
ದುಶ್ಚಟಮುಕ್ತ ಸಮಾಜ ಗಾಂಧೀಜಿ ಕನಸು: ಶಾಸಕ ಕಿರಣ್ ಕುಮಾರ್
ಕುಂದಾಪುರ: ‘ಯುವ ಪೀಳಿಗೆಯನ್ನು ಮಾದಕ ವ್ಯಸನದಿಂದ ಮುಕ್ತಗೊಳಿಸುವುದೇ ಗಾಂಧಿ ಜಯಂತಿಯ ನಿಜವಾದ ಆಚರಣೆ. ಯುವಜನರು ಮಾದಕ ವ್ಯಸನದಿಂದ ದೂರ ಉಳಿಯುವಂತೆ ಸಮಾಜದಲ್ಲಿ ಜಾಗೃತಿ ಮೂಡಿಸುವುದು ಅಗತ್ಯ’ ಎಂದು ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಂದಾಪುರ, ಬೈಂದೂರು ತಾಲ್ಲೂಕು ಘಟಕ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್, ತಾಲ್ಲೂಕು ಜನಜಾಗೃತಿ ವೇದಿಕೆ ವತಿಯಿಂದ ಗಾಂಧಿ ಜಯಂತಿ ಅಂಗವಾಗಿ ಇಲ್ಲಿನ ಬೋರ್ಡ್ ಹೈಸ್ಕೂಲ್‌ನಲ್ಲಿ ಆಯೋಜಿಸಿದ್ದ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನಜಾಗೃತಿ ಜಾಥಾ, ಗಾಂಧಿ ಸ್ಮೃತಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
‘ಮಹಾತ್ಮ ಗಾಂಧೀಜಿ ಕಂಡಿದ್ದ ಸ್ವಚ್ಛ, ವ್ಯಸನಮುಕ್ತ ಭಾರತದ ಕನಸು ನನಸಾಗಿಸಲು ಜನಜಾಗೃತಿ ಅಗತ್ಯ. ಅವರು ಪ್ರತಿಪಾದಿಸಿದ ಸ್ವಚ್ಛತೆ, ಸಂಯಮದ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಅವರು ಹೇಳಿದರು.
ಬೈಂದೂರು ತಾಲ್ಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಸುಧಾಕರ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ‘ಗಾಂಧೀಜಿ ಅವರ ತತ್ವಗಳನ್ನು ಆಚರಣೆಗೆ ಸೀಮಿತಗೊಳಿಸದೆ, ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಜಾಥಾ ಆಯೋಜಿಸಲಾಗಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ತಾಲ್ಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಸುಬ್ರಹ್ಮಣ್ಯ ಶೆಟ್ಟಿ ಅವರು, ‘ಮನೆ ಮನೆಯಲ್ಲಿ ಜಾಗೃತಿ ಮೂಡಿದಾಗ ಮಾತ್ರ ಗಾಂಧೀಜಿ ಕಂಡ ಆದರ್ಶ ಸಮಾಜ ನಿರ್ಮಾಣ ಸಾಧ್ಯ’ ಎಂದರು.
ಜನಜಾಗೃತಿ ವೇದಿಕೆಯ ಕುಂದಾಪುರ ತಾಲ್ಲೂಕು ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಶೆಟ್ಟಿ ಶಾನ್ಕಟ್ಟು, ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಚಂದ್ರಶೇಖರ್, ಕೇಂದ್ರ ಸಮಿತಿ ಕುಂದಾಪುರ ಅಧ್ಯಕ್ಷ ಅಶೋಕ್ ಕೆರೆಕಟ್ಟೆ, ಕೇಂದ್ರ ಸಮಿತಿ ಕುಂದಾಪುರ– 2ರ ಅಧ್ಯಕ್ಷ ಸುಬ್ರಹ್ಮಣ್ಯ ಆಚಾರ್ಯ, ಕೇಂದ್ರ ಸಮಿತಿ ಬೈಂದೂರು ಅಧ್ಯಕ್ಷ ವಾಸು ಮೇಸ್ತ ಭಾಗವಹಿಸಿದ್ದರು.
ಜನಜಾಗೃತಿ ವೇದಿಕೆಯ ನೂತನ ಅಧ್ಯಕ್ಷ ಸುಬ್ರಹ್ಮಣ್ಯ ಶೆಟ್ಟಿ ಅವರ ಅಧಿಕಾರ ಹಸ್ತಾಂತರ ಪ್ರಕ್ರಿಯೆಯನ್ನು ಉಮೇಶ್ ಶೆಟ್ಟಿ ಶಾನ್ಕಟ್ಟು ನೆರವೇರಿಸಿದರು. ಬೈಂದೂರು ಯೋಜನಾಧಿಕಾರಿ ಸಂಜಯ್ ನಾಯ್ಕ್ ಸ್ವಾಗತಿಸಿದರು. ಕುಂದಾಪುರ ಯೋಜನಾಧಿಕಾರಿ ಸುಧೀರ್ ಹಂಗಳೂರು ವಂದಿಸಿದರು. ಉಮೇಶ್ ಶೆಟ್ಟಿ ನಿರೂಪಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕುಂದಾಪುರ ತಾಲ್ಲೂಕು ಘಟಕದ ಅಧ್ಯಕ್ಷ ಉಮೇಶ್ ಪುತ್ರನ್, ಕುಂದಾಪುರ ಸಂಚಾರ ಪೊಲೀಸ್ ಠಾಣೆಯ ಎಸ್‌ಐ ಸುಧಾ ಪ್ರಭು ಅವರು ಶಾಸ್ತ್ರಿ ವೃತ್ತದಲ್ಲಿರುವ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಜಾಥಾಕ್ಕೆ ಚಾಲನೆ ನೀಡಿದರು. ಶಾಸ್ತ್ರಿ ವೃತ್ತದಿಂದ ಆರಂಭವಾದ ಜಾಥಾ ಬೋರ್ಡ್ ಹೈಸ್ಕೂಲ್‌ನ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದವರೆಗೆ ನಡೆಯಿತು.
ಕುಟುಂಬ ಉಳಿದರೆ ಊರು ಉಳಿಯುತ್ತದೆ. ವ್ಯಸನ ಬಿಟ್ಟರೆ ಬದುಕು ಬೆಳಗುತ್ತದೆ. ಧರ್ಮಸ್ಥಳದ ಜನಜಾಗೃತಿ ವೇದಿಕೆಯು ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ನಿರಂತರ ಶ್ರಮಿಸುತ್ತಿದೆ ನಾಗರಾಜ್ ಶೆಟ್ಟಿ, ಜನಜಾಗೃತಿ ವೇದಿಕೆಯ ಜಿಲ್ಲಾ ನಿರ್ದೇಶಕ