
'ದುಶ್ಚಟಗಳಿಂದ ದೂರವಿದ್ದು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ'
ಹೊಸದುರ್ಗ: ‘ದುಶ್ಚಟಗಳಿಂದ ದೂರವಿದ್ದು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಕುಟುಂಬದ ಭವಿಷ್ಯದ ಬಗ್ಗೆ ಕಾಳಜಿ ವಹಿಸಬೇಕು’ ಎಂದು ಸಹಾಯಕ ಕೃಷಿ ನಿರ್ದೇಶಕ ಸಿ.ಎಸ್ ಈಶ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲ್ಲೂಕಿನ ಮಧುರೆ ಸಿದ್ದರಾಮ ಸಮುದಾಯ ಭವನದಲ್ಲಿ ಈಚೆಗೆ ಆಯೋಜಿಸಿದ್ದ ಮದ್ಯವರ್ಜನ ಶಿಬಿರದಲ್ಲಿ ಮಾತನಾಡಿದರು.
‘ಮದ್ಯಪಾನ, ಧೂಮಪಾನ ಹಾಗೂ ಗುಟ್ಕಾ ಸೇವನೆಯಂತಹ ದುಶ್ಚಟಗಳು ಮನುಷ್ಯನ ಆರೋಗ್ಯವನ್ನು ಹಾಳು ಮಾಡುವುದಲ್ಲದೆ, ಕುಟುಂಬದ ಆರ್ಥಿಕ ಪರಿಸ್ಥಿತಿಯ ಮೇಲೂ ದುಷ್ಪರಿಣಾಮ ಬೀರುತ್ತವೆ. ಪ್ರತಿದಿನ ದೇವರ ಸ್ಮರಣೆ, ಪೂಜೆ ಹಾಗೂ ಸಕಾರಾತ್ಮಕ ಚಿಂತನೆಗಳಿಗೆ ಸಮಯ ಮೀಸಲಿಡಬೇಕು. ಕುಟುಂಬದ ಏಳಿಗೆಗೆ ಶ್ರಮಿಸಬೇಕು. ಬರಗಾಲದ ಸಂಕಷ್ಟವನ್ನು ಎದುರಿಸಲು ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಉಪಕಸುಬುಗಳಿಗೆ ಆದ್ಯತೆ ನೀಡಬೇಕು’ ಎಂದು ಹೇಳಿದರು.
ಈ ವೇಳೆ ಆಯೋಜನ ಸಮಿತಿ ಅಧ್ಯಕ್ಷ ತುಂಬಿನಕೆರೆ ಬಸವರಾಜ್, ಕರ್ನಾಟಕ ರಾಜ್ಯ ಜನಜಾಗೃತಿ ವೇದಿಕೆ ಸದಸ್ಯ ಬೀಸನಹಳ್ಳಿ ಜಗದೀಶ್, ಹಾಲುರಾಮೇಶ್ವರ ಯೋಜನಾಧಿಕಾರಿ ಚಂದ್ರಶೇಖರ್, ಶಿಬಿರಾಧಿಕಾರಿಗಳಾದ ಕುಮಾರ್, ಹಾಲೇಶ್, ಮಂಜುನಾಥ್, ರಘು, ಸತೀಶ್, ನಾಗರಾಜಪ್ಪ ಸೇರಿದಂತೆ ಹಲವರಿದ್ದರು.