಕಡಲತೀರದ ಸೊಬಗು ಆಸ್ವಾದಿಸುತ್ತಾರೆ. ತೀರದುದ್ದಕ್ಕೂ ಬಿದ್ದಿರುವ ಕಸಕಡ್ಡಿಗಳು ಪ್ರವಾಸಿಗರು ಮೂಗುಮುರಿಯುವಂತೆ ಮಾಡುತ್ತವೆ. ಅಲೆಗಳೊಂದಿಗೆ ಬಂದು ಬೀಳುವ ತ್ಯಾಜ್ಯಗಳನ್ನು ನಸುಕಿನ ಜಾವದಲ್ಲೇ ಸ್ವಚ್ಛಗೊಳಿಸಿದರೆ ಕಡಲತೀರ ಮತ್ತಷ್ಟು ಆಕರ್ಷಕವೆನಿಸುತ್ತದೆ’ ಎಂಬುದು ಹಿರಿಯ ವಕೀಲ ಪಿ.ಎಸ್.ಭಟ್ ಅವರ ಸಲಹೆ.

ಚರಂಡಿ ಪಕ್ಕದಲ್ಲೇ ಫುಡ್ ಕೋರ್ಟ್

ಟ್ಯಾಗೋರ್ ಕಡಲತೀರದ ಆಕರ್ಷಣೀಯ ಸ್ಥಳಗಳಲ್ಲಿ ಫುಡ್ ಕೋರ್ಟ್ ಕೂಡ ಒಂದು. ಇಲ್ಲಿ ಹತ್ತಾರು ಸಂಚಾರಿ ಚಾಟ್ಸ್ ಮಳಿಗೆಗಳು, ಹೋಟೆಲ್‌ಗಳಿವೆ. ಮುಸ್ಸಂಜೆ ಹೊತ್ತಲ್ಲಿ ನೂರಾರು ಖಾದ್ಯಪ್ರಿಯರು ಇಲ್ಲಿಗೆ ಭೇಟಿ ನೀಡಿ ಆಹಾರ ಆಸ್ವಾದಿಸುತ್ತಾರೆ. ಅಲ್ಲೇ ಪಕ್ಕದಲ್ಲಿರುವ ಚರಂಡಿಯಿಂದ ಹೊರಸೂಸುವ ದುರ್ನಾತ ಅವರಲ್ಲಿ ಬೇಸರ ಹುಟ್ಟಿಸುತ್ತಿದೆ. ‘ಫುಡ್ ಕೋರ್ಟ್‌ನಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡುವಂತೆ ಎಚ್ಚರಿಸುವ ಅಧಿಕಾರಿಗಳು ಚರಂಡಿ ಪಕ್ಕದಲ್ಲಿ ತಿನಿಸುಗಳ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ದುರ್ವಾಸನೆ ಒಂದೆಡೆಯಾದರೆ, ಸೊಳ್ಳೆ, ನೊಣಗಳ ಕಾಟ ಹೆಚ್ಚಿದೆ. ಸಾಂಕ್ರಾಮಿಕ ರೋಗ ಹರಡುವ ಆತಂಕದಲ್ಲಿ ಜನರು ತಿನಿಸು ತಿನ್ನಬೇಕಾಗುತ್ತದೆ’ ಎಂದು ಅನಿಷ್ಕಾ ನಾಯ್ಕ ದೂರಿದರು.

ವಿವಿಧ ದಿನಾಚರಣೆ, ಅಭಿಯಾನದ ಭಾಗವಾಗಿ ಸರ್ಕಾರಿ ಇಲಾಖೆಗಳು, ಸಂಘ ಸಂಸ್ಥೆಗಳು ಟ್ಯಾಗೋರ್ ಕಡಲತೀರದಲ್ಲಿ ಸ್ವಚ್ಛತಾ ಶ್ರಮದಾನ ನಡೆಸುತ್ತಿವೆ. ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಸಂಘ ಸಂಸ್ಥೆಗಳು, ಇಲಾಖೆಗಳ ನೌಕರರು ಶ್ರಮದಾನ ನಡೆಸುತ್ತಿದ್ದಾರೆ. ನಿತ್ಯವೂ ತೀರ ಪ್ರದೇಶದಲ್ಲಿ ಟನ್‌ಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ.

‘ಎರಡು ದಿನದ ಹಿಂದೆ ಅರಣ್ಯ ಇಲಾಖೆ ಕಾಳಿ ಸಂಗಮ ಪ್ರದೇಶದಲ್ಲಿ ನಡೆಸಿದ ಶ್ರಮದಾನದಲ್ಲಿ 1.8 ಟನ್‌ನಷ್ಟು ತ್ಯಾಜ್ಯ ಸಂಗ್ರಹಿಸಲಾಗಿದೆ. ಇನ್ನೂ ದುಪ್ಪಟ್ಟು ತ್ಯಾಜ್ಯ ಅಲ್ಲಿ ಬೀಳುತ್ತಿದೆ. ಪ್ರತಿ ಬುಧವಾರ ಸ್ವಚ್ಛತೆಗೆ ಶ್ರಮದಾನ ನಡೆಸಲು ನಿರ್ಧರಿಸಿದ್ದೇವೆ’ ಎನ್ನುತ್ತಾರೆ ಕೋಸ್ಟಲ್ ಮರೈನ್ ವಿಭಾಗದ ಆರ್‌ಎಫ್‌ಒ ಗಜಾನನ ನಾಯ್ಕ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ