ಚಿಕ್ಕಮಗಳೂರಿನಲ್ಲಿ ಭರ್ಜರಿ ಮಳೆ: ತಂಪಾದ ಇಳೆ

ಚಿಕ್ಕಮಗಳೂರಿನಲ್ಲಿ ಭರ್ಜರಿ ಮಳೆ: ತಂಪಾದ ಇಳೆ

ಚಿಕ್ಕಮಗಳೂರಿನಲ್ಲಿ ಭರ್ಜರಿ ಮಳೆ: ತಂಪಾದ ಇಳೆ

ಚಿಕ್ಕಮಗಳೂರು: ನಗರ ಸೇರಿ ಸುತ್ತಮುತ್ತ ಶುಕ್ರವಾರ ಭರ್ಜರಿ ಮಳೆ ಯಾಗಿದ್ದು, ಮಳೆಗಾಲದ ವಾತಾವರಣ ನಿರ್ಮಾಣವಾಯಿತು. ಮಳೆಗಾಲದಲ್ಲೂ ಬಿರು ಬಿಸಿಲು ಕಂಡಿದ್ದ ಜನ ನಿರಂತರ ಸುರಿದ ಮಳೆ ಕಂಡು ಸಂತಸಪಟ್ಟರು.

ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಮಧ್ಯಾಹ್ನ 1 ಗಂಟೆ ವೇಳೆಗೆ ಆರಂಭವಾದ ಮಳೆ ಮೊದಲಿಗೆ ಸಣ್ಣದಾಗಿತ್ತು. ನಂತರ ಬಿರುಸು ಪಡೆದುಕೊಂಡು 3.30ರ ತನಕ ನಿರಂತರವಾಗಿ ಸುರಿಯಿತು.

ಬಿಟ್ಟೂ ಬಿಡದೆ ಸುರಿದ ಮಳೆಯಿಂದ ನಗರದ ಚರಂಡಿಗಳು ತುಂಬಿ ರಸ್ತೆಗಳಲ್ಲಿ ನೀರು ಹರಿಯಿತು. ಹರಿಯುವ ನೀರಿನ ನಡುವೆ ವಾಹನಗಳ ಸಂಚರಿಸಿದವು.

ಮುಳ್ಳಯ್ಯನಗಿರಿ, ಬಾಬಾ ಬುಡನ್‌ಗಿರಿ ಭಾಗದಲ್ಲೂ ಧಾರಾಕಾರವಾಗಿ ಮಳೆ ಸುರಿಯಿತು. ರಸ್ತೆಗಳಲ್ಲಿ ಹೊಳೆಯಂತೆ ನೀರು ಹರಿಯಿತು. ಬೆಳಿಗ್ಗೆ ಮೋಡ ಕವಿದ ವಾತಾವರಣದ ಜತೆಗೆ ಆಹ್ಲಾದಕರ ವಾತಾವರಣ ಇತ್ತು. ನಂತರ ನಿರಂತರವಾಗಿ ಸುರಿದ ಮಳೆಯಿಂದ ಪ್ರವಾಸಿಗರು ಪರದಾಡಿದರು.

ಜೂನ್‌ನಿಂದಲೂ ಮಳೆಗಾಲದ ವಾತಾವರಣ ಇಲ್ಲದೆ ಬಿಸಿಲಿನ ವಾತಾವರಣ ಕಂಡು ಜನ ಬೇಸರಗೊಂಡಿದ್ದರು. ಇದ್ದಕ್ಕಿದ್ದಂತೆ ಸುರಿದ ಮಳೆಯಿಂದ ಜನ ಸಂತಸಗೊಂಡರು. ನಗರದ ಹೊರ ವಲಯದ ಗ್ರಾಮೀಣ ಪ್ರದೇಶಗಳಲ್ಲಿ ಹೊಲ, ಗದ್ದೆ ಮತ್ತು ತೋಟಗಳಲ್ಲಿ ನೀರು ನಿಲ್ಲುವಷ್ಟು ಮಳೆ ಸುರಿಯಿತು. ಸಂಜೆ ಬಳಿಕವೂ ಸೋನೆ ಮಳೆಯಂತೆ ಜಿಟಿಜಿಟಿ ಮಳೆ ಸುರಿದು ಇಳೆಯನ್ನು ಸಂಪೂರ್ಣ ತಂಪಾಗಿಸಿತು.

ಹಿಂಗಾರು ಬೆಳೆಗಳಾದ ಜೋಳ, ಕಡಲೆ ಮತ್ತು ಹುರುಳಿ ಕಾಳು ಬಿತ್ತನೆಗೆ ಅನುಕೂಲವಾಗಿದೆ. ಈಗಾಗಲೇ ರಾಗಿ ಬಿತ್ತನೆ ಮಾಡಿ ಮಳೆಗಾಗಿ ಕಾದಿದ್ದ ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಮುಂದುವರೆದ ತುಂತುರು ಮಳೆ: ನರಸಿಂಹರಾಜಪುರ ತಾಲ್ಲೂಕು ವ್ಯಾ‍ಪ್ತಿಯಲ್ಲಿ ಶುಕ್ರವಾರ ಸಾಧಾರಣದಿಂದ ತುಂತುರು ಮಳೆ ಸುರಿಯಿತು.

ಬೆಳಿಗ್ಗೆಯಿಂದಲೇ ಮೋಡಕವಿದ ವಾತಾವರಣವಿತ್ತು. ಮಧ್ಯಾಹ್ನದ ವೇಳೆಗೆ ತುಂತುರು ಮಳೆ ಸುರಿಯಿತು. ಸಂಜೆ 4ರ ವೇಳೆಗೂ ತುಂತುರು ಮಳೆ ಸುರಿಯಿತು. ಸಂಜೆ 6ರ ನಂತರ ಆರಂಭವಾದ ಮಳೆ ಹಾಗೆಯೇ ಮುಂದುವರೆದಿತ್ತು. ಗುರುವಾರದಿಂದ ಶುಕ್ರವಾರ ಬೆಳಿಗ್ಗೆವರೆಗೆ ನರಸಿಂಹರಾಜಪುರದಲ್ಲಿ 1.90 ಸೆಂ.ಮೀ, ಬಾಳೆಹೊನ್ನೂರಿನಲ್ಲಿ 1.10 ಸೆಂ.ಮೀ ಮಳೆಯಾಗಿತ್ತು.

ಬಿರುಸಿನ ಮಳೆ: ಮೂಡಿಗೆರೆ ತಾಲ್ಲೂಕಿನ ಹಲವು ಭಾಗಗಳಲ್ಲಿ ಶುಕ್ರವಾರ ಬಿರುಸಿನ ಮಳೆಯಾಯಿತು.

ಪಟ್ಟಣ ಸೇರಿದಂತೆ ಬಿಳಗುಳ, ಮಾಡ್ಕಲ್‌, ಹ್ಯಾಂಡ್‌ ಪೋಸ್ಟ್‌, ಬಿದರಹಳ್ಳಿ, ಹಾಂದಿ, ಆಲ್ದೂರು, ಹೊರಟ್ಟಿ, ಸಬ್ಬೇನಹಳ್ಳಿ, ಮೂಲರ ಹಳ್ಳಿ, ದೇವರುಂದ, ಹಂತೂರು, ದೇವರಮನೆ, ಕುಂದೂರು, ಸಾರಗೋಡು ಭಾಗಗಳಲ್ಲಿ ಉತ್ತಮ ಮಳೆಯಾಯಿತು. ಮಧ್ಯಾಹ್ನ 12ಕ್ಕೆ ಪ್ರಾರಂಭವಾದ ಮಳೆಯು ಸಂಜೆ 4ರವರೆಗೂ ಎಡೆಬಿಡದೇ ಸುರಿಯಿತು.

ಸೊರಗಿ ಹೋಗಿದ್ದ ಹೇಮಾವತಿ ಸೇರಿದಂತೆ ಎಲ್ಲಾ ನದಿಗಳಲ್ಲೂ ಸಂಜೆ ವೇಳೆಗೆ ನೀರಿನ ಹರಿಯುವ ಮಟ್ಟದಲ್ಲಿ ಸಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿತು. ಮಳೆಯಿಲ್ಲದೇ ಕಂಗಾಲಾಗಿದ್ದ ಭತ್ತದ ಬೆಳೆಗಾರರಿಗೆ ಮಳೆಯು ಖುಷಿ ನೀಡಿದರೆ, ಗೊಬ್ಬರ ಹರಡಲು ಮಳೆಗಾಗಿ ಪರಿತಪಿಸುತ್ತಿದ್ದ ಕಾಫಿ ಬೆಳೆಗಾರರಿಗೆ ಸಂತಸ ಉಂಟಾಯಿತು.

ಬೇಸಾಯಕ್ಕೆ ಅನುಕೂಲ, ಕೊಯಿಲಿಗೆ ಅನನುಕೂಲ

ಕೊಪ್ಪ: ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವೆಡೆ ಶುಕ್ರವಾರ ಸಾಧಾರಣ ಮಳೆಯಾಗಿದೆ. ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ ಇತ್ತು. ಸಂಜೆ 4ರ ವೇಳೆಗೆ ಸಣ್ಣದಾಗಿ ಮಳೆ ಶುರುವಾಯಿತು. ಗುರುವಾರ ರಾತ್ರಿ ವೇಳೆ ಅಲ್ಲಲ್ಲಿ ಮಳೆಯಾಗಿತ್ತು.

ಗೊಬ್ಬರ ಹಾಕಿ ಬೇಸಾಯ ಮಾಡಿದ ಅಡಿಕೆ ತೋಟಕ್ಕೆ ಮಳೆಯಿಂದ ಅನುಕೂಲವಾಗಿದೆ. ದೀಪಾವಳಿ ಹಬ್ಬಕ್ಕೂ ಮೊದಲು ಒಂದು ಕೊಯಿಲು ಅಡಿಕೆಗೊನೆ ತೆಗೆಯಲು ತಯಾರಿ ನಡೆಸಿದ್ದ ಕೃಷಿಕರಿಗೆ ಆತಂಕ ಎದುರಾಗಿದೆ. ಕಾಫಿ ಕಾಯಿಗಳು ಬಲಿತಿದ್ದು, ಹಣ್ಣು ಕೊಯಿಲು ಮಾಡಿ ಒಣಗಿಸಲು ಸಮಸ್ಯೆ ತಂದೊಡ್ಡಿದೆ.

ಅಡಿಕೆ ತೋಟದಲ್ಲಿ ಯಂತ್ರದ ಮೂಲಕ ಕಳೆ ತೆಗೆಯುವ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರಿಗೆ ಮಳೆ ಅಡ್ಡಿಯುಂಟು ಮಾಡಿದೆ. ಅಡಿಕೆ ಗೊನೆ ತೆಗೆಯುವುದು ತಡವಾದರೆ ಗೋಟು ಅಡಿಕೆಯಾಗಿ ಉದುರಿ ಆದಾಯ ನಷ್ಟವಾಗಬಹುದೆಂಬ ಚಿಂತೆ ಕೃಷಿಕರಿಗೆ ಎದುರಾಗಿದೆ.

261024-126-1324515161

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ