ಕಸ ತೆರವುಗೊಳಿಸಿದ ಶಾಸಕ ಡಾ.ಮಂತರ್‌ಗೌಡ: ಸ್ವಚ್ಛತೆ ಬಗ್ಗೆ ಜಾಗೃತಿ

ಕಸ ತೆರವುಗೊಳಿಸಿದ ಶಾಸಕ ಡಾ.ಮಂತರ್‌ಗೌಡ: ಸ್ವಚ್ಛತೆ ಬಗ್ಗೆ ಜಾಗೃತಿ

ಕಸ ತೆರವುಗೊಳಿಸಿದ ಶಾಸಕ ಡಾ.ಮಂತರ್‌ಗೌಡ: ಸ್ವಚ್ಛತೆ ಬಗ್ಗೆ ಜಾಗೃತಿ

ಮಡಿಕೇರಿ: ದಸರಾ ದಶಮಂಟಪಗಳ ಶೋಭಾಯಾತ್ರೆ ಮುಗಿದ ನಂತರ ಸ್ವಚ್ಛತಾ ಕಾರ್ಯ ಶುಕ್ರವಾರ ಆರಂಭವಾಯಿತು. ಮೊದಲ ದಿನ ಒಟ್ಟು 5 ಟ್ರಾಕ್ಟರ್ ಕಸ ಸಂಗ್ರಹವಾಯಿತು.

ಇಲ್ಲಿನ ಗಾಂಧಿ ಮೈದಾನಕ್ಕೆ ಭೇಟಿ ನೀಡಿದ ಶಾಸಕ ಡಾ.ಮಂತರ್‌ಗೌಡ ಸ್ವಚ್ಛತಾ ಕಾರ್ಯದಲ್ಲಿ ಸ್ವಯಂ ಭಾಗಿಯಾದರು. ಈ ಮೂಲಕ ಅವರು ಪೌರಕಾರ್ಮಿಕರ ಕೆಲಸಕ್ಕೆ ಜತೆಯಾದರು.

ಕೈಗವಸು ಹಾಕಿಕೊಂಡು, ದೊಡ್ಡದಾದ ಪೊರಕೆ ಹಿಡಿದ ಅವರು ಮೈದಾನದಲ್ಲಿದ್ದ ಕಸವನ್ನು ತೆಗೆದರು.

ಈ ವೇಳೆ ಮಾತನಾಡಿದ ಅವರು, ಹಬ್ಬ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳು ಮುಗಿದ ಬಳಿಕ ಸ್ವಚ್ಛತೆ ಕಾಪಾಡುವುದು ಕೇವಲ ಒಂದು ದಿನದ ಕೆಲಸವಲ್ಲ. ವರ್ಷದ 365 ದಿನವೂ ಪರಿಸರ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಸ್ವಚ್ಛತಾ ಕಾರ್ಯವು ಎಲ್ಲರ ಕರ್ತವ್ಯ ಮತ್ತು ಜವಾಬ್ದಾರಿಯೂ ಆಗಿದೆ. ಸಾರ್ವಜನಿಕರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೆ, ನಿಗದಿತ ಕಸದ ತೊಟ್ಟಿಗಳಲ್ಲಿ ಹಾಕುವ ಅಭ್ಯಾಸವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ದಸರಾ ಸೇರಿದಂತೆ ವಿವಿಧ ಹಬ್ಬಗಳ ಸಂದರ್ಭದಲ್ಲಿ ಜನರು ಸಂಭ್ರಮದಿಂದ ಭಾಗವಹಿಸುತ್ತಾರೆ. ಆದರೆ, ಕಾರ್ಯಕ್ರಮ ಮುಗಿದ ಮರುದಿನವೇ ಸ್ವಚ್ಛತೆಯ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಹಬ್ಬದ ಸಂದರ್ಭದಲ್ಲಿ ಉಂಟಾಗುವ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವ ಮೂಲಕ ನಗರದ ಸ್ವಚ್ಛತೆ ಮತ್ತು ಸೌಂದರ್ಯವನ್ನು ಕಾಪಾಡಲು ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.

ದಸರಾ ಸಂದರ್ಭದಲ್ಲಿ ನಗರದ ವಿವಿಧೆಡೆ ಕಸದ ತೊಟ್ಟಿಗಳನ್ನು ಇರಿಸಲಾಗಿರುತ್ತದೆ. ಸಾರ್ವಜನಿಕರು ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ರಸ್ತೆಗಳಲ್ಲೇ ಕಸ ಎಸೆಯುವುದನ್ನು ನಿಲ್ಲಿಸಿ, ಪೌರಕಾರ್ಮಿಕರೊಂದಿಗೆ ಕೈಜೋಡಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಒಂದು ದಿನ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸುವುದರಿಂದ ಮಾತ್ರ ಸ್ವಚ್ಛ ನಗರ ನಿರ್ಮಾಣ ಸಾಧ್ಯವಿಲ್ಲ. ವರ್ಷದ ಎಲ್ಲ ದಿನಗಳಲ್ಲಿಯೂ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.

ಮಡಿಕೇರಿ ನಗರದ ಸೌಂದರ್ಯವನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸ್ವಚ್ಛತೆಯನ್ನು ಕೇವಲ ಪೌರಕಾರ್ಮಿಕರ ಕರ್ತವ್ಯವೆಂದು ಭಾವಿಸದೆ, ಸಾರ್ವಜನಿಕರೂ ತಮ್ಮ ಹೊಣೆಗಾರಿಕೆಯನ್ನು ಅರಿತು ನಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ವೈ.ರಾಜೇಶ್, ಸದಸ್ಯರಾದ ಆರ್.ಪಿ.ಚಂದ್ರಶೇಖರ್, ಮಿನಾಜ್ ಪ್ರವೀಣ್, ನಗರಸಭೆಯ ಸದಸ್ಯರಾದ ಜುಲೆಕಾಬಿ, ಮುದ್ದುರಾಜ್, ಸದಾಮುದ್ದಪ್ಪ, ಮುಖಂಡರಾದ ಪ್ರಕಾಶ್ ಆಚಾರ್ಯ, ಹಂಸ ಕೊಟ್ಟಮುಡಿ, ಓಂಕಾರೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಚುಮ್ಮಿ ದೇವಯ್ಯ, ಸದಸ್ಯರಾದ ಅಂಬೆಕಲ್ ಕುಶಾಲಪ್ಪ, ಜಿ.ರಾಜೇಂದ್ರ, ಜಯಂತಿ ಶೆಟ್ಟಿ, ಮೋಹನ್ ವಿ.ಜಿ, ಫ್ಯಾನ್ಸಿ ಪಾರ್ವತಿ, ಕೊಚನ ಚೇತನ್, ಜಾನ್ಸನ್ ಪಿಂಟೊ, ಶಶಿ, ಪ್ರೇಮಲಿಂಗಪ್ಪ, ರವಿ ಪಾಪು, ವಸಂತ ಭಟ್, ಅಂಬೆಕಲ್ ನವೀನ್, ಹಬಿಬ್ ಕೀರ್ತನ್, ಲೀಲಾ ಶೇಷಮ್ಮ, ಕವನ್ ಕೊತ್ತೊಳ್ಳಿ, ಅರ್ಜುನ್, ಸೂರ್ಯ ಭಾಗವಹಿಸಿದ್ದರು.

ಸ್ವಚ್ಛತೆಯ ಅರಿವು ಮೂಡಿಸಿದ್ದ ಪತ್ರಿಕೆ

‘ಮಂಜಿನ ನಗರಿ’ ಈಗ ಕಸದ ನಗರಿ!’ ಶೀರ್ಷಿಕೆಯಡಿ ‘ಪ್ರಜಾವಾಣಿ’ ಶುಕ್ರವಾರವಷ್ಟೇ ವಿಶೇಷ ವರದಿ ಪ್ರಕಟಿಸಿತ್ತು.

ದಸರೆ ಮುಗಿದರೂ ಸ್ವಚ್ಛತಾ ಕಾರ್ಯ ಆರಂಭವಾಗದಿರುವ ಕುರಿತು ಹಾಗೂ ಪೌರಕಾರ್ಮಿಕರಿಗೆ ಇತರ ಸಂಘ, ಸಂಸ್ಥೆಗಳು ಕಸ ತೆಗೆಯಲು ನೆರವಾಗಬೇಕು ಎಂದು ವಿಶೇಷ ವರದಿಯಲ್ಲಿ ಪ್ರಸ್ತಾಪಿಸಿ ಗಮನ ಸೆಳೆದಿತ್ತು

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ