
ಪ್ರಜಾವಾಣಿ ವರದಿ ಪರಿಣಾಮ: ಎಚ್ಚೆತ್ತ ಗ್ರಾಮಾಡಳಿತ, ಚರಂಡಿ ಸ್ವಚ್ಛ
ಚೇಳೂರು: ತಾಲ್ಲೂಕಿನ ಚಾಕವೇಲು ಗ್ರಾಮದ 2ನೇ ಬ್ಲಾಕ್‌ನಲ್ಲಿ ಕೊನೆಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಚರಂಡಿ ಸ್ವಚ್ಛಗೊಳಿಸಿದರು. ಈ ಭಾಗದಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಿ ಸುಮಾರು ಆರು ತಿಂಗಳಿಗೂ ಅಧಿಕ ಸಮಯವಾಗಿತ್ತು. ಇದರಿಂದಾಗಿ ಚರಂಡಿಗಳಲ್ಲಿ ಕಲುಷಿತ ನೀರು ನಿಂತು ಗಿಡಗಂಟಿ ಹಾಗೂ ಬಳ್ಳಿ ದಟ್ಟವಾಗಿ ಆವರಿಸಿತ್ತು. ಹಾವು, ಚೇಳಿನಂತಹ ವಿಷಜಂತುಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿತ್ತು. ಇದರೊಂದಿಗೆ ಸೊಳ್ಳೆ ಹಾವಳಿಯೂ ವಿಪರೀತವಾಗಿತ್ತು. ಡೆಂಗಿ ಮತ್ತು ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಹರಡುವ ಗಂಭೀರ ಭೀತಿ ಸ್ಥಳೀಯ ಗ್ರಾಮಸ್ಥರಲ್ಲಿ ಎದುರಾಗಿತ್ತು.
ಈ ಕುರಿತಾದ ಸ್ಥಳೀಯರು ಎದುರಿಸುತ್ತಿರುವ ಸಮಸ್ಯೆಗಳನ್ನು 'ಪ್ರಜಾವಾಣಿ' ಪತ್ರಿಕೆಯು ಸೆಪ್ಟಂಬರ್ 28 ರಂದು ‘ಚಾಕವೇಲು: ಅನೈರ್ಮಲ್ಯ ತಾಂಡವ’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಗೆ ಸ್ಪಂದಿಸಿದ ಗ್ರಾಮಾಡಳಿತ ಎಚ್ಚೆತ್ತುಕೊಂಡು, ಸಿಬ್ಬಂದಿಯನ್ನು ನಿಯೋಜಿಸಿ ಚರಂಡಿಗಳಲ್ಲಿ ಬೆಳೆದಿದ್ದ ಗಿಡಗಂಟಿ ತೆರವುಗೊಳಿಸಿ, ಹೂಳು ಎತ್ತಿ ಸಂಪೂರ್ಣವಾಗಿ ಸ್ವಚ್ಛಗೊಳಿಸಿದೆ.